ಧ್ವನಿವರ್ಧಕ ಬಳಸುತ್ತಿದ್ದ ಮಸೀದಿಗೆ ಬೀಗ ಜಡಿದ ಸ್ಥಳೀಯಾಡಳಿತ!

Update: 2018-09-12 15:28 GMT

ಗುರ್ಗಾಂವ್, ಸೆ.12: ಭಾರತೀಯ ವಾಯುಪಡೆಯ ಶಸ್ತ್ರಾಸ್ತ್ರ ಸಂಗ್ರಹಗಾರಕ್ಕೆ ತೀರಾ ಸಮೀಪವಿದೆ ಎಂಬ ನೆಲೆಯಲ್ಲಿ ಗುರ್ಗಾಂವ್ ನಲ್ಲಿ ಕಾರ್ಯಾಚರಿಸುತ್ತಿದ್ದ ಮಸೀದಿಯೊಂದಕ್ಕೆ ಸ್ಥಳೀಯ ನಗರ ಪಂಚಾಯತ್ ಬೀಗ ಹಾಕಿದೆ. ಭಾರತೀಯ ವಾಯುಪಡೆಯ ಶಸ್ತ್ರಾಸ್ತ್ರ ಸಂಗ್ರಹಾರದ ಸುತ್ತ ಮುನ್ನೂರು ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ಕಟ್ಟಡ ನಿರ್ಮಾಣದ ಮೇಲೆ ನಿಷೇಧ ಹೇರಿರುವ ಪಂಜಾಬ್ ಮತ್ತು ಹರ್ಯಾಣ ಉಚ್ಚ ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ನಗರ ಪಂಚಾಯತ್ ಆಯುಕ್ತರು ತಿಳಿಸಿದ್ದಾರೆ.

ಮಸೀದಿಯಲ್ಲಿ ಧ್ವನಿವರ್ಧಕವನ್ನು ಬಳಸುವುದನ್ನು ವಿರೋಧಿಸಿ ಜನರ ಗುಂಪೊಂದು ಪೊಲೀಸ್ ಆಯುಕ್ತರಿಗೆ ದೂರು ನೀಡಿತ್ತು. ಈ ಹಿನ್ನೆಲೆಯಲ್ಲಿ ಸೆಪ್ಟಂಬರ್ 5ರಂದು ಸೆಕ್ಟರ್ 5ರ ಪೊಲೀಸ್ ಠಾಣೆಯ ಅಧಿಕಾರಿ ಎರಡೂ ಗುಂಪಿನ ಜನರನ್ನು ಠಾಣೆಗೆ ಕರೆದು ಧ್ವನಿವರ್ಧಕ ಧ್ವನಿಯನ್ನು ಕಡಿಮೆ ಮಾಡುವಂತೆ ಸೂಚಿಸಿದ್ದರು ಎಂದು ಮುಸ್ಲಿಂ ಏಕ್ತಾ ಮಂಚ್ ಜಿಲ್ಲಾಧಿಕಾರಿಗೆ ಬರೆಗೆ ಪತ್ರದಲ್ಲಿ ತಿಳಿಸಿತ್ತು. ಪೊಲೀಸರ ಸೂಚನೆಯಂತೆ ನಾವು ಮಸೀದಿಯಲ್ಲಿ ಧ್ವನಿವರ್ಧಕದ ಧ್ವನಿಯನ್ನು ಕಡಿಮೆ ಮಾಡಿದ್ದೆವು. ಆದರೆ ಇದರಿಂದ ಗ್ರಾಮದ ಹೊರಗಿರುವ ಕೆಲವು ಸಂಘಟನೆಯ ಕಾರ್ಯಕರ್ತರಿಗೆ ಸಮಾಧಾನವಾಗಲಿಲ್ಲ. ಅವರಿಗೆ ಈ ಪ್ರದೇಶದಲ್ಲಿ ಮಸೀದಿ ಇರುವುದು ಇಷ್ಟವಿಲ್ಲ. ಹಾಗಾಗಿ ಅವರು ನಮ್ಮ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದಾರೆ ಮತ್ತು ನಮ್ಮನ್ನು ಹತ್ಯೆ ಮಾಡುವ ಹಾಗೂ ನಮ್ಮ ಮನೆಗಳನ್ನು ಸುಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಮುಸ್ಲಿಂ ಏಕ್ತಾ ಮಂಚ್‌ನ ಮುಖ್ಯಸ್ಥ ಹಾಜಿ ಶೆಹಝಾದ್ ಖಾನ್ ಆರೋಪಿಸಿದ್ದಾರೆ.

ಗುರ್ಗಾಂವ್ ನಲ್ಲಿ ಮೂರಂತಸ್ತಿನ ಕಟ್ಟಡದಲ್ಲಿ ಪ್ರಾರ್ಥನೆಯ ವೇಳೆ ಧ್ವನಿವರ್ಧಕವನ್ನು ಬಳಸುವುದನ್ನು ವಿರೋಧಿಸಿ ಸಂಘ ಪರಿವಾರ ಸಂಘಟನೆಗಳು ಬುಧವಾರ ಪ್ರತಿಭಟನೆ ನಡೆಸಿವೆ. ಇಲ್ಲಿ ಮೈಕ್ ಬಳಸಿ ಪ್ರಾರ್ಥನೆ ಮಾಡುವುದು ಮತ್ತು ಧ್ವನಿವರ್ಧಕವನ್ನು ಬಳಸುವುದರ ಮೇಲೆ ನಿಷೇಧ ಹೇರಬೇಕೆಂದು ಪೊಲೀಸ್ ಅಧಿಕಾರಿಗಳಿಗೆ ಬರೆದ ಪತ್ರದಲ್ಲಿ ಮನವಿ ಮಾಡಲಾಗಿದೆ ಎಂದು ಸಂಘ ಪರಿವಾರ ಮುಖಂಡರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News