ತುರ್ತು ಸಂದರ್ಭ ಪ್ರಾಣ ರಕ್ಷಣೆಗೆ ‘ಸೇವಿಯರ್’ ಆ್ಯಪ್ ಸಿದ್ಧ

Update: 2018-09-14 14:36 GMT

ಮಂಗಳೂರು, ಸೆ.14: ತುರ್ತು ಸಂದರ್ಭ ಅಂದರೆ ಅಪಘಾತ, ಹೃದಯಾಘಾತ ಮತ್ತಿತರ ಘಟನೆ ನಡೆದಾಗ ಪ್ರಾಣರಕ್ಷಣೆಗೆ ‘ಸೇವಿಯರ್’ ಎಂಬ ಹೊಸ ಆ್ಯಪ್ ಸಿದ್ಧಗೊಂಡಿದೆ.

ಈ ಬಗ್ಗೆ ದ.ಕ. ಜಿಲ್ಲಾ ಆರೋಗ್ಯಾಧಿಕಾರಿಯ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕೋಡ್‌ಕ್ರಾಫ್ಟ್ ಟೆಕ್ನಾಲಜೀಸ್‌ನ ಸ್ಥಾಪಕ ದೀಕ್ಷಿತ್ ರೈ ಹಿಂದೆ ತುರ್ತು ಸಂದರ್ಭ ಆ್ಯಂಬುಲೆನ್ಸ್‌ಗೆ ತಾಸುಗಟ್ಟಲೆ ಕಾಯಬೇಕಿತ್ತು. ಆದರೆ ಇನ್ನು ಮುಂದೆ ಕಾಯಬೇಕಿಲ್ಲ. ಮೊಬೈಲ್‌ನಲ್ಲಿ ಬಟನ್ ಅದುಮಿದರೆ ಕೆಲವೇ ನಿಮಿಷದಲ್ಲಿ ಆ್ಯಂಬುಲೆನ್ಸ್ ಘಟನೆ ನಡೆದ ಸ್ಥಳಕ್ಕೆ ಹಾಜರಾಗಲಿದೆ. ಅಷ್ಟೇ ಅಲ್ಲದೆ ಪ್ರಥಮ ಚಿಕಿತ್ಸೆಗಾಗಿ ಸ್ವಯಂ ಸೇವಕರೂ ಬರಲಿದ್ದಾರೆ ಎಂದರು.

ಮಂಗಳೂರು ಕೆಎಂಸಿ ಆಸ್ಪತ್ರೆಯ ವೈದ್ಯ ಡಾ. ಮನೀಶ್ ರೈ ಮಾತನಾಡಿ, ಸೇವಿಯರ್ ಆ್ಯಪ್‌ನಲ್ಲಿ ಅತ್ತಾವರ ಕೆಎಂಸಿ, ಜ್ಯೋತಿ ಕೆಎಂಸಿ, ಯೆನೆಪೊಯ ಆಸ್ಪತ್ರೆ, ಕೆ.ಎಸ್. ಹೆಗ್ಡೆ ಆಸ್ಪತ್ರೆ, ಎ.ಜೆ. ಆಸ್ಪತ್ರೆ, ಕಣಚೂರು ಆಸ್ಪತ್ರೆ, ವೆನ್‌ಲಾಕ್ ಆಸ್ಪತ್ರೆ, ಫಾದರ್ ಮುಲ್ಲರ್ ಆಸ್ಪತ್ರೆ ಹಾಗೂ ಆಳ್ವಾಸ್ ಆಸ್ಪತ್ರೆಗಳು ಲಿಂಕ್ ಆಗಿವೆ.

