‘ರಾಜ್ಯ ಸರಕಾರದ ಕೃಷಿ ಸಾಲ ಮನ್ನಾ ನೀತಿ ವಿರುದ್ಧ ಹೋರಾಟ’

Update: 2018-09-15 15:16 GMT

ಉಡುಪಿ, ಸೆ.15: ಕುಮಾರಸ್ವಾಮಿ ನೇತೃತ್ವದ ರಾಜ್ಯ ಸಮ್ಮಿಶ್ರ ಸರಕಾರ ಈಗಾಗಲೇ ಕೃಷಿ ಸಾಲ ಮನ್ನಾದ ಘೋಷಣೆ ಮಾಡಿದೆ. ಆದರೆ ಘೋಷಣೆ ಮಾಡಿದ ದಿನದಿಂದ ಸಾಲ ಮನ್ನಾಕ್ಕೆ ಸಂಬಂಧಿಸಿದಂತೆ ಸೂಕ್ತ ಮಾರ್ಗಸೂಚಿ ಗಳನ್ನು ರಚಿಸಲು ಅದು ವಿಫಲವಾಗಿದೆ. ಸರಕಾರದ ಕೃಷಿ ಸಾಲ ಮನ್ನಾದ ನೀತಿಯನ್ನು ವಿರೋಧಿಸಿ ಸಹಕಾರ ಭಾರತಿ ಉಡುಪಿ, ಜಿಲ್ಲೆಯ ಸಹಕಾರಿಳು ಹಾಗೂ ಕೃಷಿಕರ ಬೃಹತ್ ಪ್ರತಿಭಟನಾ ಸಭೆಯನ್ನು ಸೆ.18ರಂದು ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಎದುರು ಹಮ್ಮಿಕೊಂಡಿದೆ ಎಂದು ಸಹಕಾರಿ ಭಾರತಿಯ ರಾಜ್ಯ ಉಪಾಧ್ಯಕ್ಷ ರವಿರಾಜ್ ಹೆಗ್ಡೆ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಹಕಾರ ಸಂಘಗಳ ಸಾಲ ಮನ್ನಾದ ಬಗ್ಗೆ ಈಗಾಗಲೇ ಅಧಿಸೂಚನೆ ಹೊರಡಿಸಿರುವ ರಾಜ್ಯ ಸರಕಾರ ವಾಣಿಜ್ಯ ಬ್ಯಾಂಕುಗಳಲ್ಲಿರುವ ಕೃಷಿ ಸಾಲ ಮನ್ನಾದ ಬಗ್ಗೆ ಇನ್ನೂ ಅಧಿಸೂಚನೆ ಹೊರಡಿಸಿಲ್ಲ. ಕೇವಲ ಘೋಷಣೆಯಾಗಿ ಮಾತ್ರವೇ ಉಳಿದಿದೆ ಎಂದು ಹೇಳಿದರು.

ಇತ್ತೀಚೆಗೆ ಹೊರಡಿಸಿರುವ ಅಧಿಸೂಚನೆಯಲ್ಲಿ ಸಹಕಾರ ಸಂಘಗಳಲ್ಲಿರುವ ಕೃಷಿ ಸಾಲಗಾರರು ಯಾವುದೇ ಸಹಕಾರಿ ಸಂಸ್ಥೆ ಹಾಗೂ ವಾಣಿಜ್ಯ ಬ್ಯಾಂಕು ಗಳಲ್ಲಿ ನಿರಖು ಠೇವಣಿಯನ್ನು ಹೊಂದಿದ್ದರೆ ಅಷ್ಟು ಮೊತ್ತಕ್ಕೆ ಲಭ್ಯ ಸಾಲಮನ್ನಾ ಸೌಲಭ್ಯ ನೀಡಲಾಗುವುದಿಲ್ಲ ಎಂದು ಸರಕಾರ ಹೇಳಿದೆ. ಇದನ್ನು ಸಹಕಾರ ಭಾರತಿ ಸಂಪೂರ್ಣವಾಗಿ ವಿರೋಧಿಸುತ್ತದೆ.

