ಮಂಗಳೂರು: ಕೆಥೆಡ್ರಲ್‌ನಲ್ಲಿ ನೂತನ ಧರ್ಮಾಧ್ಯಕ್ಷರ ಪ್ರಥಮ ಬಲಿಪೂಜೆ

Update: 2018-09-16 14:19 GMT

ಮಂಗಳೂರು, ಸೆ.16: ಮಂಗಳೂರು ಧರ್ಮಪ್ರಾಂತದ ನೂತನ ಧರ್ಮಾಧ್ಯಕ್ಷರಾಗಿ ನೇಮಕಗೊಂಡ ನಂತರ ಅತೀ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ಡಾನ ರವಿವಾರ ನಗರದ ತಮ್ಮ ಅಧಿಕೃತ ರೊಸಾರಿಯೋ ಕೆಥೆಡ್ರಲ್ ಪೀಠದಲ್ಲಿ ಮೊದಲ ಬಲಿಪೂಜೆ ಅರ್ಪಿಸಿದರು.

ಬಲಿಪೂಜೆಯ ಬಳಿಕ ತನ್ನನ್ನು ಸನ್ಮಾನಿಸಿದ ಜನಸ್ತೋಮವನ್ನು ಉದ್ದೇಶಿಸಿ ಮಾತನಾಡಿದ ಅತೀ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ಡಾನ, ಯಾವಾಗ ತಾನು ಜನರ ಜೊತೆಗೆ ನಡೆಯುವೆನೋ ಆಗ ಮಾತ್ರ ತನ್ನ ಬಟ್ಟೆ, ದಂಡ, ಕಿರೀಟ ಮತ್ತು ಪೋಷಾಕಿಗೆ ಗೌರವ ಇರುತ್ತದೆ. ನಾನೊಬ್ಬನೇ ಈ ಬಟ್ಟೆ ಬರೆಯೊಂದಿಗೆ ಹೋದಲ್ಲಿ ಇದೊಂದು ವೇಷವೆಂದು ಜನರು ಪರಿಗಣಿಸುವರು. ಗೌರವವಿರುವುದು ನಾನು ಹಾಕಿರುವ ಬಟ್ಟೆ ದಂಡ ಅಥವಾ ಕಿರೀಟಕ್ಕಲ್ಲ; ಎಲ್ಲ ಜನರೊಂದಿಗೆ ಬೆರೆತು ಜೀವಿಸಿದಾಗ ಮಾತ್ರ ಗೌರವ ಸಿಗುತ್ತದೆ ಎಂದರು.

ಶನಿವಾರ ನಡೆದ ನನ್ನ ದೀಕ್ಷಾ ಕಾರ್ಯಕ್ರಮಕ್ಕೆ ಹಲವಾರು ಮುಖಂಡರು ಮತ್ತು ಸಹಸ್ರಾರು ಜನರು ನೆರೆದಿದ್ದರು. ಇದು ಒಗ್ಗಟ್ಟಿನ ಸಂಕೇತವಾಗಿದೆ. ಈ ಏಕತೆ ಇನ್ನೂ ಮುಂದುವರಿದು ಹೆಚ್ಚಾಗಿ ಹೋಗಬೇಕಾಗಿದೆ. ಈ ಧರ್ಮಪ್ರಾಂತ್ಯದ ಶಾಶ್ವತ ಮುಖಂಡರು ಏಸುಕ್ರಿಸ್ತರು. ನಾನು ಕೆಲ ಸಮಯಕ್ಕೆ ಅದೃಷ್ಯ ದೇವರನ್ನು ಸದೃಷ್ಯನಾಗಿ ತೋರಿಸಿಕೊಡುವ ಜವಾಬ್ದಾರಿಯನ್ನು ಹೊಂದಿದ್ದೇನೆ. ನಾವೆಲ್ಲರೂ ಒಟ್ಟಿಗೆ ಸೇರಿ ಉತ್ತಮ ಸಮಾಜವನ್ನು ನಿರ್ಮಿಸಬೇಕೆಂದು ಕರೆಕೊಟ್ಟರು.

