ಸ್ವರಾಜ್-ಬೊರಿಸೊವ್ ರಿಂದ ದ್ವಿಪಕ್ಷೀಯ ಸಹಕಾರದ ಪರಾಮರ್ಶೆ

Update: 2018-09-14 14:34 GMT

ಮಾಸ್ಕೋ, ಸೆ.14: ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಮತ್ತು ರಷ್ಯಾದ ಉಪಪ್ರಧಾನಿ ಯೂರಿ ಬೊರಿಸೊವ್ ಅವರು ಶುಕ್ರವಾರ ಇಲ್ಲಿ ವ್ಯಾಪಾರ ಮತ್ತು ಹೂಡಿಕೆ,ವಿಜ್ಞಾನ ಮತ್ತು ತಂತ್ರಜ್ಞಾನ,ಸಂಸ್ಕೃತಿ ಮತ್ತು ಪರಸ್ಪರ ಹಿತಾಸಕ್ತಿಗಳ ಇತರ ವಿಷಯಗಳಲ್ಲಿ ಉಭಯ ರಾಜ್ಯಗಳ ನಡುವಿನ ದ್ವಿಪಕ್ಷೀಯ ಸಹಕಾರದಲ್ಲಿ ಆಗಿರುವ ಪ್ರಗತಿಯನ್ನು ಪುನರ್‌ಪರಿಶೀಲಿಸಿದರು.

ಉಭಯ ನಾಯಕರ ಜಂಟಿ ಅಧ್ಯಕ್ಷತೆಯಲ್ಲಿ ನಡೆದ ತಂತ್ರಜ್ಞಾನ ಮತ್ತು ಆರ್ಥಿಕ ಸಹಕಾರ ಕುರಿತು 23ನೇ ಭಾರತ-ರಷ್ಯಾ ಅಂತರ್ ಸರಕಾರಿ ಆಯೋಗ (ಐಆರ್‌ಐಜಿಸಿ-ಟಿಇಸಿ)ದ ಸಭೆಯಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಸಂಬಂಧಗಳನ್ನು ವಿಸ್ತರಿಸುವ ಮತ್ತು ಹೊಸ ಅವಕಾಶಗಳನ್ನು ಗುರುತಿಸುವ ನಿಟ್ಟಿನಲ್ಲಿ ಚರ್ಚೆಗಳನ್ನು ನಡೆಸಲಾಯಿತು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ ಕುಮಾರ್ ಟ್ವೀಟಿಸಿದ್ದಾರೆ.

 ಐಆರ್‌ಐಜಿಸಿ-ಟಿಇಸಿಯು ಸ್ಥಾಯಿ ಸಮಿತಿಯಾಗಿದ್ದು,ವಾರ್ಷಿಕವಾಗಿ ಸಭೆ ಸೇರಿ ದ್ವಿಪಕ್ಷೀಯ ವ್ಯಾಪಾರ ಮತ್ತು ಹೂಡಿಕೆ,ವಿಜ್ಞಾನ ಮತ್ತು ತಂತ್ರಜ್ಞಾನ,ಸಂಸ್ಕೃತಿ ಮತ್ತು ಪರಸ್ಪರ ಹಿತಾಸಕ್ತಿಗಳ ಇತರ ವಿಷಯಗಳ ಕ್ಷೇತ್ರಗಳಲ್ಲಿ ನಡೆಯುತ್ತಿರುವ ದ್ವಿಪಕ್ಷೀಯ ಸಹಕಾರದ ಚಟುವಟಿಕೆಗಳನ್ನು ಪುನರ್‌ಪರಿಶೀಲಿಸುತ್ತದೆ.

ವಿವಿಧ ಕ್ಷೇತ್ರಗಳಲ್ಲಿ ದ್ವ್ವಿಪಕ್ಷೆಯ ಸಹಕಾರದ ಕುರಿತು ಮಾಹಿತಿಗಳನ್ನು ಸಂಗ್ರಹಿಸುವ ಆಯೋಗವು ಬಳಿಕ ಸಂಬಂಧಿತ ಕ್ಷೇತ್ರಗಳಲ್ಲಿ ನೀತಿ ಶಿಫಾರಸುಗಳು ಮತ್ತು ನಿರ್ದೇಶನಗಳನ್ನು ಒದಗಿಸುತ್ತದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಹೇಳಿಕೆಯಲ್ಲಿ ತಿಳಿಸಿದೆ.

ಆಯೋಗದ ಹಿಂದಿನ ಸಭೆಯು ದಿಲ್ಲಿಯಲ್ಲಿ 2017,ಡಿಸೆಂಬರ್‌ನಲ್ಲಿ ನಡೆದಿತ್ತು. ಸ್ವರಾಜ್ ಅವರು ಗುರುವಾರ ರಷ್ಯಾದ ವಿದೇಶಾಂಗ ಸಚಿವ ಸೆರ್ಗಿ ಲಾವ್ರೋವ್ ಅವರನ್ನು ಭೇಟಿಯಾಗಿದ್ದು,ದ್ವಿಪಕ್ಷೀಯ ಮತ್ತು ಪ್ರಾದೇಶಿಕ ವಿಷಯಗಳಲ್ಲಿ ಅಭಿಪ್ರಾಯಗಳನ್ನು ಉಭಯ ನಾಯಕರು ಹಂಚಿಕೊಂಡಿದ್ದರು.

ಇದು ಸ್ವರಾಜ್ ಅವರು ಕಳೆದ 11 ತಿಂಗಳುಗಳಲ್ಲಿ ರಷ್ಯಾಕ್ಕೆ ನೀಡಿರುವ ಮೂರನೇ ಭೇಟಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News