ಮಾದಕ ವ್ಯಸನ ಮಾಸಾಚರಣೆ: ಸೆ.14ರಂದು ವಿದ್ಯಾರ್ಥಿಗಳಿಗೆ ವಾಕಾಥಾನ್

Update: 2018-09-12 16:13 GMT

ಉಡುಪಿ, ಸೆ.12: ಉಡುಪಿ ಜಿಲ್ಲಾ ಪೊಲೀಸ್, ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಉಡುಪಿ ಪ್ರೆಸ್ ಕ್ಲಬ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಎರಡು ತಿಂಗಳುಗಳ ಕಾಲ ನಡೆಯಲಿರುವ ಮಾದಕ ವ್ಯಸನ ವಿರೋಧಿ ಮಾಸಾಚರಣೆ ಪ್ರಯುಕ್ತ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ‘ಸೆ ನೋ ಟು ಡ್ರಗ್ಸ್’ ವಾಕಾಥಾನ್ ಜಾಥಾ ಸೆ.14ರಂದು ಬೆಳಿಗ್ಗೆ 9 ಗಂಟೆಗೆ ಉಡುಪಿ ನಗರದಲ್ಲಿ ನಡೆಯಲಿದೆ.

ಬೆಳಗ್ಗೆ 9 ಕ್ಕೆ ಇಂದ್ರಾಳಿ ರೈಲ್ವೆ ಸೇತುವೆಯ ಬಳಿ ಜಾಥಾಕ್ಕೆ ಚಾಲನೆ ದೊರೆಯಲಿದ್ದು, ಅಲ್ಲಿಂದ ಪ್ರಾರಂಭಗೊಳ್ಳುವ ಜಾಥಾವು ಎಂಜಿಎಂ ಕಾಲೇಜು, ಕಡಿಯಾಳಿ, ಕಲ್ಸಂಕ, ಸಿಟಿ ಬಸ್ ನಿಲ್ದಾಣ, ಶಿರಿಬೀಡು, ಕಿದಿಯೂರು ರಸ್ತೆ ಮೂಲಕ ಸಾಗಿ ಸರ್ವಿಸ್ ಬಸ್ ನಿಲ್ದಾಣ, ತ್ರೀವೇಣಿ ಸರ್ಕಲ್, ಕೆ.ಎಂ.ಮಾರ್ಗ, ಹಳೆ ಡಯಾನಾ ಹೊಟೇಲ್ ರಸ್ತೆ, ಕೋರ್ಟ್ ರಸ್ತೆ, ಹಳೆ ತಾಲೂಕು ಕಚೇರಿ, ಬಿಗ್ ಬಜಾರ್, ಡಯಾನಾ ಹೋಟೆಲ್, ಪುರಭವನ ಮೂಲಕ ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ಸಮಾಪನಗೊಳ್ಳಲಿದೆ.

ಬಳಿಕ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಡಾ.ಜಯಮಾಲಾ, ಉಡುಪಿ ಶಾಸಕ ರಘುಪತಿ ಭಟ್, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಏರ್‌ಟೆಲ್ ಸಂಸ್ಥೆಯ ಪ್ರಾಂತೀಯ ಉದ್ಯಮ ಮುಖ್ಯಸ್ಥ ಸದಾನಂದ ಉರಭಿನವರ್ ಹಾಗೂ ಉಡುಪಿ ಪ್ರಾಂತೀಯ ಸೇಲ್ಸ್ ಮ್ಯಾನೇಜರ್ ದೀಪಕ್ ಪಿವಿ ಭಾಗವಹಿಸಲಿದ್ದು, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ನಿಂಬರಗಿ ಅಧ್ಯಕ್ಷತೆ ವಹಿಸಲಿದ್ದಾರೆ.

ಜಾಥಾದಲ್ಲಿ ಉಡುಪಿ ನಗರದ ಆಸುಪಾಸಿನ ವಿವಿಧ ಹೈಸ್ಕೂಲ್, ಪದವಿ ಪೂರ್ವ ಹಾಗೂ ಪದವಿ ಕಾಲೇಜಿನ ಸುಮಾರು 3000 ವಿದ್ಯಾರ್ಥಿಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News