ಪ್ರಾಮಾಣಿಕವಾಗಿ ಯೋಜನೆ ಅನುಷ್ಠಾನಗೊಳಿಸಿ: ಸಚಿವ ಪುಟ್ಟರಾಜು

Update: 2018-09-14 14:27 GMT

ಮಂಗಳೂರು, ಸೆ.14: ಸಣ್ಣ ನೀರಾವರಿ ಯೋಜನೆಯಡಿ ರೂಪಿಸಲಾದ ಯೋಜನೆಗಳಿಗೆ ಅನುದಾನದ ಕೊರತೆ ಇಲ್ಲ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಯೋಜನೆಗಳನ್ನು ಪ್ರಾಮಾಣಿಕವಾಗಿ ಅನುಷ್ಠಾನಕ್ಕೆ ತರಬೇಕು ಎಂದು ರಾಜ್ಯದ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖಾ ಸಚಿವ ಸಿ.ಎಸ್. ಪುಟ್ಟರಾಜು ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಜರುಗಿದ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.

ಶಾಸಕರ ಸಲಹೆಗಳನ್ನು ಪಡೆದು ಜನೋಪಯೋಗಿ ಕಾರ್ಯಕ್ರಮ ರೂಪಿಸಲು ಈಗಾಗಲೇ ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ. ಈ ಸೂಚನೆಯನ್ನು ಪಾಲಿಸಲಾಗುವುದು. ಅಂತರ್ಜಲ ವೃದ್ಧಿ ಮತ್ತು ಕೃಷಿಗೆ ಪೂರಕ ಯೋಜನೆಗಳು ಅಗತ್ಯವಿದೆ ಎಂದರು.

ನಗರಾಭಿವೃದ್ಧಿ ಮತ್ತು ವಸತಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಸೂಚಿಸಿರುವಂತೆ ಪಡೀಲ್ ಮತ್ತು ಜಪ್ಪಿನಮೊಗರು ನಡುವೆ ನೇತ್ರಾವತಿ ನದಿಗೆ ಉಪ್ಪು ನೀರು ತಡೆ ಕಿಂಡಿ ಅಣೆಕಟ್ಟು ನಿರ್ಮಿಸಲು ಅಂದಾಜಿಸಲಾಗಿದ್ದು, ಇದರ ತಾಂತ್ರಿಕ ಶಕ್ಯತೆ ಬಗ್ಗೆ ಪರಿಣಿತರನ್ನು ಸಂಪರ್ಕಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಜಿಲ್ಲೆಯಲ್ಲಿ ಒಟ್ಟು 291 ಕಿಂಡಿ ಅಣೆಕಟ್ಟುಗಳಿವೆ. ಪಶ್ಚಿಮವಾಹಿನಿ ಯೋಜನೆಯು ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳಿಗೆ ಸರಣಿ ಕಿಂಡಿ ಅಣೆಕಟ್ಟು ಗಳನ್ನು ನಿರ್ಮಿಸಿ ಗರಿಷ್ಠ ಪ್ರಮಾಣದಲ್ಲಿ ನೀರನ್ನು ಬಳಸಿಕೊಳ್ಳಬೇಕು. ಕೃಷಿಗೆ ನೀರಾವರಿ ಸೌಲಭ್ಯ, ಕುಡಿಯುವ ನೀರಿನ ನಿರಂತರ ಪೂರೈಕೆಗಾಗಿ ಅಣೆಕಟ್ಟು ನಿರ್ಮಾಣ ಕಾಮಗಾರಿಗಾಗಿ 174 ಕೋಟಿ ರೂ. ಅಂದಾಜು ಮೊತ್ತದಲ್ಲಿ ಯೋಜನೆ ಅನುಮೋದನೆಗೊಂಡಿದೆ ಎಂದರು.

760 ಯೋಜನೆಗಳಿಗೆ 1,598 ಕೋಟಿ ರೂ. ಅನುದಾನದ ಅವಶ್ಯಕತೆ ಇದ್ದು, ಇವುಗಳನ್ನು 3 ಹಂತಗಳಲ್ಲಿ ಕೈಗೊಳ್ಳಲು ಪ್ರಸ್ತಾಪಿಸಲಾಗಿದೆ ಎಂದು ಮಂಗಳೂರು ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಗೋಕುಲ್ ದಾಸ್ ಸಚಿವರ ಗಮನ ಸೆಳೆದರು. ಸಣ್ಣ ನೀರಾವರಿ ಇಲಾಖೆಯಿಂದ ಕೈಗೊಂಡ ಕಿಂಡಿ ಅಣೆಕಟ್ಟೆಗಳಿಗೆ ಹಲಗೆಗಳ ಸಮಸ್ಯೆ ಇರುವುದಿಲ್ಲ. ನೂತನ ಮಾದರಿ ಹಲಗೆಗಳನ್ನೇ ಅಳವಡಿಸಲಾಗಿದೆ ಎಂದರು.

ಸಭೆಯಲ್ಲಿ ನಗರಾಭಿವೃದ್ಧಿ ಮತ್ತು ವಸತಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್, ಶಾಸಕರಾದ ವೇದವ್ಯಾಸ್ ಕಾಮತ್, ಡಾ.ಭರತ್ ಶೆಟ್ಟಿ, ಸಂಜೀವ ಮಠಂದೂರು, ಉಮಾನಾಥ ಕೋಟ್ಯಾನ್, ಐವನ್ ಡಿಸೋಜ, ಅಪರ ಜಿಲ್ಲಾಧಿಕಾರಿ ಕುಮಾರ್, ರಾಜ್ಯದ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖಾ ಕಾರ್ಯದರ್ಶಿ ಹಾಗೂ ಇಲಾಖಾಧಿಕಾರಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News