ಪೊಲೀಸರ ಬಗೆಗಿನ ಮನಸ್ಥಿತಿ ಬದಲಾಗಲಿ: ಎಎಸ್ಪಿ ಕುಮಾರಚಂದ್ರ

Update: 2018-09-15 15:18 GMT

ಉಡುಪಿ, ಸೆ.15: ಇಂದು ಸಮಾಜದಲ್ಲಿ ಪೊಲೀಸರಿಗೆ ಗೌರವ ಇಲ್ಲವಾಗಿದೆ. ಪೊಲೀಸರಿಗೆ ಭ್ರಷ್ಟರು ಎಂಬ ಅಪಕೀರ್ತಿ ಅಂಟಿಕೊಂಡಿದೆ. ಈ ಮನಸ್ಥಿತಿ ಬದಲಾದಾಗ ಮಾತ್ರ ಪೊಲೀಸರಿಗೆ ಗೌರವ ಸಿಗಲು ಸಾಧ್ಯ ಎಂದು ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಚಂದ್ರ ಹೇಳಿದ್ದಾರೆ.

ಉಡುಪಿ ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಜಗ ನ್ನಾಥ್ ಸಭಾಭವನದಲ್ಲಿ ಶನಿವಾರ ನಡೆದ ಉಡುಪಿ ಜಿಲ್ಲಾ ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಮಹಾಸಭೆಯಲ್ಲಿ ಅವರು ಮಾತನಾಡುತಿದ್ದರು.

ಸಿನಿಮಾ ಹಾಗೂ ಮಾಧ್ಯಮಗಳಲ್ಲಿ ಪೊಲೀಸರನ್ನು ಭ್ರಷ್ಟರು, ಶಿಕ್ಷೆ ಕೊಡುವ ವರು ಎಂಬಂತಹ ರೀತಿಯಲ್ಲಿ ಬಿಂಬಿಸಲಾಗುತ್ತಿದೆ. ಪೊಲೀಸರು ಸರಿಯಾಗಿ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದರೂ ಅದನ್ನು ನೋಡುವ ರೀತಿ ಮಾತ್ರ ಬೇರೆ ಯದ್ದೇ ಆಗಿದೆ. ನಾವು ನಮ್ಮ ಇಡೀ ಬದುಕನ್ನು ಸಮಾಜದ ಸೇವೆಗೆ ತ್ಯಾಗ ಮಾಡಿದ್ದೇವೆ. ಆದರೆ ನಾವು ನಿವೃತ್ತರಾದಾಗ ನಮಗೆ ಸಿಗಬೇಕಾದ ಯಾವುದೇ ಸವಲತ್ತು ದೊರೆಯುವುದಿಲ್ಲ ಎಂದರು.

ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದ ಪೊಲೀಸರಿಗೆ ಸಿಗುವ ವೇತನ ಸಾಕಷ್ಟು ಕಡಿಮೆ. ಸವಲತ್ತುಗಳು ಸರಿಯಾಗಿ ತಲುಪುತ್ತಿಲ್ಲ. ಜಿಲ್ಲೆಯ ಜನಸಂಖ್ಯೆ ಗಣನೀಯ ಏರಿಕೆಯಾಗಿದ್ದು, ಅಪರಾಧ ಚಟುವಟಿಕೆಗಳು ದಿನೇ ದಿನೇ ಹೆಚ್ಚುತ್ತಿವೆ. ಆದರೆ ಪೊಲೀಸ್ ಸಿಬ್ಬಂದಿಗಳ ಸಂಖ್ಯೆಯಲ್ಲಿ ಹೆಚ್ಚಳ ಮಾಡುತ್ತಿಲ್ಲ ಎಂದು ಖೇದ ವ್ಯಕ್ತಪಡಿಸಿದರು.

ಸಂಘದ ಅಧ್ಯಕ್ಷ ಡಾ.ಪ್ರಭುದೇವ್ ಮಾನೆ ಅಧ್ಯಕ್ಷತೆ ವಹಿಸಿದ್ದರು. ಬಡಗ ಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಪ್ರಧಾನ ವ್ಯವಸ್ಥಾಪಕ ಜಯಕರ ಶೆಟ್ಟಿ ಇಂದ್ರಾಳಿ, ಉದ್ಯಮಿಗಳಾದ ಸುರೇಶ್ ಶೆಟ್ಟಿ ಗುರ್ಮೆ, ಸುಧಾಕರ ಶೆಟ್ಟಿ, ಮಂಗಳೂರು ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಹರಿಶ್ಚಂದ್ರ, ಉಡುಪಿ ಸಂಘದ ಗೌರವಾಧ್ಯಕ್ಷ ಸುಧಾಕರ ಹೆಗ್ಡೆ, ಕಾರ್ಯದರ್ಶಿ ವೆಂಕಪ್ಪನಾಯಕ್, ಕೋಶಾಧಿಕಾರಿ ಸಂಜೀವ ಭಂಡಾರಿ, ಉಪಾಧ್ಯಕ್ಷರಾದ ಬಿ.ಕೆ.ಬಿಜೂರ್, ಕೆ.ಜೆ.ಜನಾರ್ದನ್, ಸತ್ತರ್ ಷಾ ಉಪಸ್ಥಿತರಿದ್ದರು. ಸಂಘದ ನೂತನ ಅಧ್ಯಕ್ಷ ಸಂಜೀವ ಭಂಡಾರಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News