ಮಾದಕ ವಸ್ತುಗಳ ಬೇಡಿಕೆ ಇಳಿಸಲು ಜಾಗೃತಿ ಅಗತ್ಯ: ಅಣ್ಣಾಮಲೈ

Update: 2018-09-14 14:22 GMT

ಉಡುಪಿ, ಸೆ.14: ಇಡೀ ರಾಜ್ಯದಲ್ಲಿ ಅವಿಭಜಿತ ದ.ಕ. ಜಿಲ್ಲೆಗಳಲ್ಲಿ ಅತ್ಯಂತ ಹೆಚ್ಚು ಮಾದಕ ದ್ರವ್ಯ ಸೇವನೆಗೆ ಸಂಬಂಧಿಸಿದ ಪ್ರಕರಣಗಳು ದಾಖಲಾಗುತ್ತಿವೆ. ಈ ವರ್ಷ ಉಡುಪಿ ಜಿಲ್ಲೆಯಲ್ಲಿ ಸುಮಾರು 80 ಪ್ರಕರಣಗಳು ದಾಖಲಾಗಿವೆ. ಇದನ್ನು ತಡೆಯಲು ಮಾದಕ ವಸ್ತುಗಳ ಪೂರೈಕೆ ವಿರುದ್ಧ ಕ್ರಮ ತೆಗೆದುಕೊಂಡರೆ ಸಾಲದು. ಮುಖ್ಯವಾಗಿ ಬೇಡಿಕೆಯನ್ನು ಕಡಿಮೆ ಮಾಡಬೇಕಾಗಿದೆ. ಅದಕ್ಕೆ ಇರುವ ಒಂದೇ ಮಾರ್ಗ ಜನಜಾಗೃತಿ ಮಾತ್ರ ಎಂದು ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ಅಧೀಕ್ಷಕ ಅಣ್ಣಾಮಲೈ ಹೇಳಿದ್ದಾರೆ.

ಉಡುಪಿ ಜಿಲ್ಲಾ ಪೊಲೀಸ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಉಡುಪಿ ಪ್ರೆಸ್ ಕ್ಲಬ್‌ಗಳ ಸಂಯುಕ್ತ ಆಶ್ರಯದಲ್ಲಿ ಮಾದಕ ವ್ಯಸನ ವಿರೋಧಿ ಮಾಸಾಚರಣೆಯ ಪ್ರಯುಕ್ತ ಶುಕ್ರವಾರ ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಶಾಲಾ ಕಾಲೇಜು ವಿದ್ಯಾರ್ಥಿಗಳ ‘ಸೆ ನೋ ಟು ಡ್ರಗ್ಸ್’ ವಾಕಾಥಾನ್ ಜಾಥಾದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡುತಿದ್ದರು.

ಹೆಚ್ಚಿನ ವಿದ್ಯಾರ್ಥಿಗಳು ಮಾನಸಿಕ ಖಿನ್ನತೆಯಿಂದಾಗಿ ಮಾದಕ ವ್ಯಸನಕ್ಕೆ ತುತ್ತಾಗುತ್ತಿದ್ದಾರೆ. ಆದುದರಿಂದ ಶಾಲಾ ಕಾಲೇಜು ಮುಖ್ಯಸ್ಥರು ಮಕ್ಕಳ ಬಗ್ಗೆ ನಿಗಾವಹಿಸಿ, ಅಗತ್ಯ ಇರುವ ಮಕ್ಕಳಿಗೆ ಸಮಾಲೋಚನೆ ನೀಡಬೇಕು. ಕೇವಲ ಶಿಕ್ಷೆ ನೀಡುವುದರಿಂದ ಮಾದಕ ವ್ಯಸನಕ್ಕೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿಲ್ಲ ಎಂದರು.

ಮಾದಕ ವ್ಯಸನದ ವಿರುದ್ಧ ಹೋರಾಟ ನಡೆಸಬೇಕಾದರೆ ಮಾದಕ ವಸ್ತುಗಳ ಮಾರಾಟ ಮಾಡುವ ಕುರಿತು ವಿದ್ಯಾರ್ಥಿಗಳು ಪೊಲೀಸರಿಗೆ ಮಾಹಿತಿ ದಾರರಿಗೆ ಕೆಲಸ ಮಾಡಬೇಕು. ಇದರ ವಿರುದ್ಧ ಜಾಗೃತಿ ಮೂಡಿಸುವುದರಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿ ಕೂಡ ಬ್ರಾಂಡ್ ಅಂಬಾಸಿಡರ್ ಆಗಿರುತ್ತಾರೆ ಎಂದು ಅವರು ತಿಳಿಸಿದರು.

ಮೂಡಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಡಾ.ಮೋಹನ್ ಆಳ್ವ ಮಾತನಾಡಿ, ಅಧ್ಯಯನದ ಪ್ರಕಾರ ಪ್ರತಿ 100 ವಿದ್ಯಾರ್ಥಿಗಳಲ್ಲಿ ಶೇ.8.7ರಷ್ಟು ಮಾದಕ ವಸ್ತುಗಳ ಹಾಗೂ ಶೇ.20ರಷ್ಟು ವಿದ್ಯಾರ್ಥಿಗಳು ಮದ್ಯ ಸೇವನೆಯ ದಾಸರಾಗಿ ರುತ್ತಾರೆ. ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಬೇಕಾದರೆ ಇಂತಹ ದುಶ್ಚಟ ಗಳಿಂದ ವಿದ್ಯಾರ್ಥಿಗಳು ದೂರ ಇರಬೇಕು ಎಂದು ಹೇಳಿದರು.

ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ನಿಂಬರಗಿ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಶಾಸಕ ರಘುಪತಿ ಭಟ್, ಏರ್‌ಟೆಲ್ ಉಡುಪಿ ಪ್ರಾಂತೀಯ ಸೇಲ್ಸ್ ಮ್ಯಾನೇಜರ್ ದೀಪಕ್ ಪಿ.ವಿ., ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರ ಚಂದ್ರ, ಪ್ರೆಸ್‌ಕ್ಲಬ್ ಸಂಚಾಲಕ ನಾಗರಾಜ್, ಸಂದೀಪ್ ಶೆಟ್ಟಿ ಉಪಸ್ಥಿತರಿದ್ದರು.

ಪತ್ರಕರ್ತ ಶಶಿಧರ್ ಮಾಸ್ತಿಬೈಲು ಸ್ವಾಗತಿಸಿದರು. ದೀಪಕ್ ಜೈನ್ ವಂದಿಸಿ ದರು. ಮೈಕಲ್ ರೊಡ್ರಿಗಸ್ ಕಾರ್ಯಕ್ರಮ ನಿರೂಪಿಸಿದರು.
ಕುಂಜಿಬೆಟ್ಟು ಎಂಜಿಎಂ ಕಾಲೇಜು ಎದುರು ಜಿಲ್ಲಾ ಪೋಲಿಸ್ ವರಿಷ್ಠಾಧಿ ಕಾರಿ ಲಕ್ಷ್ಮಣ್ ನಿಂಬರಗಿ ಜಾಥಕ್ಕೆ ಚಾಲನೆ ನೀಡಿದರು. ಬಳಿಕ ಜಾಥವು ಕಡಿಯಾಳಿ, ಕಲ್ಸಂಕ, ಸಿಟಿ ಬಸ್, ನಿಲ್ದಾಣ, ಶಿರಿಬೀಡು, ಕಿದಿಯೂರು ರಸ್ತೆ, ಸರ್ವಿಸ್ ಬಸ್ ನಿಲ್ದಾಣ, ತ್ರೀವೇಣಿ ಸರ್ಕಲ್, ಕೆ.ಎಂ.ಮಾರ್ಗ, ಜೋಡುಕಟ್ಟೆ, ಅಜ್ಜರಕಾಡು ಮೂಲಕ ಕ್ರೀಡಾಂಗಣಕ್ಕೆ ಸಾಗಿ ಬಂತು.

ಜಾಥಾದಲ್ಲಿ ಸಮಾಜ ಸೇವಕ ನಿತ್ಯಾನಂದ ಒಳಕಾಡು ಹಾಗೂ ವಿದ್ಯಾರ್ಥಿನಿ ಅಶ್ವಿನಿ ಅವರ ಮಾದಕ ದ್ರವ್ಯ ಸೇವನೆಯ ದುಷ್ಪಾರಿಣಾಮ ಕುರಿತ ಅಣಕು ಪ್ರದರ್ಶನವು ಗಮನ ಸೆಳೆಯಿತು. ಉಡುಪಿ ನಗರದ ಆಸುಪಾಸಿನ ವಿವಿಧ ಹೈಸ್ಕೂಲ್, ಪಿಯು ಮತ್ತು ಪದವಿ ಕಾಲೇಜಿನ ಸಾವಿರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News