ಭಾರತ್ ಬಂದ್ ವೇಳೆ ಘರ್ಷಣೆ: ಉಡುಪಿಗೆ ಐಜಿಪಿ ಭೇಟಿ

Update: 2018-09-12 16:18 GMT

ಉಡುಪಿ, ಸೆ.12: ಕಳೆದ ಸೋಮವಾರ ವಿಪಕ್ಷಗಳು ಕರೆಕೊಟ್ಟ ಭಾರತ್ ಬಂದ್ ವೇಳೆ ಉಡುಪಿ ನಗರದಲ್ಲಿ ನಡೆದ ಘರ್ಷಣೆ, ಲಾಠಿ ಚಾರ್ಜ್‌ಗೆ ಸಂಬಂಧಿಸಿದಂತೆ ಮಾಹಿತಿ ಕಲೆ ಹಾಕಲು ಪಶ್ಚಿಮ ವಲಯ ಪೊಲೀಸ್ ಮಹಾ ನಿರೀಕ್ಷಕ ಅರುಣ್ ಚಕ್ರವರ್ತಿ ಬುಧವಾರ ಉಡುಪಿ ಭೇಟಿ ನೀಡಿದ್ದರು.

ಅಪರಾಹ್ನ 2 ಗಂಟೆ ಸುಮಾರಿಗೆ ಬನ್ನಂಜೆಯಲ್ಲಿರುವ ಎಸ್ಪಿ ಕಚೇರಿಗೆ ಚಿಕ್ಕಮಗಳೂರಿನಿಂದ ಆಗಮಿಸಿದ ಐಜಿಪಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ಬ. ನಿಂಬರಗಿ ಅವರಿಂದ ಘಟನೆಯ ಕುರಿತಂತೆ ಸಂಪೂರ್ಣ ಮಾಹಿತಿ ಗಳನ್ನು ಪಡೆದರು. ಬಳಿಕ ಲಾಠಿಚಾರ್ಜ್ ಹಾಗೂ ಘರ್ಷಣೆಯ ವೇಳೆ ಗಾಯಗೊಂಡು ಅಜ್ಜರಕಾಡು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾಂಗ್ರೆಸ್ ಮತ್ತು ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರನ್ನು ಭೇಟಿ ಮಾಡಿ ಅವರಿಂದಲೂ ಮಾಹಿತಿ ಪಡೆದುಕೊಂಡರು.

ವರದಿ ಕೇಳಿದ ಐಜಿಪಿ:  ಭಾರತ್ ಬಂದ್ ಹಿನ್ನೆಲೆಯಲ್ಲಿ ಉಡುಪಿಯಲ್ಲಿ ನಡೆದ ಘರ್ಷಣೆ, ಹಿಂಸೆ, ಬಲವಂತದ ಬಂದ್ ಕುರಿತಂತೆ ಸಮಗ್ರ ಮಾಹಿತಿ ಪಡೆಯಲು ಖುದ್ದಾಗಿ ಉಡುಪಿಗೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ ಐಜಿಪಿ ಘಟನೆಗೆ ಸಂಬಂಧಿಸಿದಂತೆ ವಿಸ್ತೃತ ವರದಿಯೊಂದನ್ನು ಸಲ್ಲಿಸುವಂತೆ ಎಸ್ಪಿಗೆ ಸೂಚನೆ ನೀಡಿದ್ದಾರೆಂದು ತಿಳಿದುಬಂದಿದೆ.

ಬಂದ್ ಹಾಗೂ ಹಲ್ಲೆಯ ಸಂದರ್ಭದಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಲ್ಲಿ ಪೊಲೀಸ್ ಇಲಾಖೆಯ ವೈಫಲ್ಯ ಇದೆಯೇ? ಯಾಕೆ ಈ ಘಟನೆ ನಡೆದಿದೆ ಎನ್ನುವ ಕುರಿತು ವರದಿ ಸಲ್ಲಿಸಬೇಕಿದೆ. ಆ ಬಳಿಕ ವರದಿಯನ್ನು ಸರಕಾರಕ್ಕೆ ಸಲ್ಲಿಸುವ ನಿರೀಕ್ಷೆ ಇದೆ ಎಂದು ಖಚಿತ ಮೂಲಗಳು ತಿಳಿಸಿವೆ.

ರಾಜಕೀಯ ಪಕ್ಷಗಳ ಮುಖಂಡರ ಭೇಟಿ: ಇದೇ ವೇಳೆ ಐಜಿಪಿ ಅರುಣ್ ಚಕ್ರವರ್ತಿ ಅವರು ಘಟನೆಗೆ ಸಂಬಂಧಿಸಿದಂತೆ ಜಿಲ್ಲೆಯ ಕಾಂಗ್ರೆಸ್ ಹಾಗೂ ಬಿಜೆಪಿ ಮುಖಂಡರೊಂದಿಗೆ ಬನ್ನಂಜೆಯ ಪ್ರವಾಸಿ ಮಂದಿರದಲ್ಲಿ ಕೆಲ ಕಾಲ ಮಾತುಕತೆ ನಡೆಸಿದರೆಂದು ಹೇಳಲಾಗಿದೆ. ಈ ವೇಳೆ ರಾಜಿ ಸಂಧಾನದ ಪ್ರಸ್ತಾಪ ವಾಯಿತೆಂದು ತಿಳಿದುಬಂದಿದೆ.

ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಮಾಜಿ ಶಾಸಕ ಗೋಪಾಲ ಭಂಡಾರಿ ಮಾತುಕತೆಯಲ್ಲಿ ಪಾಲ್ಗೊಂಡಿದ್ದರೆಂದು ಹೇಳಲಾಗಿದೆ.

ಘಟನೆಗೆ ಸಂಬಂಧಿಸಿ ದಾಖಲಾಗಿರುವ ಪ್ರಕರಣಗಳನ್ನು ಹಿಂಪಡೆಯುವ ಹಾಗೂ ರಾಜೀ ಸಂಧಾನ ಮಾಡಿಕೊಳ್ಳುವ ನಿರ್ಧಾರಕ್ಕೆ ಮುಖಂಡರು ಬಂದಿದ್ದಾರೆ ಎನ್ನಲಾಗಿದೆ.

ಘಟನೆ ನಡೆದ ಸೆ.10ರಂದು ಐಜಿಪಿ ಅವರು ಊರಿನಲ್ಲಿಲ್ಲದ ಕಾರಣ ಅವರು ಅಂದು ಉಡುಪಿಗೆ ಬಂದಿರಲಿಲ್ಲ. ಅದೇ ದಿನ ಚಿಕ್ಕಮಗಳೂರು ಎಸ್ಪಿ ಅಣ್ಣಾಮಲೈ ಅವರು ಎಡಿಜಿಪಿ ಅವರ ಆದೇಶದಂತೆ ಜಿಲ್ಲೆಗೆ ಭೇಟಿ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News