ನಾರಾಯಣ ಗುರುಗಳಂತಹ ದಾರ್ಶನಿಕರಿಂದಾಗಿ ಹಿಂದೂ ಧರ್ಮ ಉಳಿದುಕೊಂಡಿದೆ: ಅಮೀನ್ ಮಟ್ಟು

Update: 2018-09-16 14:13 GMT

ಬೆಳ್ತಂಗಡಿ, ಸೆ. 16: ಹಿಂದೂ ಧರ್ಮ ಇಂದು ಉಳಿದಿದ್ದರೆ ಅದು ನಾರಾಯಣ ಗುರುಗಳಂತಹ ಕ್ರಾಂತಿಕಾರಿ ವ್ಯಕ್ತಿಗಳಿಂದಾಗಿಯೇ ಹೊರತು ಶಂಕರಾಚಾರ್ಯರಿಂದಾಗಿ ಅಲ್ಲ. ನಾರಾಯಣ ಗುರುಗಳು ನಡೆಸಿದ ಚಳವಳಿ ಕೇವಲ ಧಾರ್ಮಿಕ ಚಳವಳಿ ಮಾತ್ರವಾಗಿರಲಿಲ್ಲ ಅದು ಒಂದು ಸಾಂಸ್ಕೃತಿಕ ಚಳವಳಿಯಾಗಿತ್ತು. ಅದನ್ನು ಇಂದಿಗೂ ಮುಂದುವರಿಸಿಕೊಂಡು ಹೋಗುವ ಅಗತ್ಯವಿದೆ ಎಂದು ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಹೇಳಿದರು. 

ಅವರು ಬೆಳ್ತಂಗಡಿಯ ಗುರುನಾರಾಯಣ ಸಭಾಭವನದಲ್ಲಿ  ನಡೆದ ಶ್ರೀ ಗುರು ನಾರಯಣ ಸ್ವಾಮಿ ಸೇವಾ ಸಂಘ ಬೆಳ್ತಂಗಡಿ, ಯುವ ಬಿಲ್ಲವ ವೇದಿಕೆ ಮತ್ತು ಮಹಿಳಾ ಬಿಲ್ಲವ ವೇದಿಕೆ ಬೆಳ್ತಂಗಡಿ ಇದರ ಆಶ್ರಯದಲ್ಲಿ ನಡೆದ ನಾರಾಯಣ ಗುರುಗಳ 164ನೆಯ ಗುರುಜಯಂತಿಯ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಗಾರರಾಗಿ ಆಗಮಿಸಿ ಮಾತನಾಡಿದರು.

ವರ್ಣಾಶ್ರಮ ವ್ಯವಸ್ಥೆ ಹಿಂದೂ ಧರ್ಮಕ್ಕೆ ಹಿಡಿದ ಶಾಪವಾಗಿದೆ ಅದೇ ಹಿಂದೂ ಧರ್ಮ ಎಂದು ಹೇಳುವುದಾದರೆ ಅದಕ್ಕೆ ನನ್ನ ವಿರೋಧವಿದೆ ಎಂದ ಅವರು ನಾರಾಯಣ ಗುರುಗಳನ್ನು ಎಲ್ಲರೂ ಪ್ರೀತಿಸುತ್ತಾರೆ ಆದರೆ ಅವರ ಸಂದೇಶಗಳನ್ನು ತಿಳಿದುಕೊಂಡು ಮುಂದುವರಿಯುವುದಿಲ್ಲ ಅದು ನಮ್ಮ ಸಮಸ್ಯೆಯಾಗಿದೆ ಎಂದರು. 

ಇದೀಗ ದೇಶ ಭಕ್ತಿ ಬಹುದೊಡ್ಡ ರಾಜಕೀಯ ಸರಕಾಗಿ ಮಾರ್ಪಟ್ಟಿದೆ. ಆದರೆ ನಿಜವಾದ ದೇಶಭಕ್ತ ಗಡಿಯಲ್ಲಿ ದುಡಿಯುವ ಸೈನಿಕನಾಗಿದ್ದಾನೆ, ದೇಶಭಕ್ತಿಯ ಬಗ್ಗೆ ಮಾತನಾಡುವ ಅದರ ಹೆಸರು ಹೇಳಿ ಅಧಿಕಾರಕ್ಕೆ ಬರುವ ರಾಜಕಾರಣಿಗಳಿಗೂ ಇವರಿಗೂ ಯಾವುದೇ ಸಂಬಂಧವಿಲ್ಲ ಎಂದರು. 

