ಕರೋಲಿನ ರಾಜ್ಯಗಳಲ್ಲಿ ‘ಫ್ಲಾರೆನ್ಸ್’ ದಾಂಧಲೆ

Update: 2018-09-15 15:43 GMT

ವಾಶಿಂಗ್ಟನ್, ಸೆ. 15: ಅಮೆರಿಕದ ಕರೋಲಿನ ಕರಾವಳಿಗೆ ಶುಕ್ರವಾರ ಅಪ್ಪಳಿಸಿದ ‘ಫ್ಲಾರೆನ್ಸ್’ ಚಂಡಮಾರುತಕ್ಕೆ ಐವರು ಬಲಿಯಾಗಿದ್ದಾರೆ. ಚಂಡಮಾರುತವು ಅದರ ಮಾರ್ಗದಲ್ಲಿದ್ದ ಮರಗಳನ್ನು ಉರುಳಿಸುತ್ತಾ ಸಾಗಿದೆ, ಅದರ ಪರಿಣಾಮವಾಗಿ ನದಿಗಳು ಉಕ್ಕಿ ಹರಿಯುತ್ತಿವೆ ಹಾಗೂ ಅಗಾಧ ಪ್ರಮಾಣದಲ್ಲಿ ಮಳೆ ಸುರಿದಿದೆ.

ಬಳಿಕ ಅದರ ತೀವ್ರತೆಯು ಕಡಿಮೆಯಾಗಿದ್ದು, ಬಿರುಗಾಳಿಯಾಗಿ ಮಾರ್ಪಟ್ಟಿದೆ. ಆದಾಗ್ಯೂ, ಅದು ವಿನಾಶಗಳನ್ನು ಸೃಷ್ಟಿಸುವ ಸಾಮರ್ಥ್ಯವನ್ನು ಹೊಂದಿದೆ.

ನಾರ್ತ್ ಕರೋಲಿನದ ವಿಲ್ಮಿಂಗ್ಟನ್‌ನಲ್ಲಿನ ಮನೆಯೊಂದರ ಮೇಲೆ ಮರವೊಂದು ಉರುಳಿ ತಾಯಿ-ಮಗು ಮೃತಪಟ್ಟಿದ್ದಾರೆ. ಅದೇ ರಾಜ್ಯದ ಪೆಂಡರ್ ಕೌಂಟಿಯಲ್ಲಿ ಮಹಿಳೆಯೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಲೆನಾಯರ್ ಕೌಂಟಿಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ.

ಗುರುವಾರ ‘ಫ್ಲಾರೆನ್ಸ್’ ಚಂಡಮಾರುತವು ‘ಕೆಟಗರಿ 3’ರ ಸುಂಟರಗಾಳಿಯಾಗಿತು ಹಾಗೂ ಅದರ ಒಡಲೊಳಗೆ ಗಂಟೆಗೆ 193 ಕಿ.ಮೀ. ವೇಗದ ಗಾಳಿಯನ್ನು ಹೊಂದಿತ್ತು. ಆದರೆ ಶುಕ್ರವಾರ ತೀರಕ್ಕೆ ಅಪ್ಪಳಿಸಿದಾಗ ಅದು ‘ಕೆಟಗರಿ 1’ ಬಿರುಗಾಳಿಯಾಗಿ ಮಾರ್ಪಾಡಾಗಿತ್ತು.

ಚಂಡಮಾರುತದ ಕೇಂದ್ರ ಬಿಂದು ಶುಕ್ರವಾರ ಬೆಳಗ್ಗೆ ಸ್ಥಳೀಯ ಸಮಯ 7:15ಕ್ಕೆ ವಿಲ್ಮಿಂಗ್ಟನ್ ಸಮೀಪ ತೀರಕ್ಕೆ ಗಂಟೆಗೆ 150 ಕಿ.ಮೀ. ವೇಗದ ಗಾಳಿಯೊಂದಿಗೆ ಅಪ್ಪಳಿಸಿತು. ಎಂದು ನ್ಯಾಶನಲ್ ಹರಿಕೇನ್ ಸೆಂಟರ್ (ಎನ್‌ಎಚ್‌ಸಿ) ತಿಳಿಸಿದೆ.

ಶುಕ್ರವಾರ ಸಂಜೆಯ ವೇಳೆಗೆ, ಚಂಡಮಾರುತದ ಕೇಂದ್ರ ಬಿಂದು ಸೌತ್ ಕರೋಲಿನದ ಪೂರ್ವ ಭಾಗಕ್ಕೆ ಗಂಟೆಗೆ 112 ಕಿ.ಮೀ. ವೇಗದಲ್ಲಿ ಅಪ್ಪಳಿಸಿತು.

100 ಸೆಂಟಿಮೀಟರ್ ಮಳೆ

ಉತ್ತರ ಮತ್ತು ದಕ್ಷಿಣ ಕರೋಲಿನ ರಾಜ್ಯಗಳ ಹಲವು ಭಾಗಗಳಲ್ಲಿ 100 ಸೆಂಟಿಮೀಟರ್ ಮಳೆ ಸುರಿಯಲಿದೆ ಎಂದು ಹವಾಮಾನ ವೀಕ್ಷಕರು ಹೇಳಿದ್ದಾರೆ.

