ವಿಜಯ ಮಲ್ಯ ಪ್ರಕರಣದಲ್ಲಿ ಅಸಡ್ಡೆ ತೋರಿಸಿಲ್ಲ: ಎಸ್‌ಬಿಐ

Update: 2018-09-14 14:33 GMT

ಹೊಸದಿಲ್ಲಿ,ಸೆ.14: ದೇಶಭ್ರಷ್ಟ ವಿಜಯ ಮಲ್ಯ ಒಡೆತನದ ಕಿಂಗ್‌ಫಿಷರ್ ಏರ್‌ಲೈನ್ಸ್‌ನ ಸುಸ್ತಿಸಾಲ ಪ್ರಕರಣವನ್ನು ನಿರ್ವಹಿಸುವಲ್ಲಿ ತಾನು ಯಾವುದೇ ಅಸಡ್ಡೆಯನ್ನು ತೋರಿಸಿರಲಿಲ್ಲ ಎಂದು ಭಾರತೀಯ ಸ್ಟೇಟ್ ಬ್ಯಾಂಕ್(ಎಸ್‌ಬಿಐ) ಶುಕ್ರವಾರ ತಿಳಿಸಿದೆ.

ಮಲ್ಯ ದೇಶದಿಂದ ಪರಾರಿಯಾಗುವುದನ್ನು ತಡೆಯಲು ಸರ್ವೋಚ್ಚ ನ್ಯಾಯಾಲಯದ ಮೊರೆ ಹೋಗುವಂತೆ 2016,ಫೆಬ್ರವರಿಯಲ್ಲಿಯೇ ಕಿಂಗ್ ಫೀಷರ್‌ನ ಸುಸ್ತಿಸಾಲದಲ್ಲಿ ದೊಡ್ಡ ಪಾಲನ್ನು ಹೊಂದಿರುವ ಎಸ್‌ಬಿಐಗೆ ಸಲಹೆ ನೀಡಲಾಗಿತ್ತು. ಆದರೆ ಎಸ್‌ಬಿಐ ನೇತೃತ್ವದ ಬ್ಯಾಂಕುಗಳ ಕೂಟ 2016,ಮಾ.2ರಂದು ಮಲ್ಯ ದೇಶದಿಂದ ಪರಾರಿಯಾದ ನಾಲ್ಕು ದಿನಗಳ ನಂತರವಷ್ಟೇ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲನ್ನೇರಿತ್ತು ಎಂಬ ವರದಿಗಳ ಹಿನ್ನೆಲೆಯಲ್ಲಿ ಬ್ಯಾಂಕಿನ ಈ ಸಮಜಾಯಿಷಿ ಹೊರಬಿದ್ದಿದೆ.

ಕಿಂಗ್‌ಫಿಷರ್ ಏರ್‌ಲೈನ್ಸ್ ಸೇರಿದಂತೆ ಸುಸ್ತಿ ಸಾಲ ಪ್ರಕರಣಗಳನ್ನು ನಿರ್ವಹಿಸುವಲ್ಲಿ ತಾನಾಗಲೀ ತನ್ನ ಅಧಿಕಾರಿಗಳಾಗಲೀ ಯಾವುದೇ ಅಸಡ್ಡೆ ತೋರಿಸಿದ್ದನ್ನು ತಾನು ನಿರಾಕರಿಸುತ್ತಿದ್ದೇನೆ. ಸಾಲಬಾಕಿಯ ವಸೂಲಿಗಾಗಿ ಬ್ಯಾಂಕು ಪೂರ್ವ ನಿಯಾಮಕ ಮತ್ತು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಎಸ್‌ಬಿಐ ಹೇಳಿಕೆಯಲ್ಲಿ ತಿಳಿಸಿದೆ.

17 ಬ್ಯಾಂಕುಗಳ ಕೂಟಕ್ಕೆ 9,000 ಕೋ.ರೂ.ಗೂ ಅಧಿಕ ಸಾಲವನ್ನು ಬಾಕಿಯಿರಿಸಿದ್ದಕ್ಕೆ ಮಲ್ಯ ಕಾನೂನು ಕ್ರಮಗಳನ್ನೆದುರಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News