ತಮಿಳುನಾಡಿನಲ್ಲಿ ಭೀಕರ ಅಪಘಾತ: ಶ್ರೀದುರ್ಗಾಂಬಾ ಬಸ್ ಮಾಲಕ ಮೃತ್ಯು

Update: 2018-09-14 15:10 GMT

ಕುಂದಾಪುರ, ಸೆ.14: ತಮಿಳುನಾಡು ರಾಜ್ಯದ ನಮಕ್ಕಲ್ ಜಿಲ್ಲೆಯ ಕರೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕುಂದಾಪುರದ ಶ್ರೀದುರ್ಗಾಂಬಾ ಮೋಟಾರ್ಸ್‌ ಕಂಪೆನಿಯ ಪಾಲುದಾರ ಎಸ್. ಸುನೀಲ್ ಚಾತ್ರ(42) ಮೃತಪಟ್ಟಿದ್ದಾರೆ.

ಕಮಲಶಿಲೆ ಶ್ರೀಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಸ್ಥಾನದ ಆನುವಂಶಿಕ ಆಡಳಿತ ಧರ್ಮದರ್ಶಿ ಸಚ್ಚಿದಾನಂದ ಚಾತ್ರರ ಪುತ್ರರಾಗಿರುವ ಸುನೀಲ್ ಚಾತ್ರ, ಗಣೇಶ ಚತುರ್ಥಿ ಹಬ್ಬಗೆ ಊರಿಗೆ ಬಂದಿದ್ದು, ಸೆ.13ರಂದು ಹಬ್ಬ ಮುಗಿಸಿ, ತಮಿಳುನಾಡಿನ ಕರೂರು ಸಮೀಪ ಬಸ್ ಬಾಡಿ ಕೋಚ್ ಕಂಪೆನಿ ಯಲ್ಲಿರುವ ತಮ್ಮ ಹೊಸ ಬಸ್‌ಗಳನ್ನು ಪರಿಶೀಲಿಸಲು ತೆರಳಿದ್ದರು.

ಅಲ್ಲಿಂದ ಅವರು ಚಾಲಕನೊಂದಿಗೆ ಪಜೆರೋ ಸ್ಪೋರ್ಟ್ಸ್ ಕಾರಿನಲ್ಲಿ ಬೆಂಗಳೂರಿಗೆ ವಾಪಾಸ್ಸು ಬರುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿಯ ಕಾಮಗಾರಿ ನಡೆಯುತ್ತಿದ್ದ ಕಟ್ಟಡದ ಗೋಡೆಗೆ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಇದರಿಂದ ಗಂಭೀರ ಗಾಯಗೊಂಡು ಸುನೀಲ್ ಚಾತ್ರ ಸ್ಥಳದಲ್ಲಿಯೇ ಮೃತಪಟ್ಟರೆಂದು ತಿಳಿದುಬಂದಿದೆ. ಅಪಘಾತದಿಂದ ಉತ್ತರ ಭಾರತ ಮೂಲದ ಕಾರು ಚಾಲಕ ತೀವ್ರವಾಗಿ ಗಾಯಗೊಂಡು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಶ್ರೀದುರ್ಗಾಂಬಾ ಮೋಟಾರ್ಸ್‌ ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ಪ್ರಮುಖ ಸಾರಿಗೆ ಸಂಸ್ಥೆಯಾಗಿದ್ದು, ಶಿಕ್ಷಣದ ಬಳಿಕ ಸುನೀಲ್ ಚಾತ್ರ ತಂದೆ ಜೊತೆ ಸಾರಿಗೆ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದರು. ಸಂಸ್ಥೆಯ ಪಾಲುದಾರರಾಗಿರುವ ಇವರು, ಛತ್ತೀಸ್‌ಗಢದ ರಾಯಪುರ, ಪಂಜಾಬ್‌ನ ಅಮೃತ್‌ಸರ ಹಾಗೂ ಬೋಪಾಲ್‌ನಲ್ಲಿ ಸುಮಾರು 600ಕ್ಕೂ ಅಧಿಕ ಬಸ್‌ಗಳನ್ನು ನಡೆಸುತ್ತಿದ್ದಾರೆ.

ಮೃತರು ಪತ್ನಿ ಹಾಗೂ 10 ವರ್ಷದ ಪುತ್ರಿ, ತಂದೆ ತಾಯಿ, ಇಬ್ಬರು ಸಹೋದರರು, ಓರ್ವ ಸಹೋದರಿಯನ್ನು ಅಗಲಿದ್ದಾರೆ. ಸೆ.16ರಂದು ಬೆಳಗ್ಗೆ ಕುಂದಾಪುರ ತಾಲೂಕಿನ ಸಿದ್ದಾಪುರ ಸಮೀಪದ ಹಳ್ಳಿಹೊಳೆಯ ಮೂಲ ಮನೆಯಲ್ಲಿ  ಅಂತಿಮ ಸಂಸ್ಕಾರ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News