ತಂತ್ರಜ್ಞಾನದ ಕಾಲಘಟ್ಟದಲ್ಲಿ ಸಾಹಿತ್ಯ ಕ್ಷೇತ್ರವು ನಮ್ಮಿಂದ ದೂರವಾಗುತ್ತಿದೆ: ಬಿ.ಎಂ. ರೋಹಿಣಿ

Update: 2018-09-15 15:39 GMT

ಕೊಣಾಜೆ, ಸೆ. 15:  ಇಂದಿನ ಆಧುನಿಕ ಕಾಲಘಟ್ಟದಲ್ಲಿ ತಂತ್ರಜ್ಞಾನವು ಬಹಳಷ್ಟು ಮುಂದುವರಿದಿರುವುದರಿಂದ ಸಾಹಿತ್ಯ ಕ್ಷೇತ್ರವು ದೂರವಾಗುತ್ತಿರುವ ಅನುಭವವಾಗುತ್ತದೆ. ಪುಸ್ತಕ ಓದುವವರ ಸಂಖ್ಯೆ ಇಳಿದಿದ್ದು, ಭಾಷಾವಾರು ಶಿಕ್ಷಣ ಕೂಡಾ ಕಡಿಮೆಯಾಗುತ್ತಿರುವುದು ಬೇಸರದ ಸಂಗತಿಯಾಗಿದೆ ಎಂದು ಹಿರಿಯ ಲೇಖಕಿ , ಸಂಶೋದಕಿ ಬಿ.ಎಂ. ರೋಹಿಣಿ ಹೇಳಿದರು.

ಅವರು ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ತಾಲೂಕು ಇದರ ಆಶ್ರಯದಲ್ಲಿ ಶನಿವಾರ  ದೇರಳಕಟ್ಟೆಯಲ್ಲಿರುವ ವಿದ್ಯಾರತ್ನ ಶಾಲೆಯಲ್ಲಿ ಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದರು. 

ಇಂದು ಕನ್ನಡ ಶಾಲೆಗಳು ಬಾಗಿಲು ಮುಚ್ಚಿಸುವ ಹಂತಕ್ಕೆ ಖಾಸಗಿ ಶಾಲೆಗಳು ಅದರಲ್ಲೂ ಆಂಗ್ಲ ಮಾಧ್ಯಮ ಶಾಲೆಗಳು ಬೆಳೆದಿವೆ. ಪ್ರಸಕ್ತ 1782 ಸರಕಾರಿ ಶಾಲೆಗಳು ಮುಚ್ಚಲ್ಪಟ್ಟು 3186 ಖಾಸಗಿ ಶಾಲೆಗಳು ಆರಂಭವಾಗಿವೆ ಕರಾವಳಿಯಲ್ಲೇ ಕನ್ನಡದ ಕೊರತೆ ಎದ್ದು ಕಾಣುತ್ತಿದ್ದು ಈ ಬಗ್ಗೆ ನಾವು ಎಚ್ಚೆತ್ತುಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದು ಹೇಳಿದರು. 

ಮಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ. ಶಿವರಾಮ ಶೆಟ್ಟಿ ಮಾತನಾಡಿ, ಕನ್ನಡಿಗರಿಗೆ ಕನ್ನೆದ ಅಭಿರುಚಿಯನ್ನು ಬೆಳೆಸಲು ಇಂತಹ ಸಮ್ಮೇಳನವನ್ನು ಹಮ್ಮಿಕೊಳ್ಳುತ್ತೇವೆ. ಆದರೆ ಇದನ್ನು ಸದುಪಯೋಗ ಮಾಡುವವರ ಸಂಖ್ಯೆ ಕುಂಠಿತವಾಗಿದೆ. ಕನ್ನಡ ಶಬ್ದಗಳು ಈಗಿನ ಮಕ್ಕಳಿಗೆ ಗೊತ್ತಿರುವುದಿಲ್ಲ. ಆಂಗ್ಲ ಮಾಧ್ಯಮ ಶಾಲೆ ಬಂದ ಬಳಿಕ ಕನ್ನಡ ಭಾಷೆಯನ್ನೇ ಮರತುಬಿಡುವಂತಹ ಪರಿಸ್ಥಿತಿ ಬಂದಿದೆ. ಭಾಷೆ ಎಷ್ಟೇ ಇರಲಿ, ಕನ್ನಡ ಭಾಷೆಯ ಉಳಿವು, ಕನ್ನಡ ಸಂಸ್ಕøತಿಯ ಉಳಿವು ಆಗಬೇಕು. ಸಂಸ್ಕøತಿ ಹಲವು ಇರಬಹುದು. ಇಂಗ್ಲಿಷ್ ಭಾಷೆಯ ಬಳಕೆ ತಪ್ಪು ಎನ್ನಲಾಗುವುದಿಲ್ಲ. ಆದರೆ ಕನ್ನಡ ಭಾಷೆಯ ಸಂಸ್ಕøತಿಯನ್ನು ಅಳಿಸಿ ಹೋಗದಂತೆ ಸಂಪೂರ್ಣ ಪ್ರಯತ್ನ ಆಗಬೇಕು ಎಂದರು.

