ವಿಜಯ್ ಮಲ್ಯ ವಿರುದ್ಧ ಲುಕ್ ಔಟ್ ನೋಟೀಸನ್ನು ಬದಲಾಯಿಸಿದ್ದು ಸಿಬಿಐ ಜಂಟಿ ನಿರ್ದೇಶಕ ಎ.ಕೆ. ಶರ್ಮ: ಎನ್ ಡಿಟಿವಿ
ಹೊಸದಿಲ್ಲಿ, ಸೆ. 14 : ಬ್ಯಾಂಕುಗಳಿಗೆ ವಂಚಿಸಿ ವಿದೇಶಕ್ಕೆ ಪರಾರಿಯಾದ ವಿಜಯ್ ಮಲ್ಯ ದೇಶ ಬಿಡದಂತೆ ಸಿಬಿಐ ಹೊರಡಿಸಿದ್ದ ಲುಕ್ ಔಟ್ ನೋಟಿಸ್ ಅನ್ನು ಅಂದಿನ ಸಿಬಿಐ ಜಂಟಿ ನಿರ್ದೇಶಕ ( ಬ್ಯಾಂಕಿಂಗ್ ) ಎ.ಕೆ. ಶರ್ಮ ಸಡಿಲಗೊಳಿಸಿದ್ದರು ಎಂದು ಎನ್ ಡಿಟಿವಿ ವಿಶೇಷ ತನಿಖಾ ವರದಿಯಲ್ಲಿ ಶುಕ್ರವಾರ ರಾತ್ರಿ ಹೇಳಿದೆ. ವಿಶೇಷವೆಂದರೆ, ಗುಜರಾತ್ ಕೇಡರಿನ ಇದೇ ಎ.ಕೆ. ಶರ್ಮ ಈಗ ಸಿಬಿಐನ ಹೆಚ್ಚುವರಿ ನಿರ್ದೇಶಕರಾಗಿದ್ದಾರೆ ಮತ್ತು ನೀರವ್ ಮೋದಿ ಬ್ಯಾಂಕ್ ವಂಚನೆ ಪ್ರಕರಣದ ತನಿಖೆಯ ಉಸ್ತುವಾರಿ ಹೊತ್ತಿದ್ದಾರೆ !
ಅಂದಿನ ಸಿಬಿಐ ನಿರ್ದೇಶಕ ಅನಿಲ್ ಸಿನ್ಹ ಮುಂಬೈಯಲ್ಲಿ ಬ್ಯಾಂಕ್ ಮುಖ್ಯಸ್ಥರೊಂದಿಗೆ ಸಭೆ ನಡೆಸುತ್ತಿರುವಾಗಲೇ ವಿಜಯ್ ಮಲ್ಯ ಲಂಡನ್ ಗೆ ಹೋಗಿರುವ ಸುದ್ದಿ ಅವರಿಗೆ ಗೊತ್ತಾಗುತ್ತದೆ. ಇದು ಸಿಬಿಐ ನಿರ್ದೇಶಕರಿಗೆ ಅಚ್ಚರಿಯ ವಿಷಯವಾಗಿತ್ತು. ಬ್ಯಾಂಕ್ ಮುಖ್ಯಸ್ಥರು ಸಿಬಿಐ ನಿರ್ದೇಶಕರನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ. ಅಲ್ಲಿಂದ ದಿಲ್ಲಿಗೆ ಮರಳುವ ಅನಿಲ್ ಸಿನ್ಹ ಮರುದಿನ ಮುಂಜಾನೆ ಸಿಬಿಐ ಪ್ರಧಾನ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಎಲ್ಲ ಜಂಟಿ ನಿರ್ದೇಶಕರ ಉಪಸ್ಥಿತಿಯಲ್ಲೇ ಜಂಟಿ ನಿರ್ದೇಶಕ ಎ.ಕೆ. ಶರ್ಮ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡು ಮಲ್ಯ ವಿರುದ್ಧದ ಲುಕ್ ಔಟ್ ನೋಟೀಸನ್ನು ಸಡಿಲಗೊಳಿಸಿ ಅವರನ್ನು ಪರಾರಿಯಾಗಲು ಬಿಟ್ಟ ಬಗ್ಗೆ ವಿವರಣೆ ಕೇಳುತ್ತಾರೆ. ಆಗ ಸೂಕ್ತ ವಿವರಣೆ ನೀಡದ ಶರ್ಮ ಪ್ರಕರಣದಲ್ಲಿ ಮಲ್ಯ ವಿರುದ್ಧದ ಆರೋಪದಲ್ಲಿ ಸೂಕ್ತ ಸಾಕ್ಷ್ಯಾಧಾರಗಳಿರಲಿಲ್ಲ ಎಂದು ಹೇಳುತ್ತಾರೆ.
ವಾಸ್ತವದಲ್ಲಿ 60 ಕೋಟಿಗಿಂತ ಹೆಚ್ಚು ಮೊತ್ತದ ಪ್ರಕರಣದಲ್ಲಿ ಜಂಟಿ ನಿರ್ದೇಶಕ ನೇರವಾಗಿ ನಿರ್ಧಾರ ತೆಗೆದುಕೊಳ್ಳುವಂತಿಲ್ಲ. ಅದಕ್ಕೆ ಅವರು ಸಿಬಿಐ ನಿರ್ದೇಶಕರ ಅನುಮತಿ ಪಡೆಯಬೇಕು. ಇನ್ನು ಲುಕ್ ಔಟ್ ನೋಟೀಸನ್ನು ಸಡಿಲಗೊಳಿಸುವುದೂ ಅಷ್ಟು ಸುಲಭವಲ್ಲ. ಅದಕ್ಕೆ ಪ್ರಬಲವಾದ ಕಾರಣ ಬೇಕು. ಆದರೆ ಈ ನಿಯಮಗಳನ್ನು ಸರಿಯಾಗಿ ಪಾಲಿಸದೆಯೇ ಶರ್ಮ ಅವರು ಮಲ್ಯ ವಿರುದ್ಧದ ನೋಟೀಸನ್ನು ಸಡಿಲಗೊಳಿಸಿದ್ದಾರೆ ಎಂದು ಎನ್ ಡಿಟಿವಿ ವರದಿ ಮಾಡಿದೆ.
ಇಷ್ಟೆಲ್ಲಾ ಆದ ಮೇಲೂ ಶರ್ಮಾ ಅವರ ವಿರುದ್ಧ ತಕ್ಷಣ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ಎನ್ ಡಿಟಿವಿ ವರದಿ ಮಾಡಿದೆ.