ಮಳವೂರು: ಚರಂಡಿ ನಿರ್ಮಾಣಕ್ಕೆ ಜಿಪಂ-ಎಎಐ ಒಪ್ಪಂದ

Update: 2018-09-14 14:32 GMT

ಮಂಗಳೂರು, ಸೆ.14: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ವ್ಯಾಪ್ತಿ ಪ್ರದೇಶದಲ್ಲಿ ಮಹಾಮಳೆಯಿಂದ ಅಪಾರ ಪ್ರಮಾಣದಲ್ಲಿ ಹಾನಿಯಾ ಗಿತ್ತು. ಈ ಪ್ರದೇಶದಲ್ಲಿ ಮಳೆ ನೀರು ಹರಿಯುವಿಕೆಗೆ ಶಾಶ್ವತ ಪರಿಹಾರವಾಗಿ ಚರಂಡಿ ರಚಿಸಲು ಜಿಪಂ ಮತ್ತು ಎಎಐ (ಭಾರತೀಯ ವಿಮಾನನಿಲ್ದಾಣ ಪ್ರಾಧಿಕಾರ) ಜಂಟಿ ಆಶ್ರಯದಲ್ಲಿ 6.75 ಕೋಟಿ ರೂ. ವೆಚ್ಚದಲ್ಲಿ ಕರಾರು ಒಡಂಬಡಿಕೆ ಒಪ್ಪಂದ ಮಾಡಿಕೊಳ್ಳಲಾಯಿತು.

ಜಿಲ್ಲಾಧಿಕಾರಿ ಸಭಾಂಗಣದಲ್ಲಿ ನಡೆದ ಒಡಂಬಡಿಕೆ ಒಪ್ಪಂದ ಕಾರ್ಯಕ್ರಮದಲ್ಲಿ ಮಾತನಾಡಿದ ನಗರಾಭಿವೃದ್ಧಿ ಮತ್ತು ವಸತಿ ಸಚಿವ ಯು.ಟಿ.ಖಾದರ್,
ವಿಮಾನನಿಲ್ದಾಣದ ಸುತ್ತಮುತ್ತಲಿನ ಪ್ರದೇಶಗಳಿಗೆ ಸಮಸ್ಯೆಯಾಗದಂತೆ ಅಭಿವೃದ್ಧಿಯಾಗಬೇಕು. ಇಲ್ಲಿ ಜನಸಾಮಾನ್ಯರ ಬದುಕು ಮುಖ್ಯವಾದುದು. ಎಎಐ ಮುಂದೆ ನಿಂತು ಕಾಮಗಾರಿ ಕೆಲಸವನ್ನು ಯಶಸ್ವಿಯಾಗಿ ನಡೆಸಬೇಕು. ಚರಂಡಿ ನಿರ್ಮಾಣ ಕೆಲಸ ಶೀಘ್ರಗತಿಯಲ್ಲಿ ನಡೆಯಬೇಕು. ಕೆಲಸದ ಪ್ರಕ್ರಿಯೆ ಗಮನಿಸಿಯೇ ಇನ್ನು ಹೆಚ್ಚಿನ ಅನುದಾನವನ್ನು ಸರಕಾರ ನೀಡುವಂತೆ ಎಎಐ ಕಾರ್ಯನಿರ್ವಹಿಸಬೇಕು. ಕೇಂದ್ರ ಮತ್ತು ರಾಜ್ಯ ಸರಕಾರದ ಅಧಿಕಾರಿಗಳ ಜೊತೆ ಅಭಿವೃದ್ಧಿ ವಿಚಾರಗಳ ಕುರಿತು ಚರ್ಚೆ ನಡೆಸಲಾಗುವುದು ಎಂದು ಹೇಳಿದರು.

ದಕ್ಷಿಣ ಪ್ರಾದೇಶಿಕ ವಿಮಾನ ನಿಲ್ದಾಣ ಪ್ರಾಧಿಕಾರದ ನಿರ್ದೇಶಕ ಶ್ರೀಕುಮಾರ್ ಮಾತನಾಡಿ, ಪ್ರಾಧಿಕಾರದಿಂದ ಅಭಿವೃದ್ಧಿ ಕೆಲಸಗಳನ್ನು ಹಾಕಿಕೊಳ್ಳುತ್ತಾ ಬರಲಾಗುತ್ತಿದೆ. ವಿಮಾನನಿಲ್ದಾಣ ಸಮೀಪದ ನೆರೆಹೊರೆಯ ಜನರ ಸಂಕಷ್ಟವನ್ನು ಅರಿತು ಇಂತಹ ಅಭಿವೃದ್ಧಿ ಪರ ಕೆಲಸಗಳನ್ನು ಹಾಕಿಕೊಳ್ಳಲಾಗುತ್ತಿದೆ. ಮಂಗಳೂರು ಅಂತರರಾಷ್ಟ್ರೀಯ ವಿಮಾನನಿಲ್ದಾಣ ಅಭಿವೃದ್ಧಿಯತ್ತ ಸಾಗುತ್ತಿದೆ. ದೇಶದ ಹತ್ತು ವಿಮಾನ ನಿಲ್ದಾಣಗಳಲ್ಲಿ ಮಂಗಳೂರು ವಿಮಾನ ನಿಲ್ದಾಣವೂ ಒಂದಾಗಿದೆ ಎಂದು ಹೇಳಿದರು.

