ಉಡುಪಿ: ಅತಿವೃಷ್ಠಿಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಕೇಂದ್ರ ತಂಡ ಭೇಟಿ

Update: 2018-09-12 15:02 GMT

ಉಡುಪಿ, ಸೆ.12: ಕರ್ನಾಟಕದಲ್ಲಿ ಇತ್ತೀಚೆಗೆ ಸುರಿದ ಭಾರೀ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿ ವರದಿ ನೀಡಲು ಕೇಂದ್ರ ಸರಕಾರ ಕಳುಹಿಸಿರುವ ಹಿರಿಯ ಅಧಿಕಾರಿಗಳ ತಂಡವು ಬುಧವಾರ ಉಡುಪಿ ಜಿಲ್ಲೆಗೆ ಆಗಮಿಸಿ, ಕಾರ್ಕಳ ಮತ್ತು ಕಾಪುವಿನ ಅನೇಕ ಪ್ರದೇಶಗಳಿಗೆ ತೆರಳಿ ಪರಿಶೀಲನೆ ನಡೆಸಿತು.

ಕೇಂದ್ರ ಹಣಕಾಸು ಸಚಿವಾಲಯದ ವೆಚ್ಚ ಉಪಕಾರ್ಯದರ್ಶಿ ಭರತೇಂದು ಕುಮಾರ್ ಸಿಂಗ್, ಗ್ರಾಮೀಣಾಭಿವೃದ್ಧಿ ಸಚಿವಾಲಯದ ಉಪಕಾರ್ಯದರ್ಶಿ ಮಾಣಿಕ್‌ಚಂದ್ರ ಪಂಡಿತ್ ಮತ್ತು ರಸ್ತೆ ಸಾರಿಗೆ, ಹೆದ್ದಾರಿ ಇಲಾಖೆಯ ಪ್ರಾದೇಶಿಕ ಅಧಿಕಾರಿ ಸದಾನಂದ ಬಾಬು ಅವರನ್ನೊಳಗೊಂಡ ನಿಯೋಗವು ಮಂಳೂರಿನಿಂದ ಕಾರ್ಕಳಕ್ಕೆ ಆಗಮಿಸಿತು.

ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಕೇಂದ್ರ ತಂಡವನ್ನು ಸ್ವಾಗತಿಸಿದರು. ಜಿಲ್ಲೆಯ ವಿವಿಧೆಡೆ ಪ್ರಾಕೃತಿಕ ವಿಕೋಪದಿಂದ ಹಾನಿಗೀಡಾದ ರಸ್ತೆ, ಸೇತುವೆ, ಕಾಲುಸಂಕ ಸೇರಿದಂತೆ ಮೂಲ ಸೌಕರ್ಯ, ಬೆಳೆಹಾನಿ ಸ್ಥಳಗಳಿಗೆ ಭೇಟಿ ನೀಡಿದ ಕೇಂದ್ರ ತಂಡ ಮಾಹಿತಿಗಳನ್ನು ಸಂಗ್ರಹಿಸಿತು.

ಮೊದಲು ಮಳೆಯಿಂದ ಹಾನಿಗೀಡಾದ ಕಾರ್ಕಳ ತಾಲೂಕಿನ ಕುಕ್ಕಂದೂರು ಜಯಂತಿನಗರ ಶಾಲೆಗೆ ಕೇಂದ್ರ ತಂಡ ಭೇಟಿ ನೀಡಿ ವೀಕ್ಷಿಸಿತು. ಪೂರ್ಣ ಪ್ರಮಾಣದಲ್ಲಿ ಹಾನಿಗೊಳಗಾಗಿ, ಅಪಾಯಕಾರಿ ಸ್ಥಿತಿಯಲ್ಲಿದ್ದ ಶಾಲೆಯ ಕುರಿತು ಅಗತ್ಯ ಮಾಹಿತಿಗಳನ್ನು ಕಲೆ ಹಾಕಿತು. ಅಲ್ಲಿಂದ ಮಳೆಯಿಂದ ಹಾನಿಗೀಡಾದ ಕಾರ್ಕಳ-ಉಡುಪಿ ರಸ್ತೆಯ ಕೆಲವು ಸ್ಥಳಗಳಿಗೆ ತೆರಳಿ ಪರಿಶೀಲಿಸಿ ಹಾನಿಯ ಕುರಿತು ಮಾಹಿತಿ ಪಡೆಯಿತು.