ವಂ.ಜೆ.ಬಿ. ಕ್ರಾಸ್ತಾ ಮಾತನಾಡಿ, ಅತೀ ಶ್ರೀಮಂತಿಕೆ ಎಂದರೆ ಅದು ಜ್ಞಾನ. ಬಲಿಷ್ಠ ಆಯುಧವೆಂದರೆ ತಾಳ್ಮೆ, ಗರಿಷ್ಠ ಸುರಕ್ಷತೆ ಎಂದರೆ ದೇವರಲ್ಲಿರುವ ನಂಬಿಕೆ. ಪರಿಣಾಮಕಾರಿ ಮದ್ದು ಎಂದರೆ ನಗು, ಶ್ರೇಷ್ಠ ಉಪದೇಶ ಎಂದರೆ ಪ್ರೀತಿ. ಈ ಎಲ್ಲ ಗುಣಗಳನ್ನು ಹೊಂದಿರುವಂತಹ ನೂತನ ಬಿಶಪ್ ಅವರನ್ನು ಅಭಿನಂದಿಸಿ ಅವರ ನೇತೃತ್ವದಲ್ಲಿ ಮಂಗಳೂರು ಧರ್ಮಪ್ರಾಂತವು ಅಂತರರಾಷ್ಟ್ರೀಯ ಮಟ್ಟದಲ್ಲಿ ಮುಂಚೂಣಿಯ ಮಟ್ಟಕ್ಕೇರಲಿ ಎಂದು ನೂತನ ಬಿಶಪ್ ಅವರನ್ನು ಅಭಿನಂದಿಸಿ, ಶುಭಹಾರೈಸಿದರು.

ಪೋಪರ ಪ್ರತಿನಿಧಿಯಗಿ ನೂತನ ಧರ್ಮಾಧ್ಯಕ್ಷರ ದೀಕ್ಷೆಗೆ ಆಗಮಿಸಿದ ಮೊನ್ಸಿಂಜೋರ್ ಕ್ಸೇವಿಯರ್ ಡಿ.ಫೆರ್ನಾಂಡಿಸ್ ಸಭೆಯನ್ನುದ್ದೇಶಿಸಿ ಮಾತನಾಡಿ, ನುನ್ಶಿಯೋ ಅವರ ಆಶೀರ್ವಾದಗಳನ್ನು ನೂತನ ಬಿಷಪರಿಗೆ ಕೋರಿದರು.

ಕಾರ್ಯಕ್ರಮದಲ್ಲಿ ವಂದನೀಯ ಮೊನ್ಸಿಂಜೋರ್ ಡೆನಿಸ್ ಮೊರಸ್ ಪ್ರಭು, ಅಲೋಶಿಯಸ್ ಕಾಲೇಜಿನ ರೆಕ್ಟರ್ ವಂ.ಡಯನೇಶಿಯಸ್, ಧರ್ಮಪ್ರಾಂತದ ಸಾರ್ವಜನಿಕ ಸಂಪರ್ಕ ಅಧಿಕಾರಿ ವಿಜಯ್ ವಿಕ್ಟರ್ ಲೋಬೊ, ಕಾಥೆದ್ರಾಲ್ ನ ಗುರು ವಂ.ರೋಕಿ ಫೆರ್ನಾಂಡಿಸ್, ವಂ.ವಿಕ್ಟರ್ ಡಿಸೋಜ, ವಂ.ಫ್ಲೇವಿಯನ್ ಲೋಬೊ, ವಂ.ಅನಿಲ್ ಫೆರ್ನಾಂಡಿಸ್, ರೆಕ್ಟರ್ ಗ್ಲ್ಯಾಡ್‌ಸಮ್ ಮತ್ತಿತರರು ಉಪಸ್ಥಿತರಿದ್ದರು.

ವಂ.ಜೆ.ಬಿ. ಕ್ರಾಸ್ತಾ ಬಿಷಪ್ ಅವರನ್ನು ಸ್ವಾಗತಿಸಿದರು. ಚರ್ಚಿನ ಉಪಾಧ್ಯಕ್ಷ ಸಿ.ಜೆ. ಸೈಮನ್ ವಂದಿಸಿದರು. ಕಾರ್ಯದರ್ಶಿ ಎಲಿಜಬೆತ್ ರೋಚ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News