ವ್ಯಕ್ತಿಗೆ ಹೃದಯಾಘಾತ, ಅಪಘಾತಗಳಾದ ಸಂದರ್ಭ ಅಥವಾ ತುರ್ತು ವೈದ್ಯಕೀಯ ನೆರವು ಬೇಕಾದಾಗ ಆ್ಯಪ್ ಹೊಂದಿದವರು ಆ ಸ್ಥಳದಿಂದ ರಿಕ್ವೆಸ್ಟ್ ಬಟನ್ ಅದುಮಬೇಕು. ತಕ್ಷಣ ಸಮೀಪದಲ್ಲಿರುವ ಆ್ಯಂಬುಲೆನ್ಸ್ ಚಾಲಕರ ಮೊಬೈಲ್ ಬೀಪ್ ಆಗುತ್ತದೆ ಮತ್ತು ಸ್ಥಳದ ಜಿಪಿಎಸ್ ವಿವರಗಳು ಸಿಗುತ್ತದೆ. ಆ ಚಾಲಕ ರಿಕ್ವೆಸ್ಟ್ ಓಕೆ ಮಾಡಿದೊಡನೆ ವ್ಯಕ್ತಿಯ ಮೊಬೈಲ್‌ಗೆ ಮರು ಸಂದೇಶ ರವಾನೆಯಾಗುತ್ತದೆ. ಅಲ್ಲದೆ ಕೆಲವೇ ನಿಮಿಷದಲ್ಲಿ ಆ್ಯಂಬುಲೆನ್ಸ್ ತಲುಪುತ್ತದೆ. ಜೊತೆಗೆ ಪ್ರಥಮ ಚಿಕಿತ್ಸೆ ನೀಡುವವರು ಬೇಕಾಗಿದ್ದರೆ ಅವರನ್ನೂ ಸ್ಥಳಕ್ಕೆ ಕರೆಸುವ ವ್ಯವಸ್ಥೆ ಇದೆ. ಇದರಿಂದ ಜೀವಗಳನ್ನು ಉಳಿಸಲು ಸಾಧ್ಯವಾಗುತ್ತದೆ ಎಂದರಲ್ಲದೆ, ಆ್ಯಂಬುಲೆನ್ಸ್ ಸೇರಿದ ಆಸ್ಪತ್ರೆಗೇ ರೋಗಿ ತೆರಳಬೇಕಾಗಿಲ್ಲ. ಆತ ಬಯಸಿದ ಆಸ್ಪತ್ರೆಗೇ ಕರೆದೊಯ್ಯಲು ಅವಕಾಶವಿದೆ ಎಂದು ಸ್ಪಷ್ಟಪಡಿಸಿದರು.

ಸೆ.16ರಂದು ಸಮ್ಮೇಳನ: ಆರೋಗ್ಯಾಧಿಕಾರಿ ಡಾ. ರಾಮಕೃಷ್ಣ ರಾವ್ ಮಾತನಾಡಿ ಈ ಆ್ಯಪ್‌ನ ಕಾರ್ಯನಿರ್ವಹಣೆ ಕುರಿತು ಸಾರ್ವಜನಿಕರಿಗೆ ತರಬೇತಿ ನೀಡಲು ಸೇವಿಯರ್ ಮತ್ತು ಜಿಲ್ಲಾಧಿಕಾರಿ ಕಚೇರಿಯ ಸಹಯೋಗದಲ್ಲಿ ಸೆ.16ರಂದು ಬೆಳಗ್ಗೆ 9 ಗಂಟೆಗೆ ನಗರದ ಪುರಭವನದಲ್ಲಿ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದರು.

ಸೆ.15ರಂದು ಕಾರ್ಯಾಗಾರ : ಈ ಬಗ್ಗೆ ಸೆ.15ರಂದು ಬೆಳಗ್ಗೆ 9ರಿಂದ ವಿವಿಧ ಆಸ್ಪತ್ರೆಗಳಲ್ಲಿ ಆ್ಯಪ್ ಕುರಿತು ತರಬೇತಿ ಕಾರ್ಯಾಗಾರಗಳು ನಡೆಯಲಿವೆ. ಸುಮಾರು 300ಕ್ಕೂ ಹೆಚ್ಚು ಮಂದಿ ತರಬೇತಿ ಪಡೆದುಕೊಳ್ಳಲಿದ್ದಾರೆ.

ಕೆಎಂಸಿ ಆಸ್ಪತ್ರೆಯ ವೈದ್ಯ ಡಾ. ಜೀದು ರಾಧಾಕೃಷ್ಣನ್, ಡಾ. ಮೇಘನಾ ಮುಕುಂದ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News