ಅತಿವೃಷ್ಟಿ ಪರಿಶೀಲಿಸಿ ಸಮಗ್ರ ವರದಿ ಸಲ್ಲಿಕೆ: ಕೇಂದ್ರ ತಂಡ

Update: 2018-09-12 15:28 GMT

ಮಂಗಳೂರು, ಸೆ.12: ದ.ಕ. ಜಿಲ್ಲೆಯಲ್ಲಿ ಅತಿಹೆಚ್ಚು ಮಳೆಯಿಂದ ಸಂಭವಿಸಿದ ನಾಶ, ನಷ್ಟಗಳನ್ನು ಸ್ಥಳ ಭೇಟಿಯ ವೇಳೆ ಕಂಡಿದ್ದು, ಹಾನಿ ವರದಿಯನ್ನು ಸಮಗ್ರವಾಗಿ ನೀಡುವ ಭರವಸೆಯನ್ನು ಕೇಂದ್ರ ಸರಕಾರದ ಉನ್ನತ ಅಧಿಕಾರಿಗಳ ಅಧ್ಯಯನ ತಂಡ ನೀಡಿದೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಮುಲ್ಕಿ ವ್ಯಾಪ್ತಿಯ ಪ್ರದೇಶಗಳ ಭೇಟಿಯ ಬಳಿಕ ಅಧಿಕಾರಿಗಳ ಸಭೆ ನಡೆಸಿದ ತಂಡಕ್ಕೆ ಜಿಲ್ಲೆ ಪ್ರಸಕ್ತ ಮಳೆಗಾಲದಲ್ಲಿ ಅನುಭವಿಸಿದ ಸಮಸ್ಯೆಗಳನ್ನು ಹಾಗೂ ಜಿಲ್ಲೆಯು ಸಮರ್ಥವಾಗಿ ಸವಾಲು ಎದುರಿಸಿದ ರೀತಿಯನ್ನು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಪಿಪಿಟಿ ಮೂಲಕ ವಿವರಿಸಿದರು.

ಅತಿವೃಷ್ಠಿಯ ವೇಳೆ 14 ಕ್ಯಾಂಪ್‌ಗಳನ್ನು ಯಶಸ್ವಿಯಾಗಿ ನಿರ್ವಹಿಸಲಾಗಿದ್ದು, 11 ಜೀವಹಾನಿ ಮತ್ತು 1,770 ಮನೆ ಹಾನಿಗಳಿಗೆ ಪ್ರಾಕೃತಿಕ ವಿಕೋಪ ನಿಧಿಯಡಿ ನಿಯಮಾನುಸಾರ ಪರಿಹಾರ ನೀಡಲಾಗಿದೆ ಎಂದೂ ಜಿಲ್ಲಾಧಿಕಾರಿ ವಿವರಿಸಿದರು.

ಒಟ್ಟು 213 ಕೋಟಿ ರೂ. ನಷ್ಟದ ಪ್ರಸ್ತಾಪವನ್ನು ಈಗಾಗಲೇ ಸಲ್ಲಿಸಲಾಗಿದ್ದು, ಮೂಲಭೂತ ಸೌಕರ್ಯಗಳ ಮರುನಿರ್ಮಾಣಕ್ಕೆ ಅನುದಾನ ಅತ್ಯಗತ್ಯವಾಗಿದೆ ಎಂದ ಜಿಲ್ಲಾಧಿಕಾರಿ, ತೋಟಗಾರಿಕಾ ಬೆಳೆ ಹಾನಿಯಿಂದ ಅದರಲ್ಲೂ ಮುಖ್ಯವಾಗಿ ಅಡಿಕೆ ಬೆಳೆ ನಾಶದಿಂದ ಗ್ರಾಮೀಣ ಭಾಗದ ರೈತರು ಕಂಗೆಟ್ಟಿದ್ದಾರೆ. ಇದರಿಂದ ಸುಮಾರು 39ಸಾವಿರ ಹೆಕ್ಟೆರ್ ತೋಟಗಾರಿಕಾ ಬೆಳೆ ನಾಶವಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.