ಬಿಲ್ಲವ ಸಮುದಾಯ ಯೋಧ ಪರಂಪರೆಯವರು, ವೈಧ್ಯಪರಂಪರೆಯರು,  ಈ ನೆಲದ ಮೂಲ ಪುರುಷರಾದ ಕೋಟಿ ಚೆನ್ನಯ್ಯ ಅವರು ಸತ್ಯ ನ್ಯಾಯ ಸ್ವಾಭಿಮಾನಕ್ಕಾಗಿ ಹೋರಾಡಿದವರು. ಅವರು ಮಾಡಿದ್ದು ಈ ನೆಲದ ಮೊದಲ ವರ್ಗ ಸಂಘರ್ಷವಾಗಿದೆ. ಅವರು ಸಮಾನತೆಯನ್ನು ಬಯಸಿದವರು, ಆದರ್ಶಗಳು ನಮಗೆ ಮಾರ್ಗದರ್ಶನವಾಗಿದೆ ಎಂದರು.

ನಾರಾಯಣ ಗುರುಗಳು ದೇವಸ್ಥಾನದ ಪ್ರವೇಶಕ್ಕೆ ಬೇಕಾಗಿ ಹೋರಾಟ ಮಾಡಿದವರಲ್ಲ ಅವರು ಶೋಷಿತ ಸಮುದಾಯಗಳ ಮನೆಬಾಗಿಲಿಗೆ  ದೇವಸ್ಥಾನಗಳನ್ನು ತಂದವರು. ಅವರು ನೀಡಿರುವ ಸಂದೇಶ ಸರಳ ಪೂಜೆಯ ಸಂದೇಶವಾಗಿತ್ತು ಆದರೆ ಇಂದು ಎಲ್ಲರೂ ವೈಭವಕ್ಕೆ ಮುಂದಾಗುತ್ತಿದ್ದೇವೆ, ಗುರುಗಳ ದಾರಿಯನ್ನು ಮರೆತ ಕಾರಣಕ್ಕೆ ನಾವು ಹಿಂದುಳಿದಿದ್ದೇವೆ ಎಂದರು.

ನಾರಾಯಣಗುರುಗಳ ಸಿದ್ಧಾಂತವನ್ನು ಒಪ್ಪಿಕೊಂಡವನು ಯಾವ ಕಾರಣಕ್ಕೂ ಕೋಮುವಾದಿ ಆಗಲಾರ ಅವನು ಎಲ್ಲರನ್ನೂ ಪ್ರೀತಿಸುವಂತವನಾಗುತ್ತಾನೆ ಎಂದರು. ಕೇರಳದಲ್ಲಿ ಶೋಷಿತರಾಗಿದ್ದ ಈಳವ ಸಮುದಾಯದವರು ಮುಖ್ಯಮಂತ್ರಿಗಳಾಗುತ್ತಾರೆ ಉನ್ನತ ಸ್ಥಾನಗಳನ್ನು ಅಲಂಕರಿಸುತ್ತಾರೆ  ಆದರೆ ಕರ್ನಾಟಕದಲ್ಲಿ ಬಿಲ್ಲವರ ರಾಜಕೀಯ ಪ್ರಾತಿನಿತ್ಯ ದಿನದಿಂದ ದಿನಕ್ಕೆ ಕುಸಿಯುತ್ತಾ ಹೋಗುತ್ತಿದೆ, ಒಂದು ಸಂದರ್ಭದಲ್ಲಿ ಆರು ಜನ ಸಂಸದರು ಇದ್ದರು ಆದರೆ ಈಗ ಕೇವಲ ಒಬ್ಬ ಸಂಸದ ಮಾತ್ರ ಇದ್ದಾರೆ ಇದು ನಮ್ಮ ದುಸ್ಥಿತಿಯಾಗಿದೆ ಎಂದರು. 

