ಶಾಸಕರ ಬೆಂಬಲದ ಬಗ್ಗೆ ಕಥೆ ಕಟ್ಟುತ್ತಿರುವ ಬಿಜೆಪಿ: ಸಚಿವ ಪುಟ್ಟರಾಜು

Update: 2018-09-14 15:36 GMT

ಉಡುಪಿ, ಸೆ.14: ರಾಜ್ಯದಲ್ಲಿ ಬಿಜೆಪಿಗೆ ಮಾಧ್ಯಮಗಳ ಬೆಂಬಲ ಜಾಸ್ತಿ ಇದೆ. ಇದನ್ನು ಇಟ್ಟುಕೊಂಡು ಶಾಸಕರ ಬಲ ಇಲ್ಲದಿದ್ದರೂ, ಇರುವ ಹಾಗೆ ಕಥೆ ಕಟ್ಟುತ್ತಿದ್ದಾರೆ. ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಆಟ ಆಡುತ್ತಿದ್ದಾರೆ. ಬಿಜೆಪಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ನಂಬಿಕೆಯಿಲ್ಲ ಎಂದು ರಾಜ್ಯ ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು ಟೀಕಿಸಿದ್ದಾರೆ.

ಉಡುಪಿಯ ಜೆಡಿಎಸ್ ಜಿಲ್ಲಾ ಕಚೇರಿಯಲ್ಲಿಂದು ಮಾಧ್ಯಮದವರ ಪ್ರಶ್ನೆಗೆ ಅವರು ಈ ರೀತಿ ಪ್ರತಿಕ್ರಿಯಿಸಿದರು. ರಾಜ್ಯ ಸಮ್ಮಿಶ್ರ ಸರಕಾರ ಸುಭದ್ರವಾಗಿದೆ. ಯಾರಿಂದಲೂ ಸರಕಾರವನ್ನು ಅಲ್ಲಾಡಿಸಲು ಸಾಧ್ಯವಿಲ್ಲ. ಬಿಜೆಪಿಯವರು ಮಾಧ್ಯಮದವರ ದಾರಿ ತಪ್ಪಿಸುತ್ತಿದ್ದಾರೆ. ಕೆಲವು ಬಿಜೆಪಿ ಪ್ರೇರಿತ ಮಾಧ್ಯಮ ಗಳು ಪದೇ ಪದೇ ಸುಳ್ಳುಗಳನ್ನು ಹೇಳುತ್ತ ಅದನ್ನೇ ನಿಜ ಮಾಡಲು ಹೊರಟಿವೆ. ಇದು ಗೊಂದಲಕ್ಕೆ ಕಾರಣವಾಗಿದೆ. ಯಾವುದೇ ಶಾಸಕರು ಬಿಜೆಪಿ ಜೊತೆ ಹೋಗಲು ಸಾಧ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಮಂಡ್ಯದ ಯಾವುದೇ ಶಾಸಕರ ಶರ್ಟ್ ಮುಟ್ಟಲು ಕೂಡ ಬಿಜೆಪಿಯವರಿಗೆ ಸಾಧ್ಯವಿಲ್ಲ. ಅಲ್ಲಿನ ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರು ಕುಮಾರ ಸ್ವಾಮಿಯವರ ಬೆನ್ನಿಗೆ ಬೆನ್ನಾಗಿ ನಿಂತಿದ್ದಾರೆ. ಅವರ ಹಣಕ್ಕೆಲ್ಲ ನಮ್ಮ ಶಾಸಕರು ಬಗ್ಗಲ್ಲ. ಮಂಡ್ಯದ ಶಾಸಕರು ಸಿಎಂಗೆ ಬಾಡಿಗಾರ್ಡ್‌ಗಳಾಗಿದ್ದಾರೆ. ನಮ್ಮನ್ನು ಯಾರಿಂದಲೂ ಮುಟ್ಟಲು ಸಾಧ್ಯವಿಲ್ಲ ಎಂದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇದೀಗ ವಿದೇಶ ಪ್ರವಾಸದಲ್ಲಿದ್ದಾರೆ. ಅವರು ಬಂದ ಕೂಡಲೇ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ನಡೆಸಲಾಗು ತ್ತದೆ. ನನಗೆ ಸಣ್ಣ ನೀರಾವರಿ ಖಾತೆಯಲ್ಲಿ ಖುಷಿಯಿದೆ. ಕಾಂಗ್ರೆಸ್- ಜೆಡಿಎಸ್ ಮೈತ್ರಿಯಾಗಿ ಲೋಕಸಭಾ ಚುನಾವಣೆಯನ್ನು ಎದುರಿಸಬಹುದು. ಲೋಕ ಸಭಾ ಚುನಾವಣೆಯಲ್ಲಿ 25 ಸ್ಥಾನವನ್ನು ಗೆಲ್ಲುವ ವಿಶ್ವಾಸ ಇದೆ ಎಂದು ಅವರು ತಿಳಿಸಿದರು.

ಬಳಿಕ ಜಿಲ್ಲಾ ಜೆಡಿಎಸ್ ವತಿಯಿಂದ ಸಚಿವರನ್ನು ಕಚೇರಿಯಲ್ಲಿ ಸನ್ಮಾನಿಸ ಲಾಯಿತು. ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ, ಕಾರ್ಯಾಧ್ಯಕ್ಷ ವಾಸುದೇವ ರಾವ್, ಮುಖಂಡರಾದ ಜಯಕುಮಾರ್ ಪರ್ಕಳ, ದಿಲೇಶ್ ಶೆಟ್ಟಿ, ಶೇಖರ್ ಕೋಟ್ಯಾನ್, ಉದಯ ಹೆಗ್ಡೆ, ಶಾಲಿನಿ ಶೆಟ್ಟಿ ಕೆಂಚನೂರು, ಪ್ರದೀಪ್ ಜಿ. ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News