ಸೆ,20: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯ; ನಾಲ್ಕು ಟೋಲ್‍ಗೇಟ್ ಬಳಿ ಪ್ರತಿಭಟನೆ

Update: 2018-09-14 17:09 GMT

ಪಡುಬಿದ್ರೆ, ಸೆ. 14: ಸ್ಥಳೀಯರಿಗೆ ಟೋಲ್‍ನಲ್ಲಿ ವಿನಾಯಿತಿ ನೀಡಬೇಕು, ರಾಷ್ಟ್ರೀಯ ಹೆದ್ದಾರಿ 66ರ ಬಾಕಿ ಕಾಮಗಾರಿಯನ್ನು ಕೂಡಲೇ ಪೂರ್ಣ ಗೊಳಿಸಬೇಕು ಸಹಿತ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿರುವ ನಾಲ್ಕು ಟೋಲ್‍ ಗೇಟ್ ಬಳಿ ಸೆ. 20ರಂದು ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿ ನೇತೃತ್ವದಲ್ಲಿ ಏಕಕಾಲದಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಯಲಿದೆ.

ಶುಕ್ರವಾರ ಪಡುಬಿದ್ರಿಯಲ್ಲಿ ನಡೆದ ಹೋರಾಟ ಸಮಿತಿಯ ಸಭೆ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಸಮಿತಿ ಅಧ್ಯಕ್ಷ ದೇವಿ ಪ್ರಸಾದ್ ಶೆಟ್ಟಿ ಮಾಹಿತಿ ನೀಡಿದ ಅವರು, ತಲಪಾಡಿ, ಸುರತ್ಕಲ್, ಹೆಜಮಾಡಿ ಮತ್ತು ಸಾಸ್ತಾನ ಟೋಲ್ ಬಳಿ ಬೆಳಗ್ಗೆ 8ರಿಂದ ಮಧ್ಯಾಹ್ನ 12ಗಂಟೆಯವರೆಗೆ ಪಕ್ಷಾತೀತವಾಗಿ ಏಕಕಾಲದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದರು.

ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನು ಪೂರ್ಣಗೊಳಿಸಿ ಅಥವಾ ಟೋಲ್ ಸಂಗ್ರಹವನ್ನು ನಿಲ್ಲಿಸಬೇಕು. ಸ್ಥಳೀಯ ವಾಹನಗಳಿಗೆ ಖಾಯಂ ಟೋಲ್ ವಿರಹಿತಗೊಳಿಸಬೇಕು. ಹೆದ್ದಾರಿ ಕಾಮಗಾರಿಯನ್ನು 2010ರ ಮೂಲ ನಕಾಶೆಯಂತೆ ನಿರ್ಮಿಸುವುದು. ರಾಷ್ಟ್ರೀಯ ಹೆದ್ದಾರಿ ಇಲಾಖೆ ಕಾನೂನು ಮೀರಿ 90 ಕಿಲೋ ಮೀಟರ್ ಅಂತರದಲ್ಲಿ ನಾಲ್ಕು ಟೋಲ್‍ಗೇಟ್ ನಿರ್ಮಿಸಿದ್ದು, ಸುರತ್ಕಲ್ ಟೋಲ್‍ನ್ನು ತಕ್ಷಣ ರದ್ದುಗೊಳಿಸಬೇಕು ಎಂದು ಸಮಿತಿ ಒತ್ತಾಯಿಸಿತು.

ರಾಷ್ಟ್ರೀಯ ಹೆದ್ದಾರಿ ತಿರುವುಗಳು ಅವೈಜ್ಞಾನಿಕವಾಗಿದ್ದು, ಅಪಘಾತ ವಲಯಗಳಲ್ಲಿ ಎಚ್ಚರಿಕೆ ನಾಮಫಲಕಗಳಿಲ್ಲ, ರಸ್ತೆ ವಿಭಜಕಗಳು ಅಸಮರ್ಪಕವಾಗಿವೆ. ಹೆದ್ದಾರಿ ಸಂಪರ್ಕ ಮುಖ್ಯ ರಸ್ತೆಗಳಿಗೆ ಹೊಂದಿಕೊಂಡು ಸರ್ವಿಸ್ ರಸ್ತೆಗಳ ನಿರ್ಮಾಣವಾಗಿಲ್ಲ. ಕಳಪೆ ಮಟ್ಟದ ಬಸ್ ತಂಗುದಾಣಗಳನ್ನು ಬದಲಾಯಿಸ ಬೇಕು. ಹೆಜಮಾಡಿ ಒಳ ರಸ್ತೆಗೆ ಬೈಪಾಸ್ ನಿರ್ಮಾಣ ಮಾಡಬೇಕು. ಲೋಕೋಪಯೋಗಿ ರಸ್ತೆ ಟೋಲ್ ನಿಷೇಧಿಸುವಂತೆ ಒತ್ತಾಯಿಸಲಾಗುವುದು.

