ಸಚಿವ ಸಿಧುಗೆ ಮತ್ತೊಂದು ಕಂಟಕ

Update: 2018-09-13 03:44 GMT

ಹೊಸದಿಲ್ಲಿ, ಸೆ. 13: ಮಾಜಿ ಕ್ರಿಕೆಟರ್ ಹಾಗೂ ಪಂಜಾಬ್ ಸಚಿವ ನವಜ್ಯೋತ್ ಸಿಂಗ್ ಸಿಧು ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ.

1988ರಲ್ಲಿ ಬೀದಿ ಜಗಳದಲ್ಲಿ ಪಾಟಿಯಾಲಾ ನಿವಾಸಿ ಗುರ್ನಮ್ ಸಿಂಗ್ ಎಂಬ ವ್ಯಕ್ತಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಿಧು ಅವರಿಗೆ ಕೇವಲ 1000 ರೂಪಾಯಿ ದಂಡ ವಿಧಿಸಿ, ಖುಲಾಸೆಗೊಳಿಸಿದ ತೀರ್ಪನ್ನು ಮರುಪರಿಶೀಲಿಸುವಂತೆ ಆಗ್ರಹಿಸಿ ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂಕೋರ್ಟ್ ವಿಚಾರಣೆಗೆ ಸ್ವೀಕರಿಸಿದೆ.

ಸಿಧು ವಿರುದ್ಧ ಹತ್ಯೆ ಪ್ರಕರಣದಂಥ ಕಠಿಣ ಆರೋಪ ಹೊರಿಸಲು ಸೂಕ್ತ ಪುರಾವೆಗಳಿಲ್ಲ ಎಂದು ತೀರ್ಪಿನಲ್ಲಿ ಹೇಳಲಾಗಿತ್ತು.

ಈ ತೀರ್ಪಿನ ಪರಾಮರ್ಶೆ ಕೋರಿ ಮೃತ ವ್ಯಕ್ತಿಯ ಕುಟುಂಬ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ.ಎಂ. ಖನ್ವೀಲ್ಕರ್ ಮತ್ತು ಸಂಜಯ್‌ ಕಿಶನ್ ಕೌಲ್ ಅವರಿದ್ದ ನ್ಯಾಯಪೀಠ, ಸಿಧು ಅವರಿಗೆ ನೋಟಿಸ್ ನೀಡಿದೆ. ಈ ಆದೇಶವನ್ನು ಬುಧವಾರ ಸುಪ್ರೀಂಕೋರ್ಟ್ ವೆಬ್ ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ.

ಪ್ರಕರಣದ ಬಗ್ಗೆ ಮೇ 15ರಂದು ಸುಪ್ರೀಂಕೋರ್ಟ್ ನೀಡಿದ ತೀರ್ಪಿನಿಂದ ನಿರಾಳವಾಗಿದ್ದ ಸಿಧು, ಅಮರೀಂದರ್ ಸಿಂಗ್ ನೇತೃತ್ವದ ಪಂಜಾಬ್ ಸರ್ಕಾರದಲ್ಲಿ ಸಚಿವರಾಗಿ ಮುಂದುವರಿದಿದ್ದರು. "ನಮಗೆ ಅಸಮಾಧಾನವಾಗಿದೆ. ಆದರೆ ನಮ್ಮ ಕುಟುಂಬ ದೇವರ ಇಚ್ಛೆ ಎಂದು ಪರಿಗಣಿಸಿ ತೀರ್ಪು ಒಪ್ಪಿಕೊಂಡಿದೆ" ಎಂದು ಗುರ್ನಮ್ ಸಿಂಗ್ ಅವರ ಮಗ ನರ್ವೀಂದರ್ ಸಿಂಗ್ ಪ್ರತಿಕ್ರಿಯಿಸಿದ್ದರು,

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News