ದ.ಕ.ಜಿಲ್ಲೆಯ ವಿವಿಧೆಡೆ ಕೇಂದ್ರದ ತಂಡದಿಂದ ಅತಿವೃಷ್ಟಿ ಸಮೀಕ್ಷೆ

Update: 2018-09-13 14:16 GMT

ಮಂಗಳೂರು, ಸೆ.13: ಪ್ರಸಕ್ತ ಸಾಲಿನಲ್ಲಿ ಸುರಿದ ಭಾರೀ ಮಳೆಗೆ ದ.ಕ.ಜಿಲ್ಲೆಯ ವಿವಿಧಡೆ ಸಂಭವಿಸಿದ ಅತಿವೃಷ್ಟಿಯ ಬಗ್ಗೆ ಸಮೀಕ್ಷೆ ನಡೆಸಲು ಕೇಂದ್ರ ಸರಕಾರದಿಂದ ಆಗಮಿಸಿದ ಹಿರಿಯ ಅಧಿಕಾರಿಗಳ ತಂಡವು ಗುರುವಾರ ಮಂಗಳೂರು, ಬಂಟ್ವಾಳ, ಪುತ್ತೂರು, ಸುಳ್ಯ ತಾಲೂಕಿನ ಹಲವು ಕಡೆ ಭೇಟಿ ನೀಡಿ ಪರಿಶೀಲಿಸಿತು.

ಕೇಂದ್ರದಿಂದ ಆಗಮಿಸಿದ ತಂಡಕ್ಕೆ ದ.ಕ. ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ನೇತೃತ್ವ ವಿವಿಧ ಇಲಾಖೆಯ ಜಿಲ್ಲಾಮಟ್ಟದ ಅಧಿಕಾರಿಗಳು ಸಮಗ್ರ ಮಾಹಿತಿ ನೀಡಿದರು.

ನಗರಕ್ಕೆ ನೀರು ಪೂರೈಸುವ ತುಂಬೆ ಡ್ಯಾಮ್  ರೀಟೈನಿಂಗ್ ವಾಲ್ ಕುಸಿದಿರುವುದನ್ನು ಕೇಂದ್ರದ ತಂಡವು ಪರಿಶೀಲಿಸಿತು. ಬಳಿಕ ಈ ತಂಡವು ಮುಲ್ಲರಪಟ್ಣ ಸೇತುವೆ ಮುರಿದು ಬಿದ್ದಿರುವುದನ್ನು ಹಾಗೂ ಇದರಿಂದ ಸಂಭವಿಸಿದ ಸಂಪರ್ಕ ಕೊರತೆ ಮತ್ತು ತಕ್ಷಣಕ್ಕೆ ಜನರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿರುವ ಬಗ್ಗೆ ಮಾಹಿತಿಯನ್ನು ಪಡೆಯಿತು.

ವಿಟ್ಲ ಪಡ್ನೂರ್ ಗ್ರಾಮದಲ್ಲಿ ಅಡಿಕೆ ಕೊಳೆ ರೋಗದಿಂದ ಸಂಭವಿಸಿರುವ ನಾಶ ಹಾಗೂ ನಷ್ಟದ ಬಗ್ಗೆ ಮಾಹಿತಿ ಪಡೆದರು. ಕಾಣಿಯೂರಿನ ಅಡಿಕೆ ತೋಟಕ್ಕೂ ಭೇಟಿ ನೀಡಿದ ತಂಡ ಅಡಿಕೆ ಬೆಳೆಯ ಬಗ್ಗೆ ಮಾಹಿತಿಯನ್ನು ಪಡೆಯಿತು. ಅಲ್ಲದೆ ಇಂದಬೆಟ್ಟು ಗ್ರಾಪಂ ವ್ಯಾಪ್ತಿಯ ಕಲ್ಲಾಜೆ ಶಾಲೆಯ ಸಂಪರ್ಕ ರಸ್ತೆಯ ಬದಿ ಮಣ್ಣು ಕುಸಿತದಿಂದ ಆಗಿರುವ ಹಾನಿಯನ್ನು ಪರಿಶೀಲಿಸಿತು.

ಮಂಗಳೂರು-ಬೆಂಗಳೂರಿನ ಸಂಪರ್ಕ ರಸ್ತೆಯಾಗಿರುವ ಶಿರಾಡಿ ಘಾಟಿ ಪ್ರದೇಶದಲ್ಲಿ ಸಂಭವಿಸಿರುವ ಭೂಕುಸಿತವನ್ನು ಪರಿಶೀಲಿಸಿದ ತಂಡವು ಬಳಿಕ ಹಾಸನದ ಸಕಲೇಶಪುರದಲ್ಲಿ ಸಂಭವಿಸಿರುವ ಅತಿವೃಷ್ಠಿ ಪರಿಶೀಲನೆಗೆ ತೆರಳಿತು.

ಕೇಂದ್ರ ಆರ್ಥಿಕ ಸಚಿವಾಲಯದ ಉಪಕಾರ್ಯದರ್ಶಿ ಭರತೇಂದು ಕುಮಾರ್ ಸಿಂಗ್, ಗ್ರಾಮೀಣಾಭಿವೃದ್ಧಿ ಸಚಿವಾಲಯದ ಉಪ ಕಾರ್ಯದರ್ಶಿ ಮಾಣಿಕ್ ಚಂದ್ರ ಪಂಡಿತ್, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಇಲಾಖೆಯ ಪ್ರಾದೇಶಿಕ ಅಧಿಕಾರಿ ಸದಾನಂದ ಬಾಬು ಈ ತಂಡದಲ್ಲಿದ್ದರು.

ತಂಡದೊಂದಿಗೆ ದ.ಕ.ಜಿಲ್ಲಾ ಅಪರ ಜಿಲ್ಲಾಧಿಕಾರಿ ಕುಮಾರ್, ಪುತ್ತೂರು ಉಪವಿಭಾಗಾಧಿಕಾರಿ ಕೃಷ್ಣಮೂರ್ತಿ, ಕೃಷಿ ಮತ್ತು ತೋಟಗಾರಿಕೆ ಹಾಗೂ ಲೋಕೋಪಯೋಗಿ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News