ತಲಪಾಡಿಯಿಂದ ಕುಂದಾಪುರದವರೆಗಿನ ರಾಷ್ಟ್ರೀಯ ಹೆದ್ದಾರಿ ತೀರಾ ದುರಾವಸ್ಥೆಯಿಂದ ದಿನ ನಿತ್ಯ ಅಪಘಾತಗಳು ಸಂಭವಿಸುತ್ತಿವೆ. ಇದಕ್ಕೆ ಮುಕ್ತಿ ನೀಡಬೇಕು ಇಲ್ಲವಾದಲ್ಲಿ ಗುತ್ತಿಗೆದಾರರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಹಾಗೂ ಕಪ್ಪು ಪಟ್ಟಿಗೆ ಸೇರಿಸಬಬೇಕು ಎಂದು ಆಗ್ರಹಿಸಿದರು.

ಇಲಾಖೆ ಇಂಜಿನಿಯರ್ ಗಳು ಅಸಹಾಯಕ ರೀತಿಯಲ್ಲಿ ವರ್ತಿಸಿ ಗುತ್ತಿಗೆದಾರರೊಂದಿಗೆ ಶಾಮೀಲಾಗಿರುವುದು ದುರದೃಷ್ಟಕರ. ರಸ್ತೆ ಕಾಮಗಾರಿಯನ್ನು ತ್ವರಿತಗೊಳಿಸುವುದು, ಬಾಕಿ ಉಳಿದಿರುವ ಸೇತುವೆ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಆಗ್ರಹಿಸಿ ಅಶಾಂತಿಗೆ ಅವಕಾಶವಿಲ್ಲದೆ ಸಾರ್ವಜನಿಕರಿಗೆ ತೊಂದರೆ ನೀಡದೆ ಪ್ರತಿಭಟನೆ ನಡೆಯಲಿದೆ. ಎಲ್ಲಾ ಹಂತದ ಜನಪ್ರತಿನಿಧಿಗಳು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಕಂಪೆನಿ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ನಡೆಸಿದರೂ ನಮ್ಮ ಈ ಎಲ್ಲ ಬೇಡಿಕೆಗಳಲ್ಲಿ  ರಾಜಿಯಿಲ್ಲ ಎಂದು ಸ್ಪಷ್ಟಪಡಿಸಿದರು.

ಹೋರಾಟ ಸಮಿತಿಯ ಸಂಚಾಲಕ ಪ್ರತಾಪ್ ಶೆಟ್ಟಿ ಸಾಸ್ತಾನ, ಚಿತ್ತರಂಜನ್ ಭಂಡಾರಿ ಸುರತ್ಕಲ್, ಸಿದ್ದೀಕ್ ತಲಪಾಡಿ, ಜಿಲ್ಲಾ ಪಂಚಾಯಿತಿ ಸದಸ್ಯ ಶಶಿಕಾಂತ ಪಡುಬಿದ್ರಿ, ತಾಲ್ಲೂಕು ಪಂಚಾಯಿತಿ ಸದಸ್ಯೆ ನೀತಾ ಗುರುರಾಜ್, ಹೆಜಮಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿಶಾಲಾಕ್ಷಿ ಪುತ್ರನ್, ಉಡುಪಿ ಜಿಲ್ಲಾ ಟ್ಯಾಕ್ಸಿಮೆನ್ ಅಸೋಸಿಯೇಶನ್ ಪ್ರಧಾನ ಕಾರ್ಯದರ್ಶಿ ರಮೇಶ್ ಕೋಟ್ಯಾನ್, ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ, ಕಾರ್ಯಾಧ್ಯಕ್ಷ ವಾಸುದೇವ ರಾವ್, ಕಾಪು ಕ್ಷೇತ್ರಾಧ್ಯಕ್ಷ ಸುಧಾಕರ ಶೆಟ್ಟಿ, ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನಚಂದ್ರ ಜೆ ಶೆಟ್ಟಿ, ಬಿಜೆಪಿ ಕಾಪು ಕ್ಷೇತ್ರಾಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ದಿವಾಕರ ಶೆಟ್ಟಿ ಕಾಪು, ಮಧು ಆಚಾರ್ಯ, ಅಬ್ದುಲ್ ಅಜೀಜ್, ಶೇಖರ್ ಹೆಜಮಾಡಿ, ಸುಧೀರ್ ಕರ್ಕೇರ, ಪಾಂಡುರಂಗ ಕರ್ಕೇರ ಪಡುಬಿದ್ರಿ ಕಾರು ಚಾಲಕರ ಮತ್ತು ಮಾಲಕರ ಸಂಘದ ಅಧ್ಯಕ್ಷ ರವಿಶೆಟ್ಟಿ, ಟೆಂಪೋ ಚಾಲಕರ ಮತ್ತು ಮಾಲಕರ ಸಂಘದ ಅಧ್ಯಕ್ಷ ಹರೀಶ್ ಶೆಟ್ಟಿ, ಉದಯ ಶೆಟ್ಟಿ ಇನ್ನ, ಅಬ್ಬಾಸ್ ಹಾಜಿ, ಇಸ್ಮಾಯೀಲ್ ಫಲಿಮಾರು, ಅಶ್ರಫ್, ಇಸ್ಮಾಯೀಲ್ ಹೆಜಮಾಡಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News