ಕಾರ್ಯಕ್ರಮದ ಉದ್ಘಾಟನೆಯನ್ನು ಬೆಳ್ತಂಗಡಿ ಮಾಜಿ ಶಾಸಕ ಕೆ ವಸಂತ ಬಂಗೇರ ಅವರು ನೆರವೇರಿಸಿ ಹಿಂದುಳಿದ ಜಾತಿಗಳಲ್ಲಿ ಪರಿವರ್ತನೆ ಮಾಡಿದವರು ನಾರಾಯಣ ಗುರುಗಳು ಶೋಷಿತ ಸಮುದಾಯಗಳು ಶಿಕ್ಷಣದ ಮೂಲಕವಾಗಿ ಮಾತ್ರ ಮುಂದುವರಿಯಲು ಸಾಧ್ಯವಿದೆ ಎಂದರು.

ಆಶೀರ್ವಚನ ನೀಡಿದ ಕನ್ಯಾಡಿಯ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ಧರ್ಮ ನಮ್ಮ ಜೀವಾಳವಾಗಬೇಕು, ನಾರಾಯಣ ಗುರುಗಳ ವಿಚಾರ ಬಾಯಲ್ಲಿ ಮಾತ್ರ ಇರದೆ ಪಾಲನೆಯಲ್ಲಿ ಇರಬೇಕು, ಗುರುಕುಲ ಶಿಕ್ಷಣವೇ ಶ್ರೇಷ್ಠವಾದುದು ಮೆಕಾಲೆ ಶಿಕ್ಷಣದ ಬದಲಿಗೆ ಗುರುಕುಲ ಶಿಕ್ಷಣವನ್ನು ಜಾರಿಗೆ ತರಬೇಕಾದೆ ಎಂದರು.

ವೇದಿಕೆಯಲ್ಲಿ ಸಂಘದ ಪೂರ್ವಾಧ್ಯಕ್ಷರುಗಳಾದ ವಸಂತ ಸಾಲಿಯಾನ್, ಪದ್ಮನಾಭ ಮಾಣಿಂಜ, ರಾಜು ಪೂಜಾರಿ, ಯೋಗೀಶ್ ಕುಮಾರ್, ಭಗೀರಥ ಜಿ, ಜಯರಾಮ ಬಂಗೇರ, ಮಹಿಳಾ ಬಿಲ್ಲವ ವೇದಿಕೆ ಅಧ್ಯಕ್ಷೆ ರಾಜಶ್ರೀ ರಮಣ್, ಮಹಿಳಾ ವೇದಿಕೆ ಸ್ಥಾಪಕಾಧ್ಯಕ್ಷೆ ಸುಜಿತಾ ವಿ ಬಂಗೇರ, ಯುವ ಬಿಲ್ಲವ ವೇದಿಕೆ ಅಧ್ಯಕ್ಷ ಸಂತೋಷ್ ಉಪ್ಪಾರ್ ಇದ್ದರು.

ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಸೋಮನಾಥ ಬಂಗೇರ ವರ್ಪಾಳೆ ವಹಿಸಿ ಪ್ರಸ್ತಾವಿಕ ಮಾತಿನೊಂದಿಗೆ ಸ್ವಾಗತಿಸಿದರು. ಇದೇ ಸಂದರ್ಭದಲ್ಲಿ ಸಮುದಾಯದ  12 ಮಂದಿ ಮಾಜಿ ಸೈನಿಕರನ್ನು 12 ಮಂದಿ ಹಾಲಿ ಸೈನಿಕರನ್ನು ಗೌರವಿಸಲಾಯಿತು. 6 ಲಕ್ಷ ರೂ. ವಿದ್ಯಾರ್ಥಿವೇತನವಾಗಿ ನೀಡಲಾಯಿತು.  ಕೃಷಿ ಕ್ಷೇತ್ರದ ಸಾಧಕ ಸಂಜೀವ ಪೂಜಾರಿ ಮೂಡ್ಲ ಮತ್ತು  ಕೃಷಿ ಯಂತ್ರೋಪಕರಣಗಳ ಸಾಧಕ ದಯಾನಂದ ಪೂಜಾರಿ ಮಿತ್ತಬಾಗಿಲು ಇವರನ್ನು ಸನ್ಮಾನಿಸಲಾಯಿತು. ಗ್ರಾಮ ಸಮಿತಿಗಳಿಗೆ ಬ್ರಹ್ಮಶ್ರೀ ಪದಕ ನೀಡಲಾಯಿತು.  ದಿನೇಶ್ ಸುವರ್ಣ ರಾಯಿ ಕಾರ್ಯಕ್ರಮ ನಿರೂಪಿಸಿ, ಸಂಘದ ಕಾರ್ಯದರ್ಶಿ ರಾಕೇಶ್ ಕುಮಾರ್ ಮೂಡುಕೋಡಿ ಧನ್ಯವಾದವಿತ್ತರು. 

