ಕೇರಳ ಸರಕಾರದ ಆಧ್ಯಾದೇಶ ರದ್ದುಗೊಳಿಸಿದ ಸುಪ್ರೀಂ: 180 ವೈದ್ಯಕೀಯ ವಿದ್ಯಾರ್ಥಿಗಳ ಭವಿಷ್ಯ ಅನಿಶ್ಚಿತತೆಯಲ್ಲಿ

Update: 2018-09-12 16:21 GMT

ಹೊಸದಿಲ್ಲಿ, ಸೆ.12: ಅವ್ಯವಹಾರ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೇರಳದ ಎರಡು ಮೆಡಿಕಲ್ ಕಾಲೇಜುಗಳ 180 ವಿದ್ಯಾರ್ಥಿಗಳ ಪ್ರವೇಶ ಪ್ರಕ್ರಿಯೆಯನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿ, ಈ ಕುರಿತು ಕೇರಳ ಸರಕಾರ ಹೊರಡಿಸಿದ್ದ ಆಧ್ಯಾದೇಶವನ್ನು ತಳ್ಳಿಹಾಕಿದೆ.

ಕೇರಳದ ಕಣ್ಣೂರು ಮೆಡಿಕಲ್ ಕಾಲೇಜು ಮತ್ತು ಕರುಣಾ ಮೆಡಿಕಲ್ ಕಾಲೇಜುಗಳಲ್ಲಿ ವೈದ್ಯಕೀಯ ಶಿಕ್ಷಣಕ್ಕಾಗಿ 180 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದರು. ಆದರೆ ಇವರಲ್ಲಿ ಕೆಲವು ವಿದ್ಯಾರ್ಥಿಗಳು ನಕಲಿ ಪ್ರಮಾಣಪತ್ರ ಸಲ್ಲಿಸಿ ಪ್ರವೇಶ ಪಡೆದಿದ್ದಾರೆ. ಅಲ್ಲದೆ ವ್ಯಾಪಕ ಪ್ರಮಾಣದ ಅವ್ಯವಹಾರ ನಡೆದಿದ್ದು ‘ಸಮಾನತೆಯ ತತ್ವ’ವನ್ನು ಮೀರಿ ಪ್ರವೇಶ ಪ್ರಕ್ರಿಯೆ ನಡೆಸಲಾಗಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಖಾಸಗಿ ಕಾಲೇಜುಗಳ ಪ್ರವೇಶ ಪ್ರಕ್ರಿಯೆ ಮೇಲ್ವಿಚಾರಣೆ ಸಮಿತಿ ಕಳೆದ ಮಾರ್ಚ್‌ನಲ್ಲಿ ಈ ಕಾಲೇಜುಗಳ ಪ್ರವೇಶ ಪ್ರಕ್ರಿಯೆಯನ್ನು ರದ್ದುಗೊಳಿಸಿತ್ತು. ಈ ಎರಡು ಕಾಲೇಜುಗಳು ಕಾರ್ಯವಿಧಾನವನ್ನು ಪಾಲಿಸಲು ವಿಫಲವಾಗಿದೆ ಎಂದು ತಿಳಿಸಿದ್ದ ಸುಪ್ರೀಂಕೋರ್ಟ್, ಈ ನಿರ್ಧಾರವನ್ನು ಎತ್ತಿಹಿಡಿದಿತ್ತು.

ಆದರೆ , ಕಳೆದ ಎಪ್ರಿಲ್‌ನಲ್ಲಿ ನ್ಯಾಯಾಲಯದ ತೀರ್ಪನ್ನು ಅನೂರ್ಜಿತಗೊಳಿಸಿದ ಕೇರಳದ ವಿಧಾನಸಭೆ, ಪ್ರವೇಶ ಪ್ರಕ್ರಿಯೆಯ ಸ್ಥಿತಿಗತಿ ಮೊದಲಿನಂತೆಯೇ ಮುಂದುವರಿಯುತ್ತದೆ ಎಂಬ ಆಧ್ಯಾದೇಶವನ್ನು ಜಾರಿಗೊಳಿಸಿತು. ರಾಜ್ಯ ಸರಕಾರದ ಆಧ್ಯಾದೇಶವು ಸಮಾನತೆಯ ತತ್ವಕ್ಕೆ ವಿರೋಧವಾಗಿದೆ ಎಂದು ತಿಳಿಸಿದ್ದ ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ (ಎಂಸಿಐ), ಇದರ ವಿರುದ್ಧ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿತ್ತು.

 ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಪೀಠವು, ಆಧ್ಯಾದೇಶವು ಸರಕಾರದ ಅಧಿಕಾರ ವ್ಯಾಪ್ತಿಯಿಂದ ಹೊರತಾಗಿದ್ದು ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್‌ನ ಆದೇಶಗಳಿಗೆ ವಿರುದ್ಧವಾಗಿದೆ ಎಂದು ತಿಳಿಸಿ ಆಧ್ಯಾದೇಶವನ್ನು ರದ್ದುಗೊಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News