ಮಂಗಳೂರು: ಜಮೀಯ್ಯತುಲ್ ಫಲಾಹ್‌ನಿಂದ ವಿದ್ಯಾರ್ಥಿ ವೇತನ ವಿತರಣೆ

Update: 2018-09-13 14:15 GMT

ಮಂಗಳೂರು, ಸೆ.13: ಜಮೀಯ್ಯತುಲ್ ಫಲಾಹ್ ಮಂಗಳೂರು ತಾಲೂಕು ಘಟಕದ ವತಿಯಿಂದ ಸುಮಾರು 55 ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಕಾರ್ಯಕ್ರಮವು ಗುರುವಾರ ನಗರದ ಜಮೀಯ್ಯತುಲ್ ಫಲಾಹ್ ಸಭಾಂಗಣದಲ್ಲಿ ಜರುಗಿತು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಜಮೀಯ್ಯತುಲ್ ಫಲಾಹ್ ಮಂಗಳೂರು ನಗರ ಘಟಕದ ಕೋಶಾಧಿಕಾರಿ ಮುಹಮ್ಮದ್ ಹನೀಫ್ ಮಾತನಾಡಿ ಮುಸ್ಲಿಂ ಹೆಣ್ಣು ಮಕ್ಕಳು ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡುತ್ತಿದ್ದಾರೆ. ಸರಕಾರದ ವಿವಿಧ ಸೌಲಭ್ಯ ಪಡೆದು ಉನ್ನತ ಶಿಕ್ಷಣಕ್ಕೂ ದಾಪುಗಾಲಿಡು ತ್ತಿದ್ದಾರೆ. ಆದರೆ ವೈವಾಹಿಕ ಜೀವನಕ್ಕೆ ಪದಾರ್ಪಣೆ ಮಾಡುವ ನೆಪದಲ್ಲಿ ಶಿಕ್ಷಣವನ್ನು ಅರ್ಧದಲ್ಲಿ ಮೊಟಕುಗೊಳಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಬಾರದು, ವೈವಾಹಿಕ ಬದುಕಿನ ಪದಾರ್ಪಣೆಯೊಂದಿಗೆ ಉನ್ನತ ಶಿಕ್ಷಣವನ್ನು ಪೂರ್ತಿಗೊಳಿಸಲು ಮನಸ್ಸು ಮಾಡಬೇಕು ಎಂದರು.

ಮುಸ್ಲಿಂ ಗಂಡು ಮಕ್ಕಳು ಕೂಡಾ ಶಿಕ್ಷಣದಲ್ಲಿ ಯಶಸ್ಸು ಕಾಣಬೇಕು. ಉನ್ನತ ಶಿಕ್ಷಣ ಪಡೆದು ಎಲ್ಲರೂ ಸರಕಾರಿ ಉದ್ಯೋಗ ಪಡೆಯುವ ಗುರಿ ಹೊಂದಬೇಕು ಮತ್ತು ಸಮುದಾಯದ ಶಕ್ತಿಯಾಗಿ ಹೊರಹೊಮ್ಮಬೇಕು ಎಂದು ಮುಹಮ್ಮದ್ ಹನೀಫ್ ಹೇಳಿದರು.

ಜಮೀಯ್ಯತುಲ್ ಫಲಾಹ್ ದ.ಕ. ಮತ್ತು ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಕೆ.ಶಾಹುಲ್ ಹಮೀದ್ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಮೀಯ್ಯತುಲ್ ಫಲಾಹ್‌ನ ಮಂಗಳೂರು ತಾಲೂಕು ಘಟಕದ ಅಧ್ಯಕ್ಷ ಹಾಜಿ ಇಬ್ರಾಹೀಂ ಕೋಡಿಜಾಲ್, ದಮ್ಮಾಮ್ ಘಟಕದ ಅಬ್ದುಲ್ಲತೀಫ್ ಶುಭ ಹಾರೈಸಿದರು. ವೇದಿಕೆಯಲ್ಲಿ ಜಿಲ್ಲಾ ಕಾರ್ಯದರ್ಶಿ ಸಲೀಂ ಹಂಡೇಲು, ತಾಲೂಕು ಕೋಶಾಧಿಕಾರಿ ಕೆ.ಎಂ.ಕೆ.ಮಂಜನಾಡಿ, ನಗರ ಕಾರ್ಯದರ್ಶಿ ಜಮಾಲ್ ಕುದ್ರೋಳಿ, ಉಪಸ್ಥಿತರಿದ್ದರು.

ತಾಲೂಕು ಕಾರ್ಯದರ್ಶಿ ಎಂ.ಎಚ್.ಮಲಾರ್ ಸ್ವಾಗತಿಸಿದರು. ಅನ್ವರ್ ಸಾಹೇಬ್ ಕಿರಾಅತ್ ಪಠಿಸಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News