ಭಟ್ಕಳದಲ್ಲಿ ಮತ್ತೇ ಹುಚ್ಚುನಾಯಿ ದಾಳಿ: ಬಾಲಕ ಸೇರಿ ನಾಲ್ವರಿಗೆ ಗಾಯ

Update: 2018-09-14 13:00 GMT

ಭಟ್ಕಳ, ಸೆ. 14: ಎರಡು ದಿನಗಳ ಹಿಂದೆ ಮಟ್ಟಳ್ಳಿ ಪಂಚಾಯತ್ ವ್ಯಾಪ್ತಿಯಲ್ಲಿ ನಾಲ್ವರ ಮೇಲೆ ಹುಚ್ಚುನಾಯಿ ದಾಳಿ ನಡೆಸಿದ್ದ ಘಟನೆ ಮಾಸುವ ಮುನ್ನವೇ ರೈಲ್ವೆ ನಿಲ್ದಾಣದ ರಸ್ತೆಯಲ್ಲಿ 10 ವರ್ಷದ ಬಾಲಕ ಸೇರಿದಂತೆ ನಾಲ್ಕು ಮಂದಿಗೆ ಹುಚ್ಚು ನಾಯಿ ಕಡಿದು ಗಾಯಗೊಳಿಸಿದ ಘಟನೆ ಗುರುವಾರ ಸಂಜೆ ವರದಿಯಾಗಿದೆ.

ಹುಚ್ಚು ನಾಯಿ ಕಡಿತಕ್ಕೊಳಗಾದವರನ್ನು ಉಮ್ಮೆ ಸಲ್ಮಾ(31), ಶಬಾನಾ (27), ಶಬ್ಬಿರ್ (49) ಹಾಗೂ ರಯ್ಯಾನ್(10) ಎಂದು ಗುರುತಿಸಲಾಗಿದ್ದು ಭಟ್ಕಳ ತಾಲೂಕು ಆಸ್ಪತ್ರೆಯಲ್ಲಿ ಅಗತ್ಯ ಚಿಕಿತ್ಸೆ ನೀಡಲಾಗಿದೆ.

ಭಟ್ಕಳದ ಹಲವೆಡೆ ಸಮರ್ಪಕ ಕಸವಿಲೇವಾರಿ ಇಲ್ಲದ ಕಾರಣ ರಸ್ತೆ ಬದಿಯಲ್ಲೇ ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿ ಬೀಸಾಡುತ್ತಿದ್ದು ಇದನ್ನು ತಿನ್ನಲು ತಂಡೋಪತಂಡವಾಗಿ ಬರುವ ನಾಯಿಗಳು ದಾರಿಹೋಕರ ಮೇಲೆ ದಾಳಿ ಮಾಡುತ್ತಿವೆ. ನಗರ ವ್ಯಾಪ್ತಿಯಲ್ಲಿ ಕಸವಿಲೇವಾರಿ ಮಾಡುತ್ತಿರುವ ಪುರಸಭೆಯವರು ಈ ಕಾರ್ಯವನ್ನು ಇನ್ನಷ್ಟು ಸಮರ್ಪಕವಾಗಿ ಮಾಡಬೇಕಾಗಿದೆ ಎಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ. ಅಲ್ಲದೆ ಜಾಲಿ ಪಟ್ಟಣ ಪಂಚಾಯತ್, ಹೆಬಳೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಕಸವಿಲೆವಾರಿ ಮಾಡಲು ಸಮರ್ಪಕ ವ್ಯವಸ್ಥೆ ಇಲ್ಲದೆ ಇರುವುದರಿಂದಾಗಿ ಜಾಲಿ ಪ.ಪಂ. ವ್ಯಾಪ್ತಿಯ ಆಝಾದ್ ನಗರ, ಹೆಬಳೆ ಪಂಚಾಯತ್ ವ್ಯಾಪ್ತಿಯ ಹನಿಫಾಬಾದ್, ಮದಿನಾ ಕಾಲನಿ, ಜಾಮಿಯಾಬಾದ್ ರಸ್ತೆಯ ತುಂಬೆಲ್ಲಾ ಕಸದ ರಾಶಿಯನ್ನು ಹಾಕಲಾಗಿದ್ದು ಇದರಿಂದಾಗಿ ಹಲವು ರೋಗರುಜಿನಗಳು ಹರಡಲು ಕಾರಣವಾಗಿದೆ. ಅಲ್ಲದೆ ಇತ್ತಿಚೆಗೆ ಭಟ್ಕಳದಲ್ಲಿ ಇಲಿಜ್ವರ ತೀವ್ರ ಸ್ವರೂಪದಲ್ಲಿ ಕಾಣಿಸಿಕೊಂಡಿದ್ದು  ಇಲಿ ಜ್ವರಕ್ಕೆ ಓರ್ವ ಮಹಿಳೆ ಬಲಿಯಾಗಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದ್ದು, ಸೂಕ್ತ ಆರೋಗ್ಯ ಕ್ರಮ ಜರಗಿಸಲು ಅದು ಸೂಚಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News