ಮಂಗಳೂರು: ವಿಮಾನ ನಿಲ್ದಾಣದಲ್ಲಿ ಪಾರ್ಕಿಂಗ್‌ಗೆ ಹೆಚ್ಚುವರಿ ಶುಲ್ಕ ವಸೂಲಿ; ಆರೋಪ

Update: 2018-09-15 14:47 GMT

ಮಂಗಳೂರು, ಸೆ.15: ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಮಂಗಳೂರು ವಿಮಾನ ನಿಲ್ದಾಣದಲ್ಲಿ ವಾಹನಗಳ ಪಾರ್ಕಿಂಗ್ ಹೆಸರಲ್ಲಿ ಹೆಚ್ಚುವರಿ ಶುಲ್ಕವನ್ನು ವಸೂಲಿ ಮಾಡಲಾಗುತ್ತಿದೆ ಎಂದು ತಿಳಿದುಬಂದಿದ್ದು, ಈ ಬಗ್ಗೆ ವಿಮಾನನಿಲ್ದಾಣ ಸಿಬ್ಬಂದಿ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಮಾನ ನಿಲ್ದಾಣದಲ್ಲಿ ಪಾರ್ಕಿಂಗ್ ಹೆಸರಲ್ಲಿ ಹೆಚ್ಚುವರಿ ಹಣ ವಸೂಲಿ ಮಾಡುತ್ತಿರುವ ಘಟನೆ ಶನಿವಾರ ಬೆಳಗ್ಗೆ 1 ಗಂಟೆ ಸುಮಾರು ನಡೆದಿದೆ. ಈ ಬಗ್ಗೆ ವೀಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವೀಡಿಯೊದಲ್ಲಿರುವ ವ್ಯಕ್ತಿ ಮಂಗಳೂರು ನಗರದ ಬ್ಯಾರಿ ಝುಲ್ಫಿ ಅವರು, ‘ಕಾರು ಪಾರ್ಕಿಂಗ್‌ಗೆ ಬೋರ್ಡ್‌ನಲ್ಲಿ 55 ರೂ. ಎಂದು ನಮೂದಿಸಲಾಗಿದೆ. ನಿಗದಿತ ಹಣಕ್ಕಿಂತ ಹೆಚ್ಚುವರಿಯಾಗಿ ಯಾಕೆ ಸಂಗ್ರಹಿಸಲಾಗುತ್ತಿದೆ’ ಎಂದು ಪ್ರಶ್ನಿಸಿದ್ದಾರೆ.

‘ಈ ಸಂದರ್ಭ ಸಿಬ್ಬಂದಿ ಮೊದಲು ಗೊತ್ತಿಲ್ಲದಂತೆ ವರ್ತಿಸಿದ್ದಾರೆ. ಬಳಿಕ ಟಿಕೆಟ್ ನೀಡುವ ಮಷೀನ್ ಸರಿಯಿಲ್ಲ. ಹಾಗಾಗಿ ಸಮಸ್ಯೆ ತಲೆದೋರಿದೆ. ಹಾಗಾಗಿ ಹೆಚ್ಚುವರಿ ಶುಲ್ಕವನ್ನು ಕಟ್ಟಲೇಬೇಕು’ ಎಂದು ಎಂದು ಉತ್ತರಿಸಿದ್ದಾರೆ. ‘ಹಾಗಾದರೆ ಶುಲ್ಕ ರಶೀದಿಯಲ್ಲಿ 55 ರೂ. ಇದ್ದು, ತಾವು 60 ರೂ. ವಸೂಲಿ ಮಾಡುತ್ತಿರುವುದಾಗಿ ಲಿಖಿತವಾಗಿ ಬರೆದುಕೊಡಿ’ ಎಂದು ಸಿಬ್ಬಂದಿಗೆ ಝುಲ್ಫಿ ಒತ್ತಾಯಿಸಿದರು.

ಇಂತಹ ಸಂದರ್ಭದಲ್ಲಿ ಕಾರು ಪಾರ್ಕಿಂಗ್ ಮಾಡುವವರು ಶುಲ್ಕ ಭರಿಸಿ ಟಿಕೆಟ್ ಪಡೆಯದೇ ತೆರಳುತ್ತಾರೆ. ಆಗ ಸಿಬ್ಬಂದಿ ಹಿಂದಿನ ವಾಹನದಿಂದ ಶುಲ್ಕ ಕಟ್ಟಿಸಿಕೊಂಡು ಅದೇ ಟಿಕೆಟ್‌ನ್ನು ಮರಳಿ ಕೊಡುವ ಪ್ರಕರಣ ಹೆಚ್ಚುತ್ತಿವೆ ಎಂದು ಅವರು ಆರೋಪಿಸಿದರು.

ವಿಮಾನ ನಿಲ್ದಾಣ ಆವರಣದಲ್ಲಿ ಕಾರುಗಳ ಪಾರ್ಕಿಂಗ್‌ಗಾಗಿ 55 ರೂ. ಶುಲ್ಕವೆಂದು ಬೋರ್ಡ್‌ನಲ್ಲಿ ತೋರಿಸಿ ಹೆಚ್ಚುವರಿ ಹಣವನ್ನು ವಸೂಲಿ ಮಾಡಲಾ ಗುತ್ತಿದೆ. ಇದು ಮೊದಲೇನಲ್ಲ, ಇದಕ್ಕೂ ಮೊದಲು ಹಲವು ಬಾರಿ ಹೆಚ್ಚುವರಿ ಹಣವನ್ನು ಸಿಬ್ಬಂದಿ ವಸೂಲಿ ಮಾಡುತ್ತಿದ್ದಾರೆ.

- ಬ್ಯಾರಿ ಝುಲ್ಫಿ,  ಉದ್ಯಮಿ

‘ಘಟನೆ ನಡೆದಿದ್ದಲ್ಲಿ ತನಿಖೆ ನಡೆಸಿ ಕ್ರಮ’

ಘಟನೆಗೆ ಸಂಬಂಧಿಸಿದಂತೆ ತಮಗೆ ಯಾವುದೇ ದೂರು ಬಂದಿಲ್ಲ. ನಿಗದಿತ ಶುಲ್ಕ ಪಡೆಯುವ ಸಂದರ್ಭದಲ್ಲಿ ಸೂಕ್ತ ರಶೀದಿಯನ್ನು ನೀಡಬೇಕು. ಇಂತಹ ಪ್ರಕರಣಗಳು ನಡೆದಿದ್ದಲ್ಲಿ ತನಿಖೆ ನಡೆಸಿ, ಕ್ರಮ ಕೈಗೊಳ್ಳಲಾಗುವುದು ಎಂದು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರದ ನಿರ್ದೇಶಕ ವೆಂಕಟೇಶ್ವರ ರಾವ್ ‘ವಾರ್ತಾಭಾರತಿ’ಗೆ ಮಾಹಿತಿ ನೀಡಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News