ಪರವಾನಿಗೆಯಿಲ್ಲದ ಬಸ್‌ಗಳು ಸ್ಟೇಟ್‌ಬ್ಯಾಂಕ್‌ವರೆಗೆ ಸಂಚಾರದ ವಿರುದ್ಧ ದೂರು

Update: 2018-09-14 12:32 GMT

ಮಂಗಳೂರು, ಸೆ.14: ಪರವಾನಿಗೆಯಿಲ್ಲದ ಕೆಲವು ಬಸ್ಸುಗಳು ಸ್ಟೇಟ್‌ಬ್ಯಾಂಕ್‌ವರೆಗೆ ಸಂಚರಿಸುತ್ತದೆ. ಅದೇ ಸ್ಟೇಟ್‌ಬ್ಯಾಂಕ್‌ವರೆಗೆ ಪರವಾನಿಗೆಯಿರುವ ಕೆಲವು ಬಸ್‌ಗಳು ಕಂಕನಾಡಿ, ಮಲ್ಲಿಕಟ್ಟೆಯವರೆಗೆ ಸಂಚರಿಸುವುದರಿಂದ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ ಎಂಬ ದೂರು ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಶುಕ್ರವಾರ ನಡೆದ ಪೊಲೀಸ್ ಫೋನ್ ಇನ್ ಕಾರ್ಯಕ್ರಮದಲ್ಲಿ ಕೇಳಿ ಬಂತು.

ಇದಕ್ಕೆ ಪ್ರತಿಕ್ರಿಯಿಸಿದ ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್ ಈ ಬಗ್ಗೆ ಆರ್‌ಟಿಒ ಗಮನಕ್ಕೆ ತಂದು ಸೂಕ್ತ ಕ್ರಮಕ್ಕೆ ಸೂಚಿಸಲಾಗುವುದು ಎಂದು ಭರವಸೆ ನೀಡಿದರು.

ಕಟೀಲು, ಕಿನ್ನಿಗೋಳಿ ಭಾಗದಿಂದ ನಗರಕ್ಕೆ ಆಗಮಿಸುವ ಬಹುತೇಕ ಬಸ್ಸುಗಳು ಮಲ್ಲಿಕಟ್ಟೆ, ಕಂಕನಾಡಿಯಲ್ಲೇ ನಿಲುಗಡೆ ಮಾಡುತ್ತವೆ. ಹಾಗಾಗಿ ಸ್ಟೇಟ್‌ಬ್ಯಾಂಕ್‌ಗೆ ತೆರಳಲು ಮತ್ತೊಂದು ಬಸ್ಸಿನಲ್ಲಿ ಹೋಗಬೇಕು. ಇದರಿಂದ ಗ್ರಾಮೀಣ ಭಾಗದ ಪ್ರಯಾಣಿಕರಿಗೆ ತೊಂದರೆಯಾಗುತ್ತದೆ ಎಂದು ವ್ಯಕ್ತಿಯೊಬ್ಬರು ದೂರಿದರು.

ತೊಕ್ಕೊಟ್ಟು ಭಾಗದಲ್ಲಿ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸದೆ ಸಂಚರಿಸುತ್ತಾರೆ ಎಂಬ ದೂರು ಕೇಳಿ ಬಂತು. ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತರು, ಒಂದೇ ಕಡೆ ವಾಹನ ನಿಲ್ಲಿಸಿ ತಪ್ಪಿತಸ್ಥರ ವಿರುದ್ಧ ಕೇಸು ದಾಖಲಿಸುವುದಕ್ಕಿಂತ ಬೈಕ್‌ನ ಫೊಟೋ ತೆಗೆದು ದೂರು ದಾಖಲಿಸಿ. ಇನ್ನೂ ಅಪ್ರಾಪ್ತರು ವಾಹನ ಸಂಚರಿಸುವುದು ಗಮನಕ್ಕೆ ಬಂದಲ್ಲಿ ಬೈಕ್ ವಶಕ್ಕೆ ತೆಗೆದುಕೊಂಡು ಹೆತ್ತವರಿಗೆ ಮಾಹಿತಿ ನೀಡಿ ಎಂದು ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್ ಸೂಚಿಸಿದರು.

ದ್ವಿಚಕ್ರ ಸವಾರರು ಹೆಲ್ಮೆಟ್ ಧರಿಸದಿದ್ದರೆ ಆಗುವ ಅನಾಹುತಗಳ ಕುರಿತು ಸಾರ್ವಜನಿಕರಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಅರಿವು ನೀಡಬೇಕು. ನಗರದಲ್ಲಿ ಸಂಚರಿಸುವ ವಾಹನಗಳಲ್ಲಿರುವ ಎಲ್‌ಇಡಿ ಬಲ್ಬ್‌ಗಳನ್ನು ತೆರವು ಮಾಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದರು.

ಕಾರ್ಯಕ್ರಮದಲ್ಲಿ ಡಿಸಿಪಿ ಉಮಾ ಪ್ರಶಾಂತ್, ಎಸಿಪಿ ಮಂಜುನಾಥ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News