×
Ad

'ಮರಳಿನ ಸಮಸ್ಯೆ ವಿರುದ್ಧ ಪ್ರತಿಭಟನೆ ಮಾಡುವ ಸ್ಥಿತಿ ಬಂದಿದೆ'

Update: 2018-09-16 19:40 IST

ಉಡುಪಿ, ಸೆ.16: ಮರಳಿನ ಸಮಸ್ಯೆ ಬಗೆಹರಿಸುವಂತೆ ಈಗಾಗಲೇ ಮುಖ್ಯಮಂತ್ರಿ, ನಾನು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರೂ ಜಿಲ್ಲಾಧಿಕಾರಿಗಳು ಇನ್ನೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಇನ್ನು ಎಷ್ಟು ಕಾಲಾವಕಾಶ ಬೇಕು ಎಂದು ಕೊನೆಯದಾಗಿ ಜಿಲ್ಲಾಧಿಕಾರಿ ಜೊತೆ ಕೇಳುತ್ತೇನೆ. ಇದರ ವಿರುದ್ಧ ವಿರೋಧ ಪಕ್ಷದವರು ಮಾತ್ರವಲ್ಲ ನಾವೆಲ್ಲರು ಪ್ರತಿಭಟನೆ ಮಾಡುವ ಸ್ಥಿತಿ ಬಂದಿದೆ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಡಾ. ಜಯಮಾಲಾ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಉಡುಪಿ ಪ್ರವಾಸಿ ಮಂದಿರದಲ್ಲಿ ಇಂದು ತನ್ನನ್ನು ಭೇಟಿಯಾದ ರಾಜ್ಯ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಕೆ.ರಘುಪತಿ ಭಟ್ ಅವರೊಂದಿಗೆ ಮರಳು ಸಮಸ್ಯೆ ಕುರಿತು ಚರ್ಚಿಸಿದ ಬಳಿಕ ಮಾಧ್ಯಮದವರ ಪ್ರಶ್ನೆಗಳಿಗೆ ಅವರು ಉತ್ತರಿಸಿದರು.

ಮರಳು ಸಮಸ್ಯೆಯ ಬಗ್ಗೆ ಪಕ್ಷಾತೀತವಾಗಿ ಜನರ ಪರವಾಗಿ ಆಲೋಚನೆ ಮಾಡಬೇಕಾಗಿದೆ. ವಿರೋಧ ಪಕ್ಷದವರು ಮಾತ್ರವಲ್ಲ, ನಾವೆಲ್ಲರು ಸಾರ್ವ ಜನಿಕರ ಪರವಾಗಿ ನಿಲ್ಲುವ ಸ್ಥಿತಿ ಎದುರಾಗಿದೆ. ಆದುದರಿಂದ ಜಿಲ್ಲಾಡಳಿತ ಸರ್ವೆ ಮಾಡುವುದನ್ನು ಬಿಟ್ಟು ಕೂಡಲೇ ಆದೇಶ ಹೊರಡಿಸಿ ಮರಳುಗಾರಿಕೆಗೆ ಅವಕಾಶ ಕಲ್ಪಿಸಬೇಕು ಎಂದರು.

ಈ ವಿಚಾರದಲ್ಲಿ ಯಾಕೆ ವಿಳಂಬ ಮಾಡಲಾಗಿದೆ ಎಂದು ನಾನೂ ಕೂಡ ಜಿಲ್ಲಾಧಿಕಾರಿಗಳನ್ನು ಪ್ರಶ್ನೆ ಮಾಡುತ್ತಿದ್ದೇನೆ. ಆಳುವ ಪಕ್ಷದವರು, ವಿರೋಧ ಪಕ್ಷದವರು ಎಲ್ಲರೂ ಹೇಳಿ ಆಯಿತು. ಆದರೆ ಕ್ರಮ ತೆಗೆದುಕೊಳ್ಳಲು ಇಷ್ಟು ಸಮಯ ಯಾಕೆ ಬೇಕಾಯಿತು ಎಂದು ಗೊತ್ತಾಗುತ್ತಿಲ್ಲ ಎಂದು ಸಚಿವರು ಅಸಮಾಧಾನ ವ್ಯಕ್ತಪಡಿಸಿದರು.