ಪರಿಷತ್‍ನ ಧ್ವಜಾರೋಹಣ ಮಾಡಿದ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರಾ ಆಶಯ ಭಾಷಣ ಮಾಡಿದರು. ರತ್ನ ಎಜುಕೇಶನ್ ಟ್ರಸ್ಟ್‍ನ  ಕೋಶಾಧಿಕಾರಿ ರತ್ನಾವತಿ ಕೆ. ಶೆಟ್ಟಿ ಪುಸ್ತಕ ಪ್ರದರ್ಶನವನ್ನು ಉದ್ಘಾಟಿಸಿದರು.ರತ್ನ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು ಪುಸ್ತಕ ಬಿಡುಗಡೆ ಮಾಡಿದರು. ಸ್ಮರಣ ಸಂಚಿಕೆ ಬಿಡುಗಡೆಯನ್ನು ಕಸಾಪ ಮಾಜಿ ಅಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ನೆರವೇರಿಸಿದರು.ಮಂಗಳೂರು ತಾ.ಪಂ. ಅಧ್ಯಕ್ಷ ಮಹಮ್ಮದ್ ಮೋನು,  ಜಿ..ಪಂ. ಸದಸ್ಯೆ ರಶೀದಾಬಾನು, ರತ್ನ ಎಜುಕೇಶನಲ್ ಟ್ರಸ್ಟ್ ಕಾರ್ಯದರ್ಶಿ ಸೌಮ್ಯ ಆರ್ ಭಟ್, ಉಪಸ್ಥಿತರಿದ್ದರು. 

ಕ.ಸಾ.ಪ. ಮಂಗಳೂರು ದೇವಕಿ ಅಚ್ಯುತ್ತ ಧನ್ಯವಾದ ಸಮರ್ಪಿಸಿದರು. ಚೇತನ್ ಕದ್ರಿ ಅಧ್ಯಕ್ಷರ ಪರಿಚಯ ಮಾಡಿದರು. ಪದ್ಮನಾಭ ಭಟ್ ಎಕ್ಕಾರು ಕಾರ್ಯಕ್ರಮ ನಿರ್ವಹಣೆ ಮಾಡಿದರು.

ಕಾರ್ಯಕ್ರಮ ಆರಂಭ ಆಗುವ ಮುನ್ನಾ ಸಮ್ಮೇಳನಾಧ್ಯಕ್ಷರನ್ನು ದೇರಳಕಟ್ಟೆ ನೇತಾಜಿ ಸುಭಾಶ್ಚಂದ್ರ ಬೋಸ್ ಶಾಲಾ ವಠಾರದಿಂದ ಮೆರವಣಿಗೆ ಮೂಲಕ ಕರ ತರಲಾಯಿತು. ಈ ಮೆರವಣಿಗೆ ಕಾರ್ಯಕ್ರಮವನ್ನು ಬೆಳ್ಮ ಗ್ರಾ.ಪಂ. ಅಧ್ಯಕ್ಷೆ ವಿಜಯ ಕೃಷಪ್ಪ ಪುಜಾರಿ ಉದ್ಘಾಟಿಸಿದರು.

ನೇತಾಜಿ ದೇರಳಕಟ್ಟೆ ನೇತಾಜಿ ಸುಭಾಶ್ಚಂದ್ರ ಬೋಸ್ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಪಿ.ಎಚ್. ಇಸ್ಮಾಯಿಲ್ ಪುಷ್ಪಾರ್ಚನೆ ಮಾಡಿದರು. ಶಿಕ್ಷಕ ನವೀನ್ ರಾವ್ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಕಾರ್ಯಕ್ರಮದ ಬಳಿಕ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News