ವರದಕ್ಷಿಣೆ ಕಿರುಕುಳ ಕಾಯ್ದೆ ದುರುಪಯೋಗ ಬಗ್ಗೆ ಸುಪ್ರೀಂ ಕಳವಳ

Update: 2018-09-14 14:45 GMT

ಹೊಸದಿಲ್ಲಿ, ಸೆ.14: ವರದಕ್ಷಿಣೆ ಕಿರುಕುಳ ಕಾಯ್ದೆಯ ವಿಧಿ 498ಎಯ ದುರುಪಯೋಗದ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಸರ್ವೋಚ್ಚ ನ್ಯಾಯಾಲಯ, ಪ್ರಕರಣದ ಆರೋಪಿ ನಿರೀಕ್ಷಣಾ ಜಾಮೀನು ಪಡೆಯಬಹುದು ಎಂದು ತಿಳಿಸಿದೆ. ವಿವಾಹಿತ ಮಹಿಳೆಗೆ ಆಕೆಯ ಪತಿ ಮತ್ತು ಆತನ ಮನೆಯವರು ನೀಡುವ ಕಿರುಕುಳವನ್ನು ತಡೆಯುವ ವರದಕ್ಷಿಣೆ ನಿಗ್ರಹ ಕಾಯ್ದೆಯನ್ನು ದುರ್ಬಲಗೊಳಿಸುವ ತೀರ್ಪನ್ನು ಪುನರ್ ಪರಿಶೀಲಿಸುವಂತೆ ಕೋರಿ ಹಾಕಲಾದ ಅರ್ಜಿಗಳ ವಿಚಾರಣೆಯನ್ನು ಶ್ರೇಷ್ಠ ನ್ಯಾಯಾಲಯವು ಕಳೆದ ಎಪ್ರಿಲ್ 23ರಂದು ಕಾಯ್ದಿರಿಸಿತ್ತು.

ವಿಧಿ 498ಎಯ ದುರುಪಯೋಗದ ಬಗ್ಗೆ ಕಾಳಜಿ ವ್ಯಕ್ತಪಡಿಸಿದ ಶ್ರೇಷ್ಠ ನ್ಯಾಯಾಲಯದ ದ್ವಿಸದಸ್ಯ ಪೀಠ ಕಳೆದ ವರ್ಷ ಜುಲೈಯಲ್ಲಿ, ಇಂತಹ ಪ್ರಕರಣಗಳಲ್ಲಿ ಆರೋಪವನ್ನು ಪರಿಶೀಲಿಸದೆ ಬಂಧಿಸುವುದು ಆರೋಪಿಯ ಮಾನವಹಕ್ಕಿನ ಉಲ್ಲಂಘನೆಯಾಗುತ್ತದೆ ಎಂದು ತಿಳಿಸಿತ್ತು. ಸರಕಾರೇತರ ಸಂಸ್ಥೆ ನ್ಯಾಯಾಧಾರ್ ಹಾಕಿದ ಅರ್ಜಿಯ ವಿಚಾರಣೆಯನ್ನು ನಡೆಸುವ ವೇಳೆ ನ್ಯಾಯಾಲಯ ಈ ಆದೇಶವನ್ನು ನೀಡಿತ್ತು. ವಿವಾಹಿತ ಮಹಿಳೆಯರು ತಮ್ಮ ಪತಿಯ ಮನೆಯಲ್ಲಿ ದೈಹಿಕ ಹಲ್ಲೆಗೆ ಒಳಗಾಗುವುದನ್ನು ತಡೆಯುವ ಉದ್ದೇಶದಿಂದ ವಿಧಿ 498ಎಯನ್ನು ರಚಿಸಲಾಗಿದೆ.

ಆದರೆ ಇತ್ತೀಚೆಗೆ ಈ ಕಾನೂನನ್ನು ಪುರುಷರನ್ನು ಬೆದರಿಸಲು ಬಳಸುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವುದು ವಿವಾದಕ್ಕೆ ಕಾರಣವಾಗಿದೆ. ವರದಕ್ಷಿಣೆಯು ವೈವಾಹಿಕ ಜೀವನದ ಮೇಲೆ ಪರಿಣಾಮ ಬೀರುವುದರಿಂದ ಮಹಿಳೆಯರಿಗೆ ನ್ಯಾಯ ಒದಗಿಸಬೇಕಿದೆ. ಆದರೆ, ಇನ್ನೊಂದೆಡೆ, ಇದು ಪರುಷರ ಹಕ್ಕನ್ನು ಕಸಿಯುವುದನ್ನೂ ತೆಯಬೇಕಿದೆ ಎಂದು ನ್ಯಾಯಾಲಯ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News