ಬಂಟ್ವಾಳ: ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ

Update: 2018-09-14 17:16 GMT

ಬಂಟ್ವಾಳ, ಸೆ. 14: ಹಕ್ಕುಪತ್ರ ವಿತರಣೆಗೆ ಫಲಾನುಭವಿಗಳ ಆಯ್ಕೆ ಸಂದರ್ಭ ಕೆಲವರಿಗೆ ಕೊಟ್ಟು, ಕೆಲವರಿಗೆ ಕೊಡದೇ ಇದ್ದರೆ, ಅದು ಬೇರೆ ಅರ್ಥಗಳಿಗೆ ಕಾರಣವಾಗುತ್ತದೆ. ಇದನ್ನು ಗಮನದಲ್ಲಿರಿಸಿಕೊಳ್ಳಬೇಕು ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಅಧಿಕಾರಿಗಳಿಗೆ ಕಿವಿಮಾತು ಹೇಳಿದ್ದಾರೆ. 

ಬಂಟ್ವಾಳ ತಾಪಂ ಸಭಾಂಗಣದಲ್ಲಿ ಶುಕ್ರವಾರ ಸಂಜೆ ಹಕ್ಕುಪತ್ರಗಳನ್ನು ಫಲಾನುಭವಿಗಳಿಗೆ ವಿತರಿಸಿದ ಬಳಿಕ ಅಧಿಕಾರಿಗಳೊಂದಿಗೆ ಮಾತನಾಡಿದ ಅವರು, ಭೂಪರಿವರ್ತನೆ ಮತ್ತು ದಾಖಲೀಕರಣ ಹಾಗೂ ಇತರ ಯಾವುದೇ ವಿಷಯಗಳಿಗೆ ಸಂಬಂಧಿಸಿ ಜನರ ಸಮಸ್ಯೆಗಳು ಬಾರದೇ ಇರುವಂತೆ ಕೆಲಸ ನಿರ್ವಹಿಸಿ ಎಂದು ಸಲಹೆ ನೀಡಿದರು.

ಬಾಪೂಜಿ ಸೇವಾ ಕೇಂದ್ರಗಳಿದ್ದರೂ ಸರಿಯಾದ ಕೆಲಸವನ್ನು ನಿರ್ವಹಿಸಲು ಆಗುತ್ತಿಲ್ಲ. ಅಲ್ಲಿ ಹಲವು ಸಮಸ್ಯೆಗಳಿವೆ ಎಂಬುದನ್ನು ತುಂಬೆ ಗ್ರಾಪಂಗೆ ಒಳಪಟ್ಟ ನಾಗರಿಕರು ಗಮನಕ್ಕೆ ತಂದಾಗ ಅಧಿಕಾರಿಗಳನ್ನು ವಿಚಾರಿಸಿದ ಖಾದರ್, ತ್ವರಿತ ಸೇವೆಗೋಸ್ಕರ ಬಾಪೂಜಿ ಸೇವಾ ಕೇಂದ್ರಗಳನ್ನು ಗ್ರಾಪಂ ಮಟ್ಟದಲ್ಲಿ ಸ್ಥಾಪಿಸಲಾಗಿದ್ದರೂ ಕೆಲಸವಾಗದೇ ಇರುವುದಕ್ಕೆ ಕಾರಣಗಳೇನು ಎಂದು ಪ್ರಶ್ನಿಸಿದರು.