ಕನ್ಯಾಡಿಯಲ್ಲಿ ನಡೆದ ಧರ್ಮ್ ಸಂಸತ್ತಿನಲ್ಲಿ ನಾರಾಯಣ ಗುರುಗಳ ಸಿದ್ಧಾಂತವನ್ನು ಸಂಪೂರ್ಣವಾಗಿ ಕಡಗಣಿಸಲಾಗಿದೆ. ನಾರಾಯಣ ಗುರುಗಳನ್ನು ಕಡೆಗಣಿಸಿ ಮಾಡುವ ಇಂತಹ ಧರ್ಮಸಂಸತ್ತಿಗೆ ನಾನಿರಲಿ ನನ್ನ ಚಪ್ಪಲಿಯೂ ಹೋಗಲಾರದು.  ಕನ್ಯಾಡಿ ಸ್ವಾಮೀಜಿಯವರು ನಾರಾಯಣ ಗುರುಜಯಂತಿ ಕಾರ್ಯಕ್ರಮದಲ್ಲಿ ಆಡಿದ ಮಾತನ್ನು ಕೇಳಿದರೆ ಇದು ನಾರಾಯಣ ಗುರುಜಯಂತಿಯೋ ಅಧವಾ ಶಂಕರಜಯಂತಿಯೋ ಎಂಬ ಅನುಮಾನ ಮೂಡುವಂತಾಯಿತು. ಕನ್ಯಾಡಿಯಲ್ಲಿ ಹಿಂದಿನ ಸ್ವಾಮೀಜಿಯವರು ಮಠ ಕಟ್ಟಿದಾಗ ಅವರ ವಿರುದ್ಧ ನಿಂತಿದ್ದವರೆಲ್ಲ ಈಗ ಅಲ್ಲಿ ಬಂದು ಮೆರೆಯುವಂತಾಗಿದೆ ಇದು ದುರಂತವಾಗಿದೆ.

- ದಿನೇಶ್ ಅಮೀನ್ ಮಟ್ಟು.

ಆರೆಸ್ಸೆಸ್, ವಿಶ್ವ ಹಿಂದೂ ಪರಿಷತ್ತಿಗೆ ಚುನಾವಣೆ ಬಂದಾಗ ಬೆಳ್ತಂಗಡಿಯಲ್ಲಿ ಸ್ಪರ್ಥಿಸಿದ್ದ ವಸಂತ ಬಂಗೇರರು ಹಿಂದೂ ಆಗಿ ಕಾಣಲಿಲ್ಲವೇ ? ಬಂಗೇರರ ವಿರುದ್ಧ ಸ್ಪರ್ಥಿಸಿದ್ದವರು ಯಾವ ಕಾರಣಕ್ಕೆ ಬಂಗೇರರಿಂಗಿತ ಶ್ರೇಷ್ಠ ಹಿಂದೂ ಆಗಿದ್ದರು ? ಕಳೆದ ಲೋಕಸಭಾ ಚುನಾವಣೆಯಲ್ಲಿ ಜನಾರ್ಧನ ಪೂಜಾರಿ ಮತ್ತು ನಳಿನ್ ಕುಮಾರ್ ನಡುವೆ ಸ್ಪರ್ಧೆಯಿತ್ತು, ಯಾವ ಮಾನದಂಡದಲ್ಲಿ ಹಿಂದೂಗಳೆಲ್ಲ ಒಂದು ಎನ್ನುವ ಈ ಸಂಘಟನೆಗಳು ನಳಿನ್ ಕುಮಾರ್ ಹಾಗೂ ಬಿಜೆಪಿ ಬೆಂಬಲಕ್ಕೆ ನಿಂತರು. ಇವರು ಮುಂದಿಡುತ್ತಿರುವುದು ಧರ್ಮದ ಹೆಸರಿನ ರಾಜಕೀಯ ಇದು ಧರ್ಮವಲ್ಲ
- ದಿನೇಶ್ ಅಮೀನ್ ಮಟ್ಟು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News