ಇತ್ತೀಚಿನ ಮಾಹಿತಿಯಂತೆ ಉಡುಪಿ ಜಿಲ್ಲೆಯಲ್ಲಿ ಒಟ್ಟು 22,517 ಮಂದಿ ರೈತರು 234.25 ಕೋಟಿ ರೂ.ಗಳ ಕೃಷಿಸಾಲ ಹೊಂದಿದ್ದಾರೆ. ಇವುಗಳಲ್ಲಿ 16,000 ಮಂದಿ ರೈತರು (ಒಟ್ಟು 162 ಕೋಟಿ ರೂ.) ಒಂದು ಲಕ್ಷ ರೂ. ಮತ್ತು ಅದಕ್ಕಿಂತ ಕಡಿಮೆ ಮೊತ್ತದ ಕೃಷಿ ಸಾಲ ಹೊಂದಿದ್ದಾರೆ. ಕೃಷಿ ಸಾಲ ಮನ್ನಾಕ್ಕೆ ಸರಕಾರ ವಿಧಿಸಿರುವ ಶರ್ತಗಳಂತೆ ಉಡುಪಿ ಜಿಲ್ಲೆಯ ಕೈಬೆರಳಣಿಕೆಯ ರೈತರು ಮಾತ್ರ ಇದರ ಸೌಲಭ್ಯ ಪಡೆಯುವ ಅರ್ಹತೆ ಹೊಂದಿದ್ದಾರೆ ಎಂದು ರವಿರಾಜ ಹೆಗ್ಡೆ ವಿವರಿಸಿದರು.

ರೈತರು ತಮ್ಮ ಕಷ್ಟಕಾಲಕ್ಕೆಂದು ಮಾಡಿರುವ ಉಳಿತಾಯವನ್ನು ಸಾಲದ ಖಾತೆಗೆ ವಜಾ ಮಾಡುವ ರಾಜ್ಯ ಸರಕಾರದ ಅಧಿಸೂಚನೆ ರೈತ ವಿರೋಧಿ ಯಾಗಿದೆ. ಇದನ್ನು ಸರಕಾರ ತಕ್ಷಣವೇ ವಾಪಾಸು ಪಡೆಯಬೇಕು. ರೈತರ ತಮ್ಮ ಮಕ್ಕಳ ವಿದ್ಯಾಭ್ಯಾಸ, ಮದುವೆ, ಮನೆ ರಿಪೇರಿ ಹಾಗೂ ಇತರ ತುರ್ತು ಅಗತ್ಯಗಳಿಗೆ ಮಾಡಿರುವ ಉಳಿತಾಯದ ಮೇಲೆ ಸರಕಾರ ಅಧಿಕಾರ ಸ್ಥಾಪಿಸುವುದು ಸರಿಯಲ್ಲ ಎಂದವರು ಪ್ರತಿಪಾದಿಸಿದರು.

ಅಲ್ಲದೇ ಕೊಡಗು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಅತಿವೃಷ್ಟಿಯಿಂದ ಅಪಾರ ಕೃಷಿ ಹಾನಿಯಾಗಿದ್ದು, ನಷ್ಟಕ್ಕೊಳಗಾದ ರೈತರಿಗೆ ಯಾವುದೇ ಶರ್ತಗಳಿಲ್ಲದೇ, ಅವರ ಪೂರ್ತಿ ಸಾಲ ಮನ್ನಾ ಮಾಡಬೇಕು ಎಂದು ಸಹಕಾರ ಭಾರತಿ ಆಗ್ರಹಿಸುತ್ತದೆ ಎಂದರು. ಅಲ್ಲದೇ ಸಾಲ ಮನ್ನಾದ ಮೊಬಲಗನ್ನು ಸರಕಾರ ನಿಗದಿತ ಸಮಯದೊಳಗೆ ಸಹಕಾರ ಸಂಘಗಳಿಗೆ ಬಿಡುಗಡೆ ಮಾಡ ಬೇಕು ಎಂದವರು ಒತ್ತಾಯಿಸಿದರು.

ತಮ್ಮ ಈ ಎಲ್ಲಾ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸೆ.18ರಂದು ಬೆಳಗ್ಗೆ 10:30ಕ್ಕೆ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಎದುರು ಸಹಕಾರಿಗಳು ಹಾಗೂ ಕೃಷಿಕರ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದವರು ನುಡಿದರು.

ಪತ್ರಿಕಾಗೋಷ್ಠಿಯಲ್ಲಿ ಸಹಕಾರಿ ಭಾರತಿಯ ಜಿಲ್ಲಾಧ್ಯಕ್ಷ ಬೋಳ ಸದಾಶಿವ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಬಿ.ಮಧುಸೂದನ ನಾಯಕ್, ಜಿಲ್ಲಾ ಸಂಘಟನ್ ಪ್ರಮುಖ ಮಂಜುನಾಥ ಎಸ್.ಕೆ. ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News