​ಡಿಜಿಪಿ ಕಾರು ಗುರುತಿಸದ ಇಬ್ಬರು ಪೊಲೀಸ್ ಅಧಿಕಾರಿಗಳ ಅಮಾನತು

Update: 2018-09-13 03:54 GMT

ನೋಯ್ಡ, ಸೆ. 13: ಉತ್ತರ ಪ್ರದೇಶ ಪೊಲೀಸ್ ಮಹಾನಿರ್ದೇಶಕರ ಕಾರನ್ನು ಗುರುತಿಸಲಿಲ್ಲ ಎಂಬ ಕಾರಣಕ್ಕೆ ಅಶಿಸ್ತು ಆರೋಪದಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.

ಡಿಜಿಪಿ ಒ.ಪಿ.ಸಿಂಗ್ ಅವರು ದೆಹಲಿಯ ಸಭೆಯೊಂದರಲ್ಲಿ ಪಾಲ್ಗೊಳ್ಳಲು ನೋಯ್ಡ ಮೂಲಕ ಹಾದುಹೋಗುವ ವೇಳೆ ಈ ಘಟನೆ ನಡೆದಿದೆ ಎಂದು ಗೌತಮ್‌ಬುದ್ಧ ನಗರದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಅಮಾನತುಗೊಂಡಿರುವ ಪಿಎಸ್‌ಐ ಹಾಗೂ ಕಾನ್‌ಸ್ಟೇಬಲ್ ಸೆಕ್ಟರ್ 39 ಠಾಣೆಯ ಸಿಬ್ಬಂದಿಯಾಗಿದ್ದು, ಅಮ್ರಪಾಲಿ ಪೊಲೀಸ್ ಚೆಕ್‌ಪೋಸ್ಟ್ ಬಳಿ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಬುಧವಾರ ಮಧ್ಯಾಹ್ನ 2.30ರ ವೇಳೆಗೆ ಡಿಜಿಪಿ ಕಾರನ್ನು ಗುರುತಿಸುವಲ್ಲಿ ಇವರು ವಿಫಲರಾಗಿದ್ದರು ಎಂದು ಹಿರಿಯ ಎಸ್ಪಿ ಅಜಯ್‌ಪಾಲ್ ಶರ್ಮಾ ಹೇಳಿದ್ದಾರೆ.

"ಪಿಎಸ್‌ಐ ಹಾಗೂ ಪೇದೆ ಕರ್ತವ್ಯದ ವೇಳೆ ಪೊಲೀಸ್ ಟೊಪ್ಪಿ ಧರಿಸಿದೇ ಅದನ್ನು ಜೀಪಿನಲ್ಲಿ ಇಟ್ಟಿದ್ದರು. ಅವರು ಡಿಜಿಪಿ ಕಾರನ್ನು ಗುರುತಿಸುವಲ್ಲಿ ವಿಫಲರಾಗಿದ್ದು, ಇಡೀ ಘಟನೆಯನ್ನು ಅವರು ತೀರಾ ಲಘುವಾಗಿ ಪರಿಗಣಿಸಿದ್ದರು. ಆದ್ದರಿಂದ ಅಶಿಸ್ತಿನ ಕಾರಣಕ್ಕೆ ಅಮಾನತುಗೊಳಿಸಲಾಗಿದೆ" ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಎಸ್‌ಐ ಹಾಗೂ ಪೇದೆ ಡಿಜಿಪಿ ಜತೆ ವಾಗ್ವಾದಕ್ಕೆ ಇಳಿದಿದ್ದರು ಎಂಬ ವರದಿಗಳನ್ನು ಅವರು ಅಲ್ಲಗಳೆದಿದ್ದಾರೆ. ವಾಹನದ ಬಳಿಗೆ ಬಂದ ಬಳಿಕವಷ್ಟೇ ಪೊಲೀಸ್ ಮುಖ್ಯಸ್ಥರನ್ನು ಅವರು ಗುರುತಿಸಿದ್ದಾರೆ ಎಂದು ಹೇಳಿದ್ದಾರೆ.

ಪ್ರಧಾನಮಂತ್ರಿ ಭದ್ರತೆಯ ಎಸ್‌ಪಿಜಿ, ರಾಷ್ಟ್ರೀಯ ವಿಪತ್ತು ಸ್ಪಂದನೆ ಪಡೆ ಮತ್ತು ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ ಸೇರಿದಂತೆ ಹಲವು ವಿಭಾಗಗಳಲ್ಲಿ ಕರ್ತವ್ಯ ನಿರ್ವಹಿಸಿರುವ ಒ.ಪಿ.ಸಿಂಗ್ ಅವರನ್ನು ಕಳೆದ ಜನವರಿ ಒಂದರಂದು ಉತ್ತರ ಪ್ರದೇಶ ಪೊಲಿಸ್ ಮಹಾನಿರ್ದೇಶಕರಾಗಿ ನೇಮಕ ಮಾಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News