ಹಿರಿಯಡಕ ಕಾಲೇಜಿನಲ್ಲಿ ಸೋನದ ಸೇಸೆ ಕಾರ್ಯಕ್ರಮ

Update: 2018-09-15 15:10 GMT

ಉಡುಪಿ, ಸೆ.15: ತುಳುಭಾಷೆ ಮತ್ತು ಸಂಸ್ಕೃತಿಯನ್ನು ಅರ್ಥೈಸಿಕೊಂಡು ಉಳಿಸಿ ಬೆಳೆಸಬೇಕಾದ ಜವಾಬ್ದಾರಿ ಯುವಶಕ್ತಿಗಳಾದ ವಿದ್ಯಾರ್ಥಿಗಳ ಮೇಲಿದೆ. ಸೋನದ ಸೇಸೆ ಕಾರ್ಯಕ್ರಮ ಸೋನ ತಿಂಗಳಿನ ಮಹತ್ವವನ್ನು ವಿವರಿಸುವ ತುಳುವರ ಬದುಕಿನ ಸಂಭ್ರಮವನ್ನು ದಾಖಲಿಸುವ ಕಾರ್ಯಕ್ರಮವಾಗಿ ಮೂಡಿಬಂದಿದೆ ಎಂದು ಹಿರಿಯಡಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತುಳುಕೂಟ ಉಡುಪಿ ಹಾಗೂ ತುಳುಸಂಘ ಹಿರಿಯಡಕ ಸಂಘಟಿಸಿದ ಸೋನದ ಸೇಸೆ ಕಾರ್ಯಕ್ರಮವನ್ನು ಉದ್ಘಾಟಿಸಿ ತುಳುಕೂಟದ ಅಧ್ಯಕ್ಷ ಇಂದ್ರಾಳಿ ಜಯಕರ ಶೆಟ್ಟಿ ಹೇಳಿದ್ದಾರೆ.

ತುಳು ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್ ಪ್ರಧಾನ ಭಾಷಣಕಾರರಾಗಿ ಭಾಗವಹಿಸಿ ಮಾತನಾಡಿ, ವಿದ್ಯಾರ್ಥಿಗಳಿಗೆ ತುಳುಭಾಷೆ -ಸಂಸ್ಕೃತಿ ಬದುಕಿನ ಸಮಗ್ರ ಮಾಹಿತಿಗಳನ್ನು ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲೆ ಡಾ. ನಿಕೇತನ ವಹಿಸಿದ್ದರು. ತುಳುಕೂಟ ಉಡುಪಿಯ ಕಾರ್ಯಕ್ರಮ ಸಂಚಾಲಕ ರತ್ನಾಕರ ಇಂ್ರಾಳಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ವೇದಿಕೆಯಲ್ಲಿ ಉಡುಪಿ ತುಳುಕೂಟದ ಸದಸ್ಯ ಮಹಮ್ಮದ್ ವೌಲಾನ, ತಾರಾ ಆಚಾರ್ಯ ಉಪಸ್ಥಿತರಿದ್ದರು. ಬಳಿಕ ವಿದ್ಯಾರ್ಥಿಗಳಿಂದ ಸೋನದ ಸೇಸೆ ಕಾರ್ಯಕ್ರಮದಲ್ಲಿ ತುಳುನಾಡಿನ ಹೊಸ್ತಿಲು ಪೂಜೆ ಹಾಗೂ ಅಜ್ಜಿ ಗಿಡಾಪಾವುನು ವಿಶಿಷ್ಟ ಕಾರ್ಯಕ್ರಮ ಜರಗಿತು.

ಕಾಲೇಜಿನ ತುಳು ಸಂಘದ ಸಂಚಾಲಕಿ ಸುಜಯಾ ಕೆ.ಎಸ್. ಸ್ವಾಗತಿಸಿದರು. ತುಳು ಸಂಘದ ವಿದ್ಯಾರ್ಥಿ ಸಂಚಾಲಕ ರಾಘವೇಂದ್ರ ಹಾಗೂ ತುಳು ಸಂಘದ ವಿದ್ಯಾರ್ಥಿ ಸಂಚಾಲಕಿ ಶ್ವೇತಾ ಕಾರ್ಯಕ್ರಮ ಸಂಘಟಿಸಿದರು. ಕಾಲೇಜಿನ ಸಾಂಸ್ಕೃತಿಕ ವಿದ್ಯಾರ್ಥಿ ಸಂಚಾಲಕ ಸಂದೀಪ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News