ಜಿಲ್ಲಾ ಮಟ್ಟದ ಕೆಡಿಪಿ ಸಭೆಯಲ್ಲಿ ಇದೇ ತಿಂಗಳ 20ರಂದು ಮಂಗಳೂರಿನಲ್ಲಿ ನಡೆಸಲಾಗುವುದು. ತಾಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆಗಳನ್ನೂ ನಡೆಸಲಿದ್ದು, ನನ್ನ ಬಳಿ ಅಹವಾಲುಗಳು ಬಾರದಂತೆ ನೋಡಿಕೊಳ್ಳಬೇಕ ಎಂದ ಖಾದರ್, ಅಂಗನವಾಡಿ ವ್ಯಾಪ್ತಿಯಲ್ಲಿ ಯಾರೆಲ್ಲ ಫಲಾನುಭವಿಗಳಿದ್ದರೂ ಅವರನ್ನು ಗುರುತಿಸಿ ಅವರ ಬಗ್ಗೆ ಮಾಹಿತಿ ಸಂಗ್ರಹಿಸಿ ಅವರಿಗೆ ಸರಕಾರದ ಯೋಜನೆಗಳ ಪ್ರಯೋಜನ ದೊರಕಿಸಿಕೊಡುವ ಜವಾಬ್ದಾರಿ ಇಲಾಖೆಗಿದ್ದು, ಇದರಲ್ಲಿ ಲೋಪದೋಷಗಳುಂಟಾದರೆ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದರು.

ಅಧಿಕಾರಿಗಳು, ಜನಪ್ರತಿನಿಧಿಗಳು ಹೊಂದಾಣಿಕೆಯಿಂದ ಜನರಿಗೆ ಬೇಕಾದ ಕೆಲಸ ಕಾರ್ಯಗಳನ್ನು ನಿರ್ವಹಿಸಬೇಕು ಎಂದು ಖಾದರ್ ಈ ಸಂದರ್ಭ ಹೇಳಿದರು.

72 ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ

ಮಂಗಳೂರು ವಿಧಾನಸಭಾ ಕ್ಷೇತ್ರದ ಬಂಟ್ವಾಳ ತಾಲೂಕಿಗೆ ಒಳಪಟ್ಟ ಗ್ರಾಮಗಳ ಒಟ್ಟು 72 ಫಲಾನುಭವಿಗಳಿಗೆ 5,88,625 ರೂ.ಗಳು ಹಾಗೂ 94ಸಿ, ಸಿಸಿಯ 59 ಹಕ್ಕುಪತ್ರಗಳನ್ನು ವಿತರಿಸಲಾಯಿತು. ಕಂದಾಯ ನಿರೀಕ್ಷಕ ರಾಮ ಕಾಟಿಪಳ್ಳ ಫಲಾನುಭವಿಗಳ ಪಟ್ಟಿ ವಾಚಿಸಿದರು.

ಈ ಸಂದರ್ಭ ಜಿಲ್ಲಾ ಪಂಚಾಯತ್ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಮಂಜುಳಾ ಮಾಧವ ಮಾವೆ, ಮಮತಾ ಡಿ.ಎಸ್. ಗಟ್ಟಿ, ರವೀಂದ್ರ ಕಂಬಳಿ, ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್ ಅಲಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಷ್ಮೀ ಬಂಗೇರ, ತಹಶೀಲ್ದಾರ್ ಪುರಂದರ ಹೆಗ್ಡೆ, ತಾಪಂ ಇಒ ರಾಜಣ್ಣ, ಮಂಗಳೂರು ತಾಪಂ ಅಧ್ಯಕ್ಷ ಮೋನು ಮೊದಲಾದವರು ಉಪಸ್ಥಿತರಿದ್ದರು.

ಸರಕಾರ ಸುಭದ್ರವಾಗಿದೆ: ಖಾದರ್
ರಾಜ್ಯ ಸರಕಾರ ಸುಭದ್ರವಾಗಿದ್ದು, ಐದು ವರ್ಷ ಬಾಳುತ್ತದೆ ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬಂಟ್ವಾಳ ತಾಪಂ ಸಭಾಂಗಣದಲ್ಲಿ ಶುಕ್ರವಾರ ಸಂಜೆ ನಡೆದ ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾರಕಿಹೊಳಿ ಅವರು ಅಂಬೇಡ್ಕರ್ ಸಿದ್ಧಾಂತಗಳಲ್ಲಿ ನಂಬಿಕೆ ಉಳ್ಳವರು. ಅವರು ಸರಕಾರದ ಪರವಾಗಿಯೇ ಇದ್ದಾರೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News