ಮಹಿಳೆಗೆ ಹಿಗ್ಗಾಮುಗ್ಗಾ ಥಳಿಸಿದ ಪೊಲೀಸ್ ಅಧಿಕಾರಿಯ ಪುತ್ರನ ಸೆರೆ

Update: 2018-09-14 13:43 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ, ಸೆ.14: ಮಹಿಳೆಯೋರ್ವಳ ಮೇಲೆ ಅತ್ಯಾಚಾರವೆಸಗಿದ ಆರೋಪದಲ್ಲಿ ದಿಲ್ಲಿಯ ಪೊಲೀಸ್ ಅಧಿಕಾರಿಯೋರ್ವರ ಪುತ್ರ ರೋಹಿತ್ ಸಿಂಗ್ ತೋಮರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯು ಇಲ್ಲಿಯ ದ್ವಾರಕಾದ ಉತ್ತಮನಗರದಲ್ಲಿಯ ತನ್ನ ಸ್ನೇಹಿತನ ಕಚೇರಿಯಲ್ಲಿ ಸಂತ್ರಸ್ತ ಮಹಿಳೆಯನ್ನು ಹಿಗ್ಗಾಮುಗ್ಗಾ ಥಳಿಸುತ್ತಿದ್ದ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು ಮತ್ತು ಟಿವಿ ವಾಹಿನಿಗಳಲ್ಲೂ ಪ್ರಸಾರಗೊಂಡಿತ್ತು. ಆರೋಪಿಯ ವಿರುದ್ಧ ತಕ್ಷಣ ಕ್ರಮವನ್ನು ಕೈಗೊಳ್ಳುವಂತೆ ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಅವರು ದಿಲ್ಲಿ ಪೊಲೀಸ್ ಆಯುಕ್ತ ಅಮೂಲ್ಯ ಪಟ್ನಾಯಕ್ ಅವರಿಗೆ ನಿರ್ದೇಶ ನೀಡಿದ್ದರು.

ಆರೋಪಿಯು ತನ್ನನ್ನು ಸ್ನೇಹಿತನ ಕಚೇರಿಗೆ ಬರಲು ತಿಳಿಸಿದ್ದ ಮತ್ತು ಅಲ್ಲಿ ತನ್ನ ಮೇಲೆ ಅತ್ಯಾಚಾರವೆಸಗಿದ್ದ. ಈ ಬಗ್ಗೆ ಪೊಲೀಸರಿಗೆ ದೂರು ನೀಡುವುದಾಗಿ ತಿಳಿಸಿದಾಗ ತನ್ನ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಮಹಿಳೆ ದೂರಿನಲ್ಲಿ ಆಪಾದಿಸಿರುವುದಾಗಿ ಡಿಸಿಪಿ ಆ್ಯಂಟೊ ಅಲ್ಫೋನ್ಸ್ ಅವರು ಸುದ್ದಿಗಾರರಿಗೆ ತಿಳಿಸಿದರು. ಸೆ.2ರಂದು ಈ ಘಟನೆ ನಡೆದಿತ್ತು ಎಂದರು.

‘ಯುವಕನೋರ್ವ ಮಹಿಳೆಯನ್ನು ತೀವ್ರವಾಗಿ ಥಳಿಸುತ್ತಿರುವ ವೀಡಿಯೊವನ್ನು ನಾನು ಗಮನಿಸಿದ್ದೇನೆ. ದಿಲ್ಲಿ ಪೊಲೀಸ್ ಆಯುಕ್ತರೊಂದಿಗೆ ದೂರವಾಣಿಯಲ್ಲಿ ಮಾತನಾಡಿ,ಈ ಸಂಬಂಧ ಅಗತ್ಯ ಕ್ರಮ ಕೈಗೊಳ್ಳುವಂತೆ ಅವರಿಗೆ ಆದೇಶಿಸಿದ್ದೇನೆ ’ಎಂದು ರಾಜನಾಥ್ ಟ್ವೀಟಿಸಿದ್ದಾರೆ.

ಮಹಿಳೆ ಗುರುವಾರ ಪೊಲೀಸರಿಗೆ ದೂರು ಸಲ್ಲಿಸಿದ್ದಳು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News