ಬಳಿಕ ಸತತವಾಗಿ ಸುರಿದ ಭಾರೀ ಮಳೆಯಿಂದಾಗಿ ಕೊಳೆರೋಗಕ್ಕೆ ತುತ್ತಾಗಿ ಹಾನಿಗೀಡಾದ ಮಿಯಾರು ಗ್ರಾಮದ ಅಡಕೆ ತೋಟಗಳಿಗೆ ಭೇಟಿ ನೀಡಿ, ಹಾನಿಗೀಡಾದ ಅಡಿಕೆ ಮತ್ತು ಅಡಿಕೆ ಮರಗಳನ್ನು ಪರಿಶೀಲಿಸಿತು. ಅಲ್ಲದೇ, ಅಡಕೆ ಬೆಳೆಗಾರರೊಂದಿಗೆ ಮಾತುಕತೆ ನಡೆಸಿ, ಅವರ ಅಹವಾಲುಗಳನ್ನು ಆಲಿಸಿತು. ಬೆಳೆ ವಿಮೆಯಿಂದ ರೈತರಿಗಾಗಿರುವ ಪ್ರಯೋಜನಗಳ ಬಗ್ಗೆಯೂ ಸ್ಥಳೀಯ ಅಧಿಕಾರಿಗಳು ಮತ್ತು ಬೆಳೆಗಾರರಿಂದ ಮಾಹಿತಿ ಕಲೆಹಾಕಿತು.

ಅನಂತರ ಕೇಂದ್ರ ತಂಡದ ಭೇಟಿ ಹೊಸ್ಮಾರಿಗೆ: ತೀವ್ರ ಮಳೆಯಿಂದ ಹಾನಿಗೀಡಾದ ಹೊಸ್ಮಾರು-ಈದು ಸೇತುವೆ ಮತ್ತು ಸಂಪರ್ಕ ರಸ್ತೆಯನ್ನು ವೀಕ್ಷಿಸಿ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆಯಿತು. ಇಲ್ಲಿಂದ ನೂರಾಲ್‌ಬೆಟ್ಟು ಗ್ರಾಮದ ಕಂಪೆಟ್ಟು ಎಂಬಲ್ಲಿ ಮಳೆಯಿಂದ ಹಾನಿಗೀಡಾದ ಗ್ರಾಮೀಣ ಸೇತುವೆ ಮತ್ತು ಕೊಚ್ಚಿಹೋದ ಸಂಪರ್ಕ ರಸ್ತೆಯನ್ನು ಪರಿಶೀಲಿಸಿ ಅಲ್ಲಿ ನಡೆದಿರುವ ತಾತ್ಕಾಲಿಕ ಕಾಮಗಾರಿಯನ್ನು ವೀಕ್ಷಿಸಿಸಿತು.

ನೂರಾಲ್‌ಬೆಟ್ಟು ಗ್ರಾಮದ ತೀರಾ ಒಳ ಪ್ರದೇಶ ಲಾಂದೇಲು ಎಂಬಲ್ಲಿ ಸಾರ್ವಜನಿಕರು ನಿತ್ಯ ಸಂಚರಿಸುವ ಕಾಲುಸಂಕವು ಮಳೆಯಲ್ಲಿ ಕೊಚ್ಚಿ ಹೋಗಿದ್ದು, ಈ ಪ್ರದೇಶಕ್ಕೆ ವಾಹನ ಸಂಚಾರ ಅಸಾಧ್ಯವಾಗಿದ್ದರಿಂದ ಸುಮಾರು 500 ಮೀ. ದೂರದವರೆಗೆ ನಡೆದುಕೊಂಡೇ ಸಂಚರಿಸಿದ ಕೇಂದ್ರ ತಂಡದ ಅಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳು ಹಾನಿಗೀಡಾದ ಕಾಲುಸಂಕವನ್ನು ವೀಕ್ಷಿಸಿದರು.

ಅಪರಾಹ್ನ ಕೇಂದ್ರ ತಂಡವು ಶಿರ್ವ ಸಮೀಪದ ಕಳತ್ತೂರು ಗುರ್ಮೆಗೆ ಭೇಟಿ ನೀಡಿ ಮಳೆಯಿಂದ ಹಾನಿಗೀಡಾದ ಸೇತುವೆ ಸಂಪರ್ಕ ರಸ್ತೆಯನ್ನು ವೀಕ್ಷಿಸಿ, ಅಧಿಕಾರಿಗಳಿಂದ ನಷ್ಟದ ಕುರಿತು ಮಾಹಿತಿ ಪಡೆಯಿತು.

