ವಿದೇಶಿ ವಸ್ತುಗಳ ಆಮದು ಖೇದಕರ : ಮೀನಾಕ್ಷಿ ಶಾಂತಿಗೋಡು

Update: 2018-09-12 15:21 GMT

ಪುತ್ತೂರು, ಸೆ.12: ನಾವು ವಿಜ್ಞಾನ ರಂಗದಲ್ಲಿ ವಿಶ್ವದಲ್ಲಿಯೇ ಗಣನೀಯ ಸಾಧನೆ ಮಾಡಿರುವುದು ಹೆಮ್ಮೆಯ ವಿಚಾರವಾಗಿದ್ದರೂ ವಿದೇಶದಲ್ಲಿ ತಯಾರಾಗುವ ವಸ್ತುಗಳನ್ನು ಆಮದು ಮಾಡಿಕೊಳ್ಳುತ್ತಿರುವುದು ಅತ್ಯಂತ ಖೇದಕರ. ಗುಣಮಟ್ಟದ ಸಂಶೋಧನೆಗಳ ಮೂಲಕ ದೇಶ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಇನ್ನಷ್ಟೂ ಸಾಧನೆ ಮಾಡಬೇಕಿದೆ ಎಂದು ಜಿಲ್ಲಾ ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಅವರು ಹೇಳಿದರು.

ರಾಜ್ಯ ವಿಜ್ಞಾನ ಪರಿಷತ್ತು ದಕ ಜಿಲ್ಲಾ ಸಮಿತಿ, ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಆಶ್ರಯದಲ್ಲಿ ಕಾಲೇಜು ಶಿಕ್ಷಣ ಇಲಾಖೆ ಮತ್ತು ಸಂತ ಫಿಲೋಮಿನಾ ಕಾಲೇಜಿನ ಸಹಯೋಗದಲ್ಲಿ ಬುಧವಾರ ಫಿಲೋಮಿನಾ ಕಾಲೇಜಿನ ಸಭಾಂಗಣದಲ್ಲಿ 'ಮನುಕುಲಕ್ಕಾಗಿ ವಿಜ್ಞಾನ, ತಂತ್ರಜ್ಞಾನ ಮತ್ತು ಆವಿಷ್ಕಾರ' ಎಂಬ ವಿಷಯದ ಕುರಿತು ಪದವಿ ವಿಜ್ಞಾನ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಳ್ಳಲಾದ  ವಿಭಾಗ ಮಟ್ಟದ ವಿಜ್ಞಾನ ವಸ್ತುಪ್ರದರ್ಶನ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ಕಾಲೇಜಿನ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಮುಖ್ಯಸ್ಥ ಡಾ. ಆ್ಯಂಟನಿ ಪ್ರಕಾಶ್ ಮೊಂತೇರೊ ಅವರು ಮಾತನಾಡಿ, ವಿಜ್ಞಾನ ರಂಗದ ಸಾಧನೆಗೆ ಆಸಕ್ತಿ ಮತ್ತು ಶ್ರಮ ಬಹಳ ಮುಖ್ಯ. ವೈಜ್ಞಾನಿಕ ಮನೋಭಾವನೆಯೊಂದಿಗೆ ಸಮಯದ ಮಿತಿಯಿಲ್ಲದೆ ನಿರಂತರ ಕೆಲಸ ಮಾಡುವ ಮನಸ್ಥಿತಿಯಿದ್ದಾಗ ಪ್ರಗತಿ ಪಥದಲ್ಲಿ ಮುಂದುವರಿಯಬಹುದು ಎಂದರು.

ಕಾಲೇಜಿನ ಸಂಚಾಲಕ ಆಲ್ಫ್ರೆಡ್ ಜೆ ಪಿಂಟೊ ಅವರು ಅಧ್ಯಕ್ಷತೆ ವಹಿಸಿದ್ದರು. ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯ ಕರುಣಾಕರ ರೈ, ಕಾಲೇಜಿನ ಪ್ರಾಂಶುಪಾಲ ಪ್ರೊ. ಲಿಯೋ ನೊರೊನ್ಹಾ ಅವರು ಮುಖ್ಯ ಅತಿಥಿಗಳಾಗಿ ಮಾತನಾಡಿದರು. ವಿಜ್ಞಾನ ಪರಿಷತ್ತಿನ ಜಿಲ್ಲಾಧ್ಯಕ್ಷ ಅಬೂಬಕ್ಕರ್ ಆರ್ಲಪದವು ಮತ್ತು  ಕಾರ್ಯದರ್ಶಿ ಕರುಣಾಕರ ಎಚ್ ಎಸ್ ಇದ್ದರು. 

ವಿಜ್ಞಾನ ವಸ್ತು ಪ್ರದರ್ಶನ ಸ್ಪರ್ಧೆಯ ಸಂಯೋಜಕ ಕಡಮಜಲು ಸುಭಾಶ್ ರೈ ಸ್ವಾಗತಿಸಿದರು. ಕಾಲೇಜಿನ ರಸಾಯನಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಎಡ್ವಿನ್ ಡಿ'ಸೋಜ ಎಸ್ ವಂದಿಸಿದರು. ರಚನಾ ಎನ್ ಆರ್ ನಿರೂಪಿಸಿದರು. ಸ್ಪರ್ಧೆಯಲ್ಲಿ ದಕ ಮತ್ತು ಉಡುಪಿ ಜಿಲ್ಲೆಯ ಎಂಟು ಕಾಲೇಜುಗಳ ವಿದ್ಯಾರ್ಥಿ ತಂಡಗಳು ಭಾಗವಹಿಸಿದ್ದವು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News