ಅಡಿಕೆ, ಕಾಳುಮೆಣಸು ಬೆಳೆಗಳಿಗೆ ಕೊಳೆರೋಗ: ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಲು ಭಾಕಿಸಂ ಕರೆ

Update: 2018-09-15 15:31 GMT

ಉಡುಪಿ, ಸೆ.15: ಈ ಬಾರಿ ಜಿಲ್ಲೆಯಾದ್ಯಂತ ಸುರಿದ ಅತೀ ಮಳೆಯಿಂದ ಅಡಿಕೆ ಹಾಗೂ ಕಾಳುಮೆಣಸಿನ ಬೆಳೆಗಳಿಗೆ ವಿಪರೀತ ಕೊಳೆರೋಗ ತಗುಲಿ ಅನೇಕ ರೈತರ ತೋಟಗಳಲ್ಲಿ ಶೇ.80ರಷ್ಟು ಫಸಲುಗಳು ನಾಶವಾಗಿವೆ. ಜೊತೆಗೆ ಅಲ್ಲಲ್ಲಿ ಕೆಲವು ಅಡಿಕೆ ಮರ ಹಾಗೂ ದೊಡ್ಡ ಪ್ರಮಾಣದಲ್ಲಿ ಕಾಳು ಮೆಣಸಿನ ಬಳ್ಳಿಗಳು ಸತ್ತಿವೆ. ಈ ಬಗ್ಗೆ ಪರಿಹಾರ ನೀಡುವಂತೆ ಭಾಕಿಸಂ ಮಾಡಿಕೊಂಡ ಮನವಿಗೆ ಉಡುಪಿ ಜಿಪಂ ಹಾಗೂ ಜಿಲ್ಲಾಡಳಿತ ಸ್ಪಂದಿಸಿ, ಪ್ರಾಕೃತಿಕ ವಿಕೋಪದಡಿ ಪರಿಹಾರ ನೀಡಲು ಮುಂದಾಗಿ ಆದೇಶ ಹೊರಡಿಸಿದೆ.

ಅದರಂತೆ ಗರಿಷ್ಟ ಒಬ್ಬ ರೈತನಿಗೆ 1 ಹೆಕ್ಟೇರ್ ಪ್ರದೇಶಕ್ಕೆ 18,000 ರೂ.ವರೆಗೆ ಪರಿಹಾರ ನೀಡಲು ಅವಕಾಶವಿದೆ ಎಂದು ಅಧಿಕಾರಿಗಳು ತಿಳಿಸಿದ್ದು, ಈ ಪರಿಹಾರ ಪಡೆಯಲು ರೈತರು ಅರ್ಜಿಯನ್ನು ತಾಲೂಕಿನ ತೋಟಗಾರಿಕಾ ಇಲಾಖೆಯ ಕಚೇರಿ, ಆಯಾ ಗ್ರಾಮದ ಗ್ರಾಮಕರಣಿಕರಿಗೆ ಅಥವಾ ಗ್ರಾಪಂನ ಪಿಡಿಒರಿಗೆ ಸಲ್ಲಿಸಬಹುದಾಗಿದೆ.

ಅರ್ಜಿಯನ್ನು ಯಾವುದೇ ನಿಗದಿತ ನಮೂನೆಯಲ್ಲಿ ಸಲ್ಲಿಸಬೇಕಾಗಿಲ್ಲ. ಅದರಲ್ಲಿ ರೈತರ ಒಟ್ಟು ಕೃಷಿ ಕ್ಷೇತ್ರ, ಅದರ ಸರ್ವೇ ನಂಬ್ರ, ನಷ್ಟವಾದ ಅಡಿಕೆ ಹಾಗೂ ಕಾಳು ಮೆಣಸಿನ ಪ್ರದೇಶ ಹಾಗೂ ನಷ್ಟ ಪ್ರಮಾಣದ ಬಗ್ಗೆ ಮಾಹಿತಿಯನ್ನು ನೀಡುವುದು ಅತ್ಯಗತ್ಯ. ಈ ಅರ್ಜಿಯೊಂದಿಗೆ ಆಧಾರ್ ಕಾರ್ಡ್‌ನ ಪ್ರತಿ, ಬೆಳೆ ನಷ್ಟವಾಗಿರುವ ಪ್ರದೇಶದ ಆರ್‌ಟಿಸಿ ಪ್ರತಿ ಹಾಗೂ ರೈತರ ಬ್ಯಾಂಕ್ ಪಾಸ್ ಬುಕ್‌ನ ಮೊದಲ ಪುಟದ ಜೆರಾಕ್ಸ್ ಲಗತ್ತಿಸುವುದು ಅವಶ್ಯಕ. ಅರ್ಜಿಯನ್ನು ಸೆ.17ರೊಳಗೆ ಸಲ್ಲಿಸಬೇಕು ಹಾಗೂ ಈ ಬಗ್ಗೆ ರೈತರು ಯಾರಿಗೂ ಯಾವುದೇ ಶುಲ್ಕ ನೀಡಬೇಕಾಗಿಲ್ಲ ಎಂದು ಸಂಘದ ಪ್ರಕಟಣೆ ತಿಳಿಸಿದೆ.

ಆದರೆ ರೈತರ ಬೆಳೆ ನಷ್ಟವಾದಲ್ಲಿ ಮಾತ್ರ ಪ್ರಾಮಾಣಿಕವಾಗಿ ಪರಿಹಾರಕ್ಕೆ ಅರ್ಜಿ ಸಲ್ಲಿಸುವಂತೆ ಸಂಘಟನೆ ಕೋರಿದೆ. 2013ರಲ್ಲಿ ಆದಂತೆ ಅಡಿಕೆ ತೋಟ ಗಳೇ ಇಲ್ಲದವರಿಗೆ ಪರಿಹಾರ ನೀಡದಂತೆ ಅಧಿಕಾರಿಗಳೂ ಜಾಗೃತೆ ವಹಿಸು ವಂತೆಯೂ ಅದು ಸಲಹೆ ನೀಡಿದೆ. ರೈತರ ನಷ್ಟಕ್ಕೆ ರಾಜ್ಯ ಸರಕಾರ ವಿಶೇಷ ಪ್ಯಾಕೇಜ್ ಘೋಷಿಸಿ ರೈತನಿಗಾದ ನೈಜ ನಷ್ಟದ ಆಧಾರದಲ್ಲಿ ಪರಿಹಾರ ನೀಡುವಂತೆ ಸರಕಾರಕ್ಕೆ ಪತ್ರ ಬರೆದು ಆಗ್ರಹಿಸಲು ಸಂಘ ತೀರ್ಮಾನಿಸಿದೆ ಎಂದು ಭಾಕಿಸಂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ ಉಡು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News