ಜಿಲ್ಲೆಯ ಬಹುದೊಡ್ಡ ಬೇಡಿಕೆ ಅಡಿಕೆ ಬೆಳೆಗೆ ಪರಿಹಾರ ನೀಡಬೇಕೆಂಬುದಾಗಿದ್ದು, ಕಾಳುಮೆಣಸು ಮತ್ತು ತೆಂಗಿನ ಬೆಳೆ ಹಾಗೂ ಇತರ ಬೆಳೆಗಳಿಗೂ ಹಾನಿ ಸಂಭವಿಸಿದೆ ಎಂದು ತಿಳಿಸಿದರು.

ಗ್ರಾಮೀಣ ರಸ್ತೆಗಳ ದುರಸ್ತಿಗೆ ಪ್ರಾಕೃತಿಕ ವಿಕೋಪದಡಿ ಈಗಾಗಲೇ 3.40 ಕೋಟಿ ರೂ. ಪರಿಹಾರ ನೀಡಲಾಗಿದೆ. ಮೆಸ್ಕಾಂಗೆ ಆರು ಕೋಟಿ ರೂ. ನಷ್ಟವಾಗಿದೆ. ಇದೆಲ್ಲವುಗಳ ಜೊತೆಗೆ ಮರಗಳು ಹೆಚ್ಚಿನ ಪ್ರಮಾಣದಲ್ಲಿ ಬಿದ್ದಿರುವುದರಿಂದ ಮನೆಗಳ ಹಾನಿ ಗಮನೀಯವಾಗಿತ್ತು ಎಂದು ಜಿಲ್ಲಾಧಿಕಾರಿ ಕೇಂದ್ರ ತಂಡಕ್ಕೆ ಮನವರಿಕೆ ಮಾಡಿಕೊಟ್ಟರು.

ಸಭೆಯಲ್ಲಿ ಕೇಂದ್ರ ಸರಕಾರದ ಹಣಕಾಸು ಸಚಿವಾಲಯದ ವೆಚ್ಚ ವಿಭಾಗದ ಉಪಕಾರ್ಯದರ್ಶಿ ಭರತೇಂದು ಕುಮಾರ್ ಸಿಂಗ್, ಗ್ರಾಮೀಣಾಭಿವೃದ್ಧಿ ಸಚಿವಾಲಯದ ಉಪಕಾರ್ಯದರ್ಶಿ ಮಾಣಿಕ್ ಚಂದ್ರ ಪಂಡಿತ್ ಮತ್ತು ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯದ ಪ್ರಾದೇಶಿಕ ಅಧಿಕಾರಿ ಸದಾನಂದ ಬಾಬು ಇದ್ದರು. ಅಪರ ಜಿಲ್ಲಾಧಿಕಾರಿ ಕುಮಾರ್ ಅವರನ್ನೊಳಗೊಂಡಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಅತಿವೃಷ್ಠಿ, ಪ್ರವಾಹದಿಂದ ಸಂಭವಿಸಿದ ಹಾನಿ ಕುರಿತ ಪರಿಶೀಲನೆಗೆ ಆಗಮಿಸಿರುವ ಕೇಂದ್ರ ಸರಕಾರದ ಉನ್ನತ ಅಧಿಕಾರಿಗಳ ಅಧ್ಯಯನ ತಂಡ ಇಂದು ಮುಲ್ಕಿ ಹೋಬಳಿಯಲ್ಲಿ ಪಂಜ, ಕಿಲಿಂಜಾರು, ಅದ್ಯಪಾಡಿ, ಮಳವೂರು ಪ್ರದೇಶಗಳಿಗೆ ಭೇಟಿ ನೀಡಿ, ನೆರೆ ನೀರಿನಿಂದ ಸಂಭವಿಸಿದ ಕೃಷಿ ಹಾನಿಯನ್ನು ಪರಿಶೀಲಿಸಿತು.

