ಮ್ಯಾರಥಾನ್‌ನಲ್ಲಿ ನೂತನ ವಿಶ್ವದಾಖಲೆ ನಿರ್ಮಿಸಿದ ಕಿಪ್ಚೋಗ್

Update: 2018-09-16 12:19 GMT

ಬರ್ಲಿನ್, ಸೆ.16: ಕೀನ್ಯದ ಒಲಿಂಪಿಕ್ಸ್ ಚಾಂಪಿಯನ್ ಎಲಿಯುಡ್ ಕಿಪ್ಚೋಗ್ ಮ್ಯಾರಥಾನ್ ಓಟದಲ್ಲಿ ನೂತನ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ.

ರವಿವಾರ ನಡೆದ ಮ್ಯಾರಥಾನ್ ಓಟದಲ್ಲಿ 33ರ ಹರೆಯದ ಕಿಪ್ಚೋಗ್ 2 ಗಂಟೆ, ಒಂದು ನಿಮಿಷ ಹಾಗೂ 39 ಸೆಕೆಂಡ್‌ನಲ್ಲಿ ಗುರಿ ತಲುಪಿದರು. ಈ ಮೂಲಕ ತನ್ನದೇ ದೇಶದ ಡೆನಿಸ್ ಕಿಮೆಟ್ಟೊ(2:02.57)ನಾಲ್ಕು ವರ್ಷಗಳ ಹಿಂದೆ ನಿರ್ಮಿಸಿದ್ದ ವಿಶ್ವ ದಾಖಲೆಯನ್ನು ಪತನಗೊಳಿಸಿದರು.

ಅಮೊಸ್ ಕಿಪ್ರುಟೊ ಹಾಗೂ ಕಿಪ್‌ಸಂಗ್ ಎರಡು ಹಾಗೂ 3ನೇ ಸ್ಥಾನ ಪಡೆದರು. ಕೀನ್ಯ ಓಟಗಾರ್ತಿ ಗ್ಲಾಡಿಸ್ ಚೆರೊನೊ ಮಹಿಳೆಯರ ಮ್ಯಾರಥಾನ್ ಓಟದಲ್ಲಿ 2:18:11 ಸೆಕೆಂಡ್‌ನಲ್ಲಿ ಗುರಿ ತಲುಪಿ ಚಾಂಪಿಯನ್ ಎನಿಸಿಕೊಂಡರು. ಇಥಿಯೋಪಿಯದ ರುಟಿ ಅಗಾ ಹಾಗೂ ಟಿರುನೇಶ್ ಡಿಬಾಬಾ ಕ್ರಮವಾಗಿ 2ನೇ ಹಾಗೂ 3ನೇ ಸ್ಥಾನ ಪಡೆದಿದ್ದಾರೆ.

‘‘ನನಗೆ ಈ ದಿನವನ್ನು ವರ್ಣಿಸಲು ಪದಗಳೇ ಸಿಗುತ್ತಿಲ್ಲ. ವಿಶ್ವ ದಾಖಲೆಯೊಂದನ್ನು ಮುರಿದಿರುವುದಕ್ಕೆ ತುಂಬಾ ಸಂತೋಷವಾಗುತ್ತಿದೆ. ನನಗೆ ನೆರವಾದ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸುವೆ’’ ಎಂದು 2016 ಹಾಗೂ 2017ರಲ್ಲಿ ಜರ್ಮನಿ ರಾಜಧಾನಿ ಬರ್ಲಿನ್‌ನಲ್ಲಿ ನಡೆದ ಮ್ಯಾರಥಾನ್‌ನಲ್ಲಿ ವಿಜಯಿಯಾಗಿದ್ದ ಕಿಪ್ಚೋಗ್ ಹೇಳಿದ್ದಾರೆ.

  ಆಧುನಿಕ ಯುಗದ ಶ್ರೇಷ್ಠ ಮ್ಯಾರಥಾನ್ ರನ್ನರ್ ಆಗಿರುವ ಕಿಪ್ಚೋಗ್ 2013ರಲ್ಲಿ ಹ್ಯಾಂಬರ್ಗ್‌ನಲ್ಲಿ ಮ್ಯಾರಥಾನ್‌ಗೆ ಕಾಲಿಟ್ಟಿದ್ದರು. ಕಿಪ್ಚೋಗ್ ಒಲಿಂಪಿಕ್ಸ್ ಸಹಿತ 12 ಮ್ಯಾರಥಾನ್ ಓಟಗಳ ಪೈಕಿ 11ರಲ್ಲಿ ಜಯಶಾಲಿಯಾಗಿದ್ದಾರೆ. ಚಿಕಾಗೊ(2014), ಬರ್ಲಿನ್(2015 ಹಾಗೂ 2017) ಲಂಡನ್‌ನಲ್ಲಿ(2015,2016,2018) ನಡೆದ ವಿಶ್ವ ಮ್ಯಾರಥಾನ್‌ನಲ್ಲಿ ಮೊದಲ ಸ್ಥಾನ ಪಡೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News