ಕಿಂಡಿ ಅಣೆಕಟ್ಟುಗಳ ಮೇಲೆ ಲಘು ವಾಹನ ಸಂಚಾರಕ್ಕೆ ಅವಕಾಶ: ಸಣ್ಣ ನೀರಾವರಿ ಸಚಿವ ಪುಟ್ಟರಾಜು

Update: 2018-09-14 16:17 GMT

ಉಡುಪಿ, ಸೆ.14: ಸಣ್ಣ ನೀರಾವರಿ ಇಲಾಖೆಯಿಂದ ನೂತನವಾಗಿ ನಿರ್ಮಿಸ ಲಾಗುವ ಕಿಂಡಿ ಅಣೆಕಟ್ಟುಗಳನ್ನು ಅವುಗಳ ಮೇಲೆ ಲಘು ವಾಹನಗಳು ಸಂಚರಿಸಲು ಅನುಕೂಲವಾಗು ಮಾದರಿಯಲ್ಲಿ ನಿರ್ಮಿಸಲಾಗುವುದು ಎಂದು ಸಣ್ಣ ನೀರಾವರಿ ಸಚಿವ ಸಿ.ಎಸ್. ಪುಟ್ಟರಾಜು ತಿಳಿಸಿದ್ದಾರೆ.

ಶುಕ್ರವಾರ ಉಡುಪಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ನೀರಾವರಿ ಅಭಿವೃದ್ಧಿ ದೃಷ್ಟಿಯಿಂದ ಕಿಂಡಿ ಅಣೆಕಟ್ಟುಗಳನ್ನು ನಿರ್ಮಿಸಲಾ ಗುತ್ತಿದೆ. ಆದರೆ ಇವುಗಳ ಮೇಲೆ ವಾಹನಗಳ ಸಂಚಾರಕ್ಕೂ ಅವಕಾಶ ನೀಡಬೇಕು ಎಂದು ಸಾರ್ವಜನಿಕರ ಬೇಡಿಕೆ ಇದೆ. ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ನಿರ್ಮಿಸಲಾಗುವ ಎಲ್ಲಾ ಕಿಂಡಿ ಅಣೆಕಟ್ಟುಗಳ ಮೇಲೆ ಸ್ಥಳೀಯ ವಾಹನ ಸಾಂದ್ರತೆ ಆಧರಿಸಿ ವಾಹನಗಳ ಸಂಚಾರಕ್ಕೆ ಪೂರಕವಾಗುವಂತೆ ನಿರ್ಮಿಸಲಾಗುವುದು. ಗರಿಷ್ಠ 7 ಮೀ. ಅಗಲದವರೆಗೂ ವಾಹನ ಸಂಚಾರಕ್ಕೆ ಅವಕಾಶ ನೀಡಲು ಸಾಧ್ಯವಿದೆ ಎಂದು ಸಚಿವರು ತಿಳಿಸಿದರು.

ನೆರೆ ಬಂದಾಗ ಕಿಂಡಿ ಅಣೆಕಟ್ಟುಗಳಲ್ಲಿ ಮರಮಟ್ಟುಗಳು, ಕಸಕಡ್ಡಿಗಳು ತುಂಬಿ ನೀರಿನ ಸರಾಗ ಹರಿವಿಗೆ ತೊಂದರೆಯಾಗುತ್ತಿದ್ದು, ಇಂತಹ ಕಡೆಗಳಲ್ಲಿ ತ್ವರಿತವಾಗಿ ಇವುಗಳನ್ನು ತೆಗೆಸಲು ಕ್ರಮಕೈಗೊಳ್ಳಬೇಕು. ಇದಕ್ಕಾಗಿ ಪ್ರತೀ ವಿಧಾನಸಭಾ ಕ್ಷೇತ್ರಕ್ಕೆ 20 ಲಕ್ಷ ರೂ. ಅನುದಾನ ನೀಡಲಾಗುವುದು ಎಂದು ಸಚಿವರು ತಿಳಿಸಿದರು.