ತಾಲೂಕಿನ ಮಳವೂರು ಗ್ರಾಪಂ ವ್ಯಾಪ್ತಿಯ ಕೆಂಜಾರು ಎಂಬಲ್ಲಿ ಮಂಗಳೂರು ವಿಮಾನ ನಿಲ್ದಾಣ ಪ್ರಾಧಿಕಾರದಿಂದ ಟ್ಯಾಕ್ಸಿ ವೇ ವಿಸ್ತರಣೆ ಕಾಮಗಾರಿಯು ಪ್ರಗತಿಯಲ್ಲಿತ್ತು. ಮೇ 29ರಂದು ಜಿಲ್ಲೆಯಲ್ಲಿ ಭಾರೀ ಮಳೆ ಸುರಿದ ಪರಿಣಾಮ ಕೆಳಭಾಗದಲ್ಲಿರುವ ತಗ್ಗು ಪ್ರದೇಶಗಳಿಗೆ ಒಮ್ಮೆಲೇ ರಭಸದಿಂದ ನೀರು ನುಗ್ಗಿ ಖಾಸಗಿ ಒಡೆತನದ ಬಹಳಷ್ಟು ಫಲವತ್ತಾದ ಕೃಷಿ ಭೂಮಿ ಹಾಗೂ ವಾಸದ ಮನೆಗಳಿಗೆ ಮಣ್ಣಿನಿಂದ ಕೂಡಿದ ನೀರು ತುಂಬಿ ಹಾನಿ ಉಂಟಾಗಿತ್ತು ಎಂದು ಅಪರ ಜಿಲ್ಲಾಧಿಕಾರಿ ಕುಮಾರ್ ತಿಳಿಸಿದರು.

ಈ ಪ್ರದೇಶದಲ್ಲಿ ಮಳೆ ನೀರು ಹರಿಯುವಿಕೆಗೆ ಶಾಶ್ವತ ಪರಿಹಾರವಾಗಿ ಚರಂಡಿ ರಚಿಸಲು ಕಾರ್ಯ ನಿರ್ವಾಹಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರ್ ವಿಭಾಗದಿಂದ 6.75 ಕೋಟಿ ರೂ. ವಿವರವಾದ ಯೋಜನಾ ವರದಿಯನ್ನು ತಯಾರಿಸಿ ಸಲ್ಲಿಸಿದ್ದರು.

ಈ ಯೋಜನೆಗೆ ತಗಲುವ ಮೊತ್ತವನ್ನು ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರ ಸಿಎಸ್‌ಆರ್ ಫಂಡ್‌ನಿಂದ ಭರಿಸಲು ಅನುಮೋದನೆ ನೀಡಿದೆ. ಕಾಮಗಾರಿಯನ್ನು ಅನುಷ್ಠಾನಗೊಳಿಸಲು ಮಂಗಳೂರು ಸಹಾಯಕ ಆಯುಕ್ತರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿತ್ತು. ಕಾರ್ಯ ನಿರ್ವಾಹಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರ್ ವಿಭಾಗ ಅವರನ್ನು ಅನುಷ್ಠಾನ ಅಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ ಎಂದು ತಿಳಿಸಿದರು.

ಸಂಸದ ನಳಿನ್‌ಕುಮಾರ್ ಕಟೀಲ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಈ ಸಂದರ್ಭದಲ್ಲಿ ಮಂಗಳೂರು ಅಂತರರಾಷ್ಟ್ರೀಯ ವಿಮಾನನಿಲ್ದಾಣ ಪ್ರಾಧಿಕಾರದ ನಿರ್ದೇಶಕ ವೆಂಕಟೇಶ್ವರ ರಾವ್, ಶಾಸಕ ಉಮಾನಾಥ ಕೊಟ್ಯಾನ್, ಜಿಪಂ ಅಧ್ಯಕ್ಷ ಮೀನಾಕ್ಷಿ ಶಾಂತಿಗೋಡು, ತಾಪಂ ಅಧ್ಯಕ್ಷ ಮುಹಮ್ಮದ್ ಮೋನು ಮತ್ತಿತರರು ಉಪಸ್ಥಿತರಿದ್ದರು. ಅಪರ ಜಿಲ್ಲಾಧಿಕಾರಿ ಕುಮಾರ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News