‘ಆದರ್ಶ ಸೊಸೆ’ ಕೋರ್ಸ್ ಆರಂಭಿಸಲು ಮುಂದಾದ ವಿವಿ !

Update: 2018-09-14 16:35 GMT

ಭೋಪಾಲ್, ಸೆ.14: ಮಧ್ಯಪ್ರದೇಶದ ಭೋಪಾಲ್ ವಿಶ್ವವಿದ್ಯಾನಿಲಯವು ಶೀಘ್ರದಲ್ಲೇ ಆದರ್ಶ ಸೊಸೆ ಕೋರ್ಸುಗಳನ್ನು ಆರಂಭಿಸಲು ಚಿಂತನೆ ನಡೆಸುತ್ತಿದೆ. ಈ ಕುರಿತು ಮಾತನಾಡಿದ ವಿಶ್ವವಿದ್ಯಾನಿಲಯದ ಉಪಕುಲಾಪತಿ ಪ್ರೊ. ಡಿ.ಸಿ.ಗುಪ್ತಾ, ಈ ಕೋರ್ಸಿನ ಉದ್ದೇಶ ಯುವತಿಯರು ತಮ್ಮ ವಿವಾಹದ ನಂತರ ಸೇರುವ ಮನೆಯ ವಾತಾವರಣಕ್ಕೆ ಯಾವ ರೀತಿ ಒಗ್ಗಿಕೊಳ್ಳಬೇಕು ಎಂಬುದನ್ನು ಕಲಿಸುವುದೇ ಆಗಿದೆ ಎಂದು ತಿಳಿಸಿದ್ದಾರೆ.

ಒಂದು ವಿಶ್ವವಿದ್ಯಾನಿಲಯವಾಗಿ ನಮ್ಮ ಮೇಲೆ ಕೆಲವು ಸಾಮಾಜಿಕ ಜವಾಬ್ದಾರಿಗಳೂ ಇವೆ. ನಾವು ನಮ್ಮನ್ನು ಕೇವಲ ಶಿಕ್ಷಣಕ್ಕಷ್ಟೇ ಸೀಮಿತಗೊಳಿಸಬಾರದು. ನಮ್ಮ ಉದ್ದೇಶ ಕುಟುಂಬವನ್ನು ಒಗ್ಗಟ್ಟಿನಲ್ಲಿಡುವ ಸೊಸೆಯನ್ನು ಸಿದ್ಧಪಡಿಸುವುದೇ ಆಗಿದೆ ಎಂದು ಗುಪ್ತಾ ತಿಳಿಸಿದ್ದಾರೆ. ಇದು ಮಹಿಳಾ ಸಬಲೀಕರಣ ಭಾಗವಾಗಿದೆ ಎಂದು ವಾದಿಸಿರುವ ಗುಪ್ತಾ, ಈ ಕೋರ್ಸನ್ನು ಮನಃಶಾಸ್ತ್ರ, ಸಮಾಜಶಾಸ್ತ್ರ ಮತ್ತು ಮಹಿಳಾ ಅಧ್ಯಯನ ವಿಭಾಗಗಳಲ್ಲಿ ಪರೀಕ್ಷಾರ್ಥವಾಗಿ ಆರಂಭಿಸಲಾಗುವುದು ಎಂದು ತಿಳಿಸಿದ್ದಾರೆ. ಈ ಕೋರ್ಸ್‌ನಲ್ಲಿ ಯಾವೆಲ್ಲಾ ವಿಷಯಗಳು ಇರಲಿವೆ ಎಂಬ ಪ್ರಶ್ನೆಗೆ ಉತ್ತರಿಸಿದ ಗುಪ್ತಾ, ಸಮಾಜಶಾಸ್ತ್ರ, ಮನಃಶಾಸ್ತ್ರ ಹಾಗೂ ಇತರ ವಿಷಯಗಳು ಇರಲಿವೆ. ನಮ್ಮ ಮುಖ್ಯ ಉದ್ದೇಶವೆಂದರೆ, ಕೋರ್ಸ್ ಮುಗಿಯುವ ವೇಳೆಗೆ ಯುವತಿಯರು ಕುಟುಂಬದ ಒಳಹೊರಗುಗಳನ್ನು ತಿಳಿಯುವಷ್ಟು ಸಮರ್ಥರಾಗಬೇಕು. ಸಮಾಜದಲ್ಲಿ ಉತ್ತಮ ಬದಲಾವಣೆ ತರಲು ನಾವು ಮಾಡುವ ಪ್ರಯತ್ನ ಇದು ಎಂದು ವಿವರಿಸಿದ್ದಾರೆ.

ಈ ಕೋರ್ಸ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಶಿಕ್ಷಣತಜ್ಞರು, ಭೋಪಾಲ್ ವಿಶ್ವವಿದ್ಯಾನಿಲಯ ಇಂಥ ಅಸಂಬದ್ಧ ಕೋರ್ಸ್‌ಗಳನ್ನು ಆರಂಭಿಸುವ ಬದಲು ತನ್ನ ಮೂಲಭೂತ ಸೌಕರ್ಯಗಳನ್ನು ಉತ್ತಮಗೊಳಿಸಲು ಪ್ರಯತ್ನಿಸಬೇಕು ಎಂದು ತಿಳಿಸಿದ್ದಾರೆ.

ಈ ಹಿಂದೆಯೂ ಭೋಪಾಲ್ ವಿಶ್ವವಿದ್ಯಾನಿಲಯ ಇಂಥ ಹಲವು ಕೋರ್ಸ್‌ಗಳನ್ನು ಆರಂಭಿಸಿ ಅರ್ಧದಲ್ಲೇ ನಿಲ್ಲಿಸಿದ ಉದಾಹರಣೆಗಳಿವೆ ಎಂದು ಶಿಕ್ಷಣತಜ್ಞರು ದೂರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News