ಕಾರ್ಕಳ ಪ್ರವಾಸಿ ಮಂದಿರದಲ್ಲಿ ಕೇಂದ್ರ ತಂಡದ ಅಧಿಕಾರಿಗಳು ಜಿಲ್ಲಾಧಿಕಾರಿ ಮತ್ತು ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿತು. ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರು ಕೇಂದ್ರ ತಂಡಕ್ಕೆ ಜಿಲ್ಲೆಯಲ್ಲಿ ಅತಿವೃಷ್ಠಿಯಿಂದ ಉಂಟಾದ ಹಾನಿ ಹಾಗೂ ಪ್ರಾಕೃತಿಕ ವಿಕೋಪಗಳ ಬಗ್ಗೆ ಸಮಗ್ರವಾದ ವಿವರ ನೀಡಿದರು.

ಪ್ರಸಕ್ತ ವರ್ಷದ ಮಳೆಗಾಲದಲ್ಲಿ ಉಂಟಾದ ಪ್ರಾಕೃತಿಕ ವಿಕೋಪದಿಂದ ಉಡುಪಿ ಜಿಲ್ಲೆಯಲ್ಲಿ ಈಗಾಗಲೇ 150 ಕೋಟಿ ರೂ.ಗಳಿಗೂ ಅಧಿಕ ಹಾನಿ ಅಂದಾಜಿಸಲಾಗಿದೆ. ರಸ್ತೆ ಸೇರಿದಂತೆ ಮೂಲಸೌಕರ್ಯ, ಕೃಷಿ, ತೋಟಗಾರಿಕೆ ಮತ್ತು ಮೀನುಗಾರಿಕಾ ಕ್ಷೇತ್ರದಲ್ಲಿ ಅಧಿಕ ಹಾನಿ ಉಂಟಾಗಿದೆ. ಮೀನುಗಾರರ ಬೋಟುಗಳು ಸಾಕಷ್ಟು ದೊಡ್ಡ ಸಂಖ್ಯೆಯಲ್ಲಿ ನಷ್ಟ ಅನುಭವಿಸಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

ಪ್ರಸಕ್ತ ವರ್ಷದ ಪ್ರಾಕೃತಿಕ ವಿಕೋಪದಲ್ಲಿ ಉಡುಪಿ ಜಿಲ್ಲೆಯಲ್ಲಿ 1058 ಮನೆಗಳು ಹಾನಿಗೀಡಾಗಿದ್ದು, ಸುಮಾರು 1006 ಲಕ್ಷ ರೂ. ನಷ್ಟ ಉಂಟಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆದ ಕೇಂದ್ರ ತಂಡದ ಅಧಿಕಾರಿಗಳು, ಪ್ರಾಕೃತಿಕ ವಿಕೋಪದಿಂದ ಹಾನಿಗೀಡಾದ ಮೀನುಗಾರರ ಬೋಟುಗಳಿಗೆ ಕೇರಳದಲ್ಲಿ ಯಾವ ರೀತಿ ಪರಿಹಾರ ನೀಡಲಾಗಿದೆ ಎಂಬುದರ ಬಗ್ಗೆ ಮಾಹಿತಿ ಪಡೆಯುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದರು.

ಕೇಂದ್ರ ತಂಡದೊಂದಿಗೆ ಕುಂದಾಪುರ ಉಪವಿಭಾಗಾಧಿಕಾರಿ ಭೂಬಾಲನ್, ಜಂಟಿ ಕೃಷಿ ನಿರ್ದೇಶಕ ಕೆಂಪೇಗೌಡ, ತೋಟಗಾರಿಕೆ ಉಪನಿರ್ದೇಶಕಿ ಭುವನೇಶ್ವರಿ, ಲೋಕೋಪಯೋಗಿ ಮತ್ತು ಪಂಚಾಯತ್‌ರಾಜ್ ಇಂಜಿನಿಯ ರಿಂಗ್ ಇಲಾಖೆ ಅಧಿಕಾರಿಗಳು,ಕಾರ್ಕಳ ತಹಶೀಲ್ದಾರ್ ಮುಹಮ್ಮದ್ ಇಸಾಕ್, ಕಂದಾಯ ಇಲಾಖೆಯ ಅಧಿಕಾರಿಗಳು, ಇತರೆ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News