ಮುಸ್ಲಿಮರ ಮನೆಗಳ ಬಾಗಿಲಿಗೆ ಕ್ಯುಆರ್ ಕೋಡ್ ಗಳನ್ನು ಅಳವಡಿಸಿದ ಚೀನಾ ಸರಕಾರ

Update: 2018-09-14 08:34 GMT

ಲಂಡನ್, ಸೆ.14: ತನ್ನ ದೇಶದಲ್ಲಿರುವ ಉಯಿಘರ್ ಮುಸ್ಲಿಂ ಸಮುದಾಯದ ಮಂದಿಯ ವೈಯಕ್ತಿಕ ಮಾಹಿತಿಗಳನ್ನು ತಕ್ಷಣ ಪಡೆಯಲು ಅನುಕೂಲ ಕಲ್ಪಿಸುವ ಸಲುವಾಗಿ ಚೀನಾದ ಆಡಳಿತವು ಈ ಸಮುದಾಯದ ಮನೆಗಳಲ್ಲಿ ಕ್ಯುಆರ್ ಕೋಡ್ ಗಳನ್ನು ಅಳವಡಿಸುತ್ತಿದೆ ಎಂದು ಹ್ಯೂಮನ್ ರೈಟ್ಸ್ ವಾಚ್ ವರದಿ ತಿಳಿಸಿದೆ.

ಅಧಿಕಾರಿಗಳು ಈ ಸ್ಮಾರ್ಟ್ ಡೋರ್ ಪ್ಲೇಟ್ ಗಳನ್ನು ಮೊಬೈಲ್ ಸಾಧನದಿಂದ ಸ್ಕ್ಯಾನ್ ಮಾಡಿ ನಂತರ ಮನೆಯಲ್ಲಿನ ನಿವಾಸಿಗಳ ಮೇಲೆ ನಿಗಾ ಇರಿಸುತ್ತಿದ್ದಾರೆಂದು ಹೇಳಲಾಗಿದೆ.

ಈ ಕ್ಯುಆರ್ ಕೋಡ್ ಗಳು ಕೆಲವು ಪ್ರದೇಶಗಳಲ್ಲಿ ಎಲ್ಲಾ ಮನೆಗಳಲ್ಲಿ ಕಂಡು ಬರುತ್ತಿದ್ದು, ಜನಸಂಖ್ಯೆ ನಿಯಂತ್ರಣ ಹಾಗೂ ವಿವಿಧ ಸೇವೆಗಳ ಪೂರೈಕೆಗೆ ಉಪಯೋಗಿಸಲಾಗುತ್ತಿದೆ ಎಂದು ಚೀನಾದ ಅಧಿಕಾರಿಗಳು ಹೇಳುತ್ತಿದ್ದಾರೆ.

ಕಳೆದ ವರ್ಷದ ಬೇಸಿಗೆ ಸಮಯದಿಂದ ಎಲ್ಲಾ ಮನೆಗಳಲ್ಲೂ ಕ್ಯುಆರ್ ಕೋಡ್ ಇದೆ. ಪ್ರತಿ ಎರಡು ದಿನಗಳಿಗೊಮ್ಮೆ ಅಥವಾ ಪ್ರತಿ ದಿನ ಅಧಿಕಾರಿಗಳು ಬಂದು ಈ ಕೋಡ್ ಸ್ಕ್ಯಾನ್ ಮಾಡಿ ಅಲ್ಲಿ ಎಷ್ಟು ಜನರು ವಾಸಿಸುತ್ತಿದ್ದಾರೆಂದು ತಿಳಿದು ಮನೆಯಲ್ಲಿ ಬೇರೆ ಯಾರಾದರೂ ಇದ್ದರೆ ನೀವೇಕೆ ಇಲ್ಲಿದ್ದೀರಿ ಎಂದು ಪ್ರಶ್ನಿಸಿ ಮತ್ತೆ ಸಂಜೆ ಬಂದು ತಪಾಸಣೆ ನಡೆಸುತ್ತೀರಿ ಎಂದು ಅಲ್ಲಿಂರ ಬೇರೆ ಕಡೆ ಸ್ಥಳಾಂತರಗೊಂಡಿರುವ ವ್ಯಕ್ತಿಯೊಬ್ಬರು ವಿವರಿಸುತ್ತಾರೆ.

ಜನರು ಪಾಸ್ ಪೋರ್ಟ್ ಅಥವಾ ಗುರುತು ಚೀಟಿಗಾಗಿ ಅರ್ಜಿ ಸಲ್ಲಿಸಿದಾಗ ಅಥವಾ ಪೊಲೀಸ್ ವಿಚಾರಣೆ ವೇಳೆ ಅಧಿಕಾರಿಗಳು ಬಯೋಮೆಟ್ರಿಕ್ ಡಾಟಾ, ಡಿಎನ್‍ಎ ಮತ್ತು ಧ್ವನಿ ಸ್ಯಾಂಪಲ್ ಗಳನ್ನು ಸಂಗ್ರಹಿಸುತ್ತಿದ್ದಾರೆಂದು ಹೇಳಲಾಗಿದೆ.

ಚೀನಾದ ಕ್ಸಿಂಜಿಯಾಂಗ್ ಪ್ರಾಂತ್ಯದಲ್ಲಿ ವಾಸಿಸುತ್ತಿರುವ ಅಲ್ಪಸಂಖ್ಯಾತರ ವಿರುದ್ಧದ ಸಾಮೂಹಿಕ ಭದ್ರತಾ ಕಾರ್ಯಾಚರಣೆಯ ಭಾಗವಾಗಿ  ಈ ಬೆಳವಣಿಗೆ ನಡೆದಿದೆ.  ಚೀನಾ ಉಯಿಘರ್ ಪ್ರಾಂತ್ಯದಲ್ಲಿನ ಅಲ್ಪಸಂಖ್ಯಾತರನ್ನು ಅಕ್ರಮ ದಿಗ್ಬಂಧನದಲ್ಲಿರಿಸಿ ಅವರ ಧಾರ್ಮಿಕ ಪದ್ಧತಿಗಳನ್ನು ಅನುಸರಿಸುವುದರ ಮೇಲೆ ನಿಯಂತ್ರಣಗಳನ್ನು ಹೇರಿದೆಯೆಂಬ ವರದಿಗಳು ಈಗಾಗಲೇ ಹೊರಬಿದ್ದಿರುವುದನ್ನೂ ಹ್ಯೂಮನ್ ರೈಟ್ಸ್ ವಾಚ್ ಉಲ್ಲೇಖಿಸಿದೆ.

ಕ್ಸಿನ್ಜಿಯಾಂಗ್ ಪ್ರಾಂತ್ಯದ ದಿಗ್ಬಂಧನ ಶಿಬಿರಗಳಲ್ಲಿ ಕನಿಷ್ಠ 10 ಲಕ್ಷ ಮಂದಿಯನ್ನು ಇರಿಸಿ ಅವರ ಮಾನವ ಹಕ್ಕುಗಳನ್ನು ಉಲ್ಲಂಘನೆ ಮಾಡಲಾಗಿದೆ ಎಂದು  ವಿಶ್ವ ಸಂಸ್ಥೆಯ ಮಾನವ ಹಕ್ಕು ಮಂಡಳಿ ಕೂಡ  ಕಳವಳ ವ್ಯಕ್ತಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News