ನಾರ್ತ್ ಕರೋಲಿನದ ಔಟರ್ ಬ್ಯಾಂಕ್ಸ್ ಬ್ಯಾರಿಯರ್ ದ್ವೀಪದಲ್ಲಿರುವ ಅಟ್ಲಾಂಟಿಕ್ ಬೀಚ್‌ನಲ್ಲಿ 76 ಸೆಂಟಿಮೀಟರ್ ಮಳೆ ಸುರಿದಿದೆ ಎಂದು ಯುಎಸ್ ಜಿಯಾಲಜಿಕಲ್ ಸರ್ವೇ ತಿಳಿಸಿದೆ.

ಸುಮಾರು 9 ಲಕ್ಷ ಮನೆಗಳು ಮತ್ತು ವ್ಯಾಪಾರ ಮಳಿಗೆಗಳನ್ನು ತೆರವುಗೊಳಿಸಲಾಗಿದೆ.

ಫಿಲಿಪ್ಪೀನ್ಸ್ ಚಂಡಮಾರುತದಲ್ಲಿ 2 ಸಾವು

ಫಿಲಿಪ್ಪೀನ್ಸ್‌ಗೆ ಶನಿವಾರ ಅಪ್ಪಳಿಸಿದ ‘ಮಂಗ್‌ಖುಟ್’ ಚಂಡಮಾರುತದಲ್ಲಿ ಇಬ್ಬರು ಮಹಿಳೆಯರು ಪ್ರಾಣ ಕಳೆದುಕೊಂಡಿದ್ದಾರೆ.

ಚಂಡಮಾರುತದ ಪರಿಣಾಮವಾಗಿ ಸುರಿದ ಭಾರೀ ಮಳೆಯಿಂದಾಗಿ ಗುಡ್ಡದ ಅಂಚೊಂದು ಕುಸಿದಿದ್ದು, ಈ ಮಹಿಳೆಯರು ಅವಶೇಷಗಳ ಅಡಿಯಲ್ಲಿ ಸಿಕ್ಕಿಕೊಂಡರು.

ಮಂಗ್‌ಖುಟ್ ಚಂಡಮಾರುತವು ಲುರೊನ್ ದ್ವೀಪದ ಉತ್ತರ ಭಾಗದ ಮೂಲಕ ಹಾದುಹೋಗಿದ್ದು, ಅದೇ ದ್ವೀಪದಲ್ಲಿ ಭೂಸ್ಪರ್ಶ ಮಾಡಿದೆ.

ಅದರ ದಾರಿಯಲ್ಲಿ ಬಂದ ಮರಗಳನ್ನು ಉರುಳಿಸಿದೆ, ಮನೆಗಳ ಮೇಲ್ಛಾವಣಿಗಳನ್ನು ಹಾರಿಸಿದೆ ಹಾಗೂ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿದೆ.

ಚೀನಾ, ಹಾಂಕಾಂಗ್‌ನತ್ತ ಧಾವಿಸುತ್ತಿರುವ ‘ಮಂಗ್‌ಖುಟ್’

ಸದ್ಯ ಫಿಲಿಪ್ಪೀನ್ಸ್‌ನಲ್ಲಿ ದಾಂಧಲೆ ನಡೆಸುತ್ತಿರುವ ‘ಮಂಗ್‌ಖುಟ್’ ಚಂಡಮಾರುತ ದಕ್ಷಿಣ ಚೀನಾ ಮತ್ತು ಹಾಂಕಾಂಗ್‌ನತ್ತ ಧಾವಿಸುತ್ತಿದೆ. ಚಂಡಮಾರುತವನ್ನು ಎದುರಿಸಲು ಚೀನಾ ಸರಕಾರ ಮುಂಜಾಗರೂಕತಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.

ಅದೇ ವೇಳೆ, ಹಾಂಕಾಂಗ್‌ನ ಗೃಹ ಸಚಿವರು ಎಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಜನರನ್ನು ಒತ್ತಾಯಿಸಿದ್ದಾರೆ.

ಫುಜಿಯನ್ ಪ್ರಾಂತದಲ್ಲಿ ಮೀನುಗಾರಿಕಾ ದೋಣಿಗಳಿಂದ 51,000 ಮಂದಿಯನ್ನು ತೆರವುಗೊಳಿಸಲಾಗಿದೆ ಹಾಗೂ ಶನಿವಾರ ಬೆಳಗ್ಗಿನ ವೇಳೆಗೆ ಸುಮಾರು 11,000 ದೋಣಿಗಳು ಬಂದರುಗಳಿಗೆ ವಾಪಸಾಗಿವೆ.

ಚಂಡಮಾರುತವು ರವಿವಾರ ಮಧ್ಯಾಹ್ನ ಅಥವಾ ರಾತ್ರಿ ಗುವಾಂಗ್‌ಡಾಂಗ್ ಪ್ರಾಂತದ ಕರಾವಳಿಗೆ ಅಪ್ಪಳಿಸಲಿದೆ ಎಂದು ಚೀನಾದ ರಾಷ್ಟ್ರೀಯ ಹವಾಮಾನ ಕೇಂದ್ರ ತಿಳಿಸಿದೆ.

ಚಂಡಮಾರುತದ ಪರಿಣಾಮವಾಗಿ ಅತ್ಯಂತ ವೇಗದ ಗಾಳಿ ಬೀಸಲಿದೆ ಮತ್ತು ಭಾರೀ ಪ್ರಮಾಣದಲ್ಲಿ ಮಳೆ ಸುರಿಯಲಿದೆ ಎಂದು ಅದು ಎಚ್ಚರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News