ಕಿಂಡಿ ಅಣೆಕಟ್ಟು ಮತ್ತು ಚಿಕ್ಕ ಡ್ಯಾಂಗಳಲ್ಲಿ ನೀರು ಸಂಗ್ರಹಿಸಲು ಅಳವಡಿ ಸಲಾಗುವ ಹಲಗೆಗಳು ಬಹಳ ಕಾಲ ಬಾಳಿಕೆ ಬರುತ್ತಿಲ್ಲವಾದ್ದರಿಂದ ಮಹಾರಾಷ್ಟ್ರ, ತೆಲಂಗಾಣ ಮಾದರಿಯಲ್ಲಿ ಇಂತಹ ಅಣೆಕಟ್ಟುಗಳಿಗೆ ಹಲಗೆ ಅಳವಡಿಸುವ ಬಗ್ಗೆ ಚಿಂತಿಸಲಾಗುತ್ತಿದೆ ಎಂದು ತಿಳಿಸಿದರು.

ಸಮುದ್ರದ ಉಪ್ಪುನೀರು ನದಿ ಸಿಹಿನೀರಿನೊಂದಿಗೆ ಸೇರುವುದನ್ನು ತಪ್ಪಿಸಲು ಅಗತ್ಯವಿರುವ ಕಡೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕು. ಇದರಿಂದ ಕುಡಿಯುವ ನೀರು ಸಾಕಷ್ಟು ಪ್ರಮಾಣದಲ್ಲಿ ದೊರೆಯುವುದಲ್ಲದೇ, ಕೃಷಿ ಚಟುವಟಿಕೆಗಳಿಗೂ ನೀರು ದೊರೆಯಲಿದೆ. ರಾಜ್ಯದಲ್ಲಿರುವ ಎಲ್ಲಾ ಕೆರೆಗಳನ್ನು ರಕ್ಷಿಸಲು ರಾಜ್ಯ ಸರಕಾರ ಸರ್ವ ಕ್ರಮ ಕೈಗೊ್ಳಲಿದೆ ಎಂದು ಸಚಿವರು ನುಡಿದರು.

ಪಶ್ಚಿಮವಾಹಿನಿ ಯೋಜನೆಯಲ್ಲಿ ಉಡುಪಿ ಜಿಲ್ಲೆಯಲ್ಲಿ ಸುಮಾರು 673 ಕೋಟಿ ರೂ. ಅಂದಾಜು ಮೊತ್ತದ 408 ಕಾಮಗಾರಿಗಳನ್ನು ಕೈಗೆತ್ತಿ ಕೊಳ್ಳಲಾಗುವುದು. ಇದರಲ್ಲಿ ಮೊದಲ ಹಂತದಲ್ಲಿ 52.60 ಕೋಟಿ ರೂ. ಮೊತ್ತದ 14 ಕಾಮಗಾರಿಗಳಿಗೆ ಟೆಂಡರ್ ಕರೆಯಲಾಗಿದೆ ಎಂದು ಪುಟ್ಟರಾಜು ತಿಳಿಸಿದರು.

ಸಭೆಯಲ್ಲಿ ಶಾಸಕರಾದ ಲಾಲಾಜಿ ಮೆಂಡನ್, ಹಾಲಾಡಿ ಶ್ರೀನಿವಾಸ ಶೆಟ್ಟಿ, ಪ್ರತಾಪ್‌ಚಂದ್ರ ಶೆಟ್ಟಿ, ಜಿಪಂ ಅಧ್ಯಕ್ಷ ದಿನಕರ ಬಾಬು, ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಸಣ್ಣ ನೀರಾವರಿ ಇಲಾಖೆ ಕಾರ್ಯದರ್ಶಿ ಮೃತ್ಯುಂಜಯ ಸ್ವಾಮಿ, ಅಪರ ಜಿಲ್ಲಾಧಿಕಾರಿ ವಿದ್ಯಾಕುವಾರಿ ಮತ್ತಿತರರು ಉಪಸ್ಥಿತರಿದ್ದರು.

ಸಣ್ಣ ನೀರಾವರಿ ಇಲಾಖೆ ಕಾರ್ಯಕಾರಿ ಅಭಿಯಂತರ ಗೋಕುಲದಾಸ್ ಜಿಲ್ಲೆಯಲ್ಲಿರುವ ಸಣ್ಣ ನೀರಾವರಿ ಇಲಾಖೆಯ ಕಾಮಗಾರಿಗಳ ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News