ಸೆ.13ರಂದು ಜಿಲ್ಲೆಯ ವಿವಿಧೆಡೆ ಭೇಟಿ

ಕೇಂದ್ರ ಸರಕಾರದ ಉನ್ನತ ಅಧಿಕಾರಿಗಳ ಅಧ್ಯಯನ ತಂಡ ಮೊದಲ ದಿನ ಉಡುಪಿ ಮತ್ತು ದ.ಕ. ಜಿಲ್ಲೆಯ ವಿವಿಧೆಡೆ ಬುಧವಾರ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿತು. ಸೆ.13ರಂದು ಬೆಳಗ್ಗೆ 9:30ಕ್ಕೆ ಈ ತಂಡವು ಬಂಟ್ವಾಳ ತಾಲೂಕಿನ ತುಂಬೆ ವೆಂಟೆಡ್ ಡ್ಯಾಮ್‌ಗೆ ಭೇಟಿ ನೀಡಲಿದೆ. ಬಳಿಕ ಮೂಲರಪಟ್ಣದಲ್ಲಿ ಸೇತುವೆ ಕುಸಿದುಬಿದ್ದ ಸ್ಥಳಕ್ಕೂ ತಂಡ ಭೇಟಿ ನೀಡಲಿದೆ ಎಂದು ಅಪರ ಜಿಲ್ಲಾಧಿಕಾರಿ ಕುಮಾರ ತಿಳಿಸಿದ್ದಾರೆ.

ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದುವರಿದು ವಿಟ್ಲಪಡ್ನೂರು ಗ್ರಾಮಕ್ಕೆ ತಂಡ ತೆರಳಲಿದ್ದು, ಅಲ್ಲಿ ಕೊಳೆರೋಗದಿಂದ ಫಸಲು ನಷ್ಟ ಸಂಭವಿಸಿರುವ ಅಡಿಕೆ ತೋಟಗಳಿಗೆ ಭೇಟಿ ನೀಡಲಿದೆ. ಬಳಿಕ ಕಾಣಿಯಾರು ಗ್ರಾಮಕ್ಕೆ ಭೇಟಿ ನೀಡಲಿದೆ. ಅಲ್ಲಿಯೂ ಕೊಳೆರೋಗದಿಂದ ಉಂಟಾಗಿರುವ ನಷ್ಟದ ಕುರಿತು ಮಾಹಿತಿ ಸಂಗ್ರಹಿಸಲಿದೆ ಎಂದರು.

ಸುಳ್ಯ ತಾಲೂಕಿನ ಕಲ್ಲಾಜೆ ಮತ್ತು ಸುಬ್ರಹ್ಮಣ್ಯ ಭಾಗದಲ್ಲಿ ಭೂಕುಸಿತ ಸಂಭವಿಸಿರುವ ಪ್ರದೇಶಕ್ಕೆ ಕೇಂದ್ರದ ತಂಡ ಭೇಟಿ ನೀಡಲಿದೆ. ಈ ಬಗ್ಗೆ ಆಗಿರುವ ಹಾನಿಯನ್ನು ವರದಿ ಮಾಡಲಿದೆ.

ನಂತರ ತಂಡವು ಶಿರಾಡಿ ಘಾಟಿಗೆ ಭೇಟಿ ನೀಡಲಿದೆ. ಅಲ್ಲಿ ಪದೇಪದೇ ಭೂಕುಸಿತದಿಂದ ರಸ್ತೆಗೆ ಆಗಿರುವ ಹಾನಿ ಕುರಿತು ಕೇಂದ್ರ ತಂಡವು ಖುದ್ದಾಗಿ ವೀಕ್ಷಿಸಲಿದೆ. ರಸ್ತೆ ಹಾನಿ ಮತ್ತು ಕೈಗೊಳ್ಳಲು ಅಗತ್ಯವಿರುವ ಪರಿಹಾರ ಕಾರ್ಯಗಳ ಬಗ್ಗೆ ರಾಜ್ಯದ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಲಿದೆ. ಬಳಿಕ ಶಿರಾಡಿ ಮಾರ್ಗವಾಗಿ ಹಾಸನಕ್ಕೆ ತೆರಳಲಿದೆ. ಅಲ್ಲಿಂದ ಬೆಂಗಳೂರು, ದಿಲ್ಲಿಗೆ ಪ್ರಯಾಣ ಬೆಳೆಸಲಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಕುಮಾರ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News