ಮಧ್ಯಪ್ರದೇಶ: ಸಿಎಂಗಿಂತ ಮೊದಲೇ ಕಾಲೇಜು ಉದ್ಘಾಟಿಸಿದ ಕಾಂಗ್ರೆಸ್ ಸಂಸದನ ವಿರುದ್ಧ ಪ್ರಕರಣ ದಾಖಲು

Update: 2018-09-14 16:49 GMT

ಭೋಪಾಲ, ಸೆ.14: ಮಧ್ಯಪ್ರದೇಶದ ರಟ್ಲಂ ಎಂಬಲ್ಲಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಉದ್ಘಾಟಿಸಬೇಕಿದ್ದ ಸರಕಾರಿ ವೈದ್ಯಕೀಯ ಕಾಲೇಜಿನ ಉದ್ಘಾಟನೆ ನೆರವೇರಿಸಿದ ಕಾಂಗ್ರೆಸ್ ಸಂಸದರ ವಿರುದ್ಧ ಪ್ರಕರಣ ದಾಖಲಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ರಟ್ಲಂನ ಬಾಂಜ್ಲಿ ಎಂಬಲ್ಲಿ 350 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಸರಕಾರಿ ವೈದ್ಯಕೀಯ ಕಾಲೇಜನ್ನು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಬುಧವಾರ ಉದ್ಘಾಟಿಸುವ ಕಾರ್ಯಕ್ರಮವಿತ್ತು. ಆದರೆ ಮಂಗಳವಾರ ತನ್ನ ಕೆಲವು ಬೆಂಬಲಿಗರು ಹಾಗೂ ಪುರೋಹಿತರೊಂದಿಗೆ ಸ್ಥಳಕ್ಕೆ ತೆರಳಿದ ಸ್ಥಳೀಯ ಕಾಂಗ್ರೆಸ್ ಸಂಸದ, ಮಾಜಿ ಕೇಂದ್ರ ಸಚಿವ ಕಾಂತೀಲಾಲ್ ಭುರಿಯಾ, ರಿಬ್ಬನ್ ಕತ್ತರಿಸುವ ಮೂಲಕ ಮೆಡಿಕಲ್ ಕಾಲೇಜಿನ ಉದ್ಘಾಟನೆ ನೆರವೇರಿಸಿದ್ದಾರೆ.

ಮಂಗಳವಾರ ಶುಭ ದಿನವಾಗಿರುವ ಕಾರಣ ಮತ್ತು ಈ ಯೋಜನೆಗೆ ಈ ಹಿಂದಿನ ಯುಪಿಎ ಸರಕಾರ ಮಂಜೂರಾತಿ ನೀಡಿದ್ದರಿಂದ ಮಂಗಳವಾರ ನಾನೇ ಕಾಲೇಜಿನ ಉದ್ಘಾಟನೆ ನೆರವೇರಿಸಿದ್ದೇನೆ ಎಂದು ಭುರಿಯಾ ಮಾಧ್ಯಮದವರಿಗೆ ತಿಳಿಸಿದ್ದಾರೆ.

 ಈ ಕುರಿತ ಮಾಹಿತಿ ದೊರಕುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಅಧಿಕಾರಿಗಳು ಅಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಿದರು. ಸಂಸದ ಭುರಿಯಾ ವಿರುದ್ಧ ಐಪಿಸಿಯ ವಿವಿಧ ಕಾಲಂಗಳಡಿ ಪ್ರಕರಣ ದಾಖಲಿಸಿರುವುದಾಗಿ ರಟ್ಲಂ ಪೊಲೀಸ್ ಅಧೀಕ್ಷಕ ಗೌರವ್ ತಿವಾರಿ ತಿಳಿಸಿದ್ದಾರೆ.

ಬಳಿಕ, ಬುಧವಾರ ನಿಗದಿತ ಸಮಯದಲ್ಲಿ ಮುಖ್ಯಮಂತ್ರಿ ಚೌಹಾಣ್ ಅಧಿಕೃತವಾಗಿ ಉದ್ಘಾಟನೆ ನೆರವೇರಿಸಿದರು. ರಾಜ್ಯದ ಉಜ್ಜಯಿನಿ ವಿಭಾಗಕ್ಕೆ ಇದೊಂದು ಬೃಹತ್ ಕೊಡುಗೆಯಾಗಿದ್ದು ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ಈ ಕಾಲೇಜು ಮಾದರಿಯಾಗಿ ಹೊರಹೊಮ್ಮಲಿದೆ ಎಂದು ಮುಖ್ಯಮಂತ್ರಿ ತಿಳಿಸಿದರು. ರಾಜ್ಯದಲ್ಲಿ 1964ರ ಬಳಿಕ ಯಾವುದೇ ಹೊಸ ವೈದ್ಯಕೀಯ ಕಾಲೇಜುಗಳ ಸ್ಥಾಪನೆಯಾಗಿಲ್ಲ. ಆದರೆ ತಾನು ಮುಖ್ಯಮಂತ್ರಿಯಾದ ಬಳಿಕ ಎರಡು ಹೊಸ ವೈದ್ಯಕೀಯ ಕಾಲೇಜುಗಳು ಆರಂಭವಾಗಿದ್ದು ಈಗ ರಾಜ್ಯದಲ್ಲಿ 11 ಸರಕಾರಿ ವೈದ್ಯಕೀಯ ಕಾಲೇಜು ಸೇರಿದಂತೆ ಒಟ್ಟು 17 ವೈದ್ಯಕೀಯ ಕಾಲೇಜುಗಳಿವೆ ಎಂದವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News