ಕುಂದಾಪುರ ಎಸಿ ಸರ್ವೆ ಮಾಡುವ ಕುರಿತ ಪ್ರಶ್ನೆಗೆ ಪ್ರತ್ರಿಯಿಸಿದ ಸಚಿವರು, ಎಸಿಯವರು ಸರ್ವೆ ಮಾಡುವ ಕ್ರಮ ಸರಿಯಲ್ಲ. ಅದು ಯಾವ ಕಾನೂನಿನಲ್ಲಿ ಯೂ ಇಲ್ಲ. ಇಲ್ಲದೆ ಇರುವ ಕ್ರಮವನ್ನು ಇವರು ಹೊಸದಾಗಿ ರೂಪಿಸುತ್ತಿದ್ದಾರೆ. ಇವರ ಸರ್ವೆ ಮುಗಿಯುವ ವೇಳೆಗೆ ಮತ್ತೆ ಮಳೆಗಾಲ ಆರಂಭವಾಗುತ್ತದೆ. ಜಿಲ್ಲಾಡಳಿತ ಹೀಗೆ ಜನರ ಭಾವನೆ ಜೊತೆ ಆಟ ಆಡುವುದು ಬಿಟ್ಟು ಕೂಡಲೇ ಆದೇಶ ಹೊರಡಿಸಬೇಕು ಎಂದರು.

ಹೊರ ಜಿಲ್ಲೆಗಳಿಂದ ಬರುತ್ತಿರುವ ಮರಳಿನ ಕುರಿತ ಪ್ರಶ್ನೆಗೆ, ನಮ್ಮ ಜಿಲ್ಲೆಯಲ್ಲಿ ಎಷ್ಟು ಪ್ರಮಾಣದಲ್ಲಿ ಮರಳಿಗೆ ಬೇಡಿಕೆ ಇದೆ ಮತ್ತು ಇಲ್ಲಿ ಗರಿಷ್ಠ ಎಷ್ಟು ಮರಳು ತೆಗೆಯಬಹುದು ಎಂಬುದರ ಬಗ್ಗೆ ಲೆಕ್ಕಚಾರ ಮಾಡಬೇಕಾಗಿದೆ. ನಮಗೆ ಬೇಕಾಗುವಷ್ಟು ಮರಳನ್ನು ಇಲ್ಲಿಯೇ ಪಡೆದು ಕೊಂಡರೆ ಹೊರಗಡೆಯಿಂದ ಮರಳು ತರುವ ಅಗತ್ಯ ಇರುವುದಿಲ್ಲ. ಮರಳಿನ ಕೊರತೆ ಕಂಡು ಬಂದರೆ ಮಾತ್ರ ಹೊರಗಡೆಯಿಂದ ತರಿಸಿಕೊಳ್ಳಬಹುದು ಎಂದು ಅವರು ಹೇಳಿದರು.

ಅಹೋರಾತ್ರಿ ಪ್ರತಿಭಟನೆ: ಭಟ್ ಎಚ್ಚರಿಕೆ

ಜಿಲ್ಲಾಡಳಿತ ಮರಳು ದಿಬ್ಬಗಳನ್ನು ಗುರುತಿಸುವುದಕ್ಕೆ ಸರ್ವೆ ಮಾಡಲು ಎ.17ರಂದು ಎನ್‌ಐಟಿಕೆಗೆ ಪತ್ರ ಬರೆಯಬೇಕು. ಸೆ.19ರೊಳಗೆ ಎನ್‌ಐಟಿಕೆ ಯಿಂದ ಸರ್ವೆ ಆರಂಭವಾಗಬೇಕು. ಇಲ್ಲದಿದ್ದರೆ ಸೆ. 20ರ ಬೆಳಗ್ಗೆ 10ಗಂಟೆಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಜಿಲ್ಲೆಯ ಎಲ್ಲ ಶಾಸಕರು ಪಕ್ಷಾತೀತ ವಾಗಿ ಅಹೋರಾತ್ರಿ ಪ್ರತಿಭಟನೆ ನಡೆಸಲಾಗುವುದು ಎಂದು ಉಡುಪಿ ಶಾಸಕ ಕೆ.ರಘುಪತಿ ಭಟ್ ಎಚ್ಚರಿಕೆ ನೀಡಿದರು.

ಎನ್‌ಐಟಿಕೆಯಿಂದ ಸರ್ವೆ ನಡೆಸುವಂತೆ ಇತ್ತೀಚೆಗೆ ಜಿಲ್ಲೆಗೆ ಭೇಟಿ ನೀಡಿದ ಮುಖ್ಯಮಂತ್ರಿಗಳು ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಿದ್ದರು. ಈ ಆದೇಶ ಹೊರಡಿಸಿ 10 ದಿವಸ ಕಳೆದರೂ ಜಿಲ್ಲಾಧಿಕಾರಿ ಯಾವುದೇ ಕ್ರಮ ತೆಗೆದು ಕೊಂಡಿಲ್ಲ. ಈ ಮಧ್ಯೆ ಜಿಲ್ಲಾಧಿಕಾರಿ ಎಸಿಯಿಂದ ಸರ್ವೆ ಮಾಡಲು ಆದೇಶ ನೀಡಿದ್ದಾರೆ. ಇದೆಲ್ಲ ಮರಳು ಸಿಗದಂತೆ ಉದ್ದೇಶಪೂರ್ವಕವಾಗಿ ಮಾಡಲಾಗುತ್ತಿದೆ ಎಂದು ಅವರು ಆರೋಪಿಸಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News