ಮೂಡುಬಿದಿರೆ ಜಮೀಯ್ಯತ್ತುಲ್ ಫಲಾಹ್: ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ, ಸನ್ಮಾನ

Update: 2018-09-16 14:34 GMT

ಮೂಡುಬಿದಿರೆ, ಸೆ. 16: ಜಮೀಯ್ಯತ್ತುಲ್ ಫಲಾಹ್ ಮೂಡುಬಿದಿರೆ ಘಟಕದ ವತಿಯಿಂದ ಮುಸ್ಲಿಂ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ಪ್ರೋತ್ಸಾಹಧನ ಹಾಗೂ ಸನ್ಮಾನ ಸಮಾರಂಭವು ಮೂಡುಬಿದಿರೆಯ ಎಂ.ಸಿ.ಎಸ್ ಬ್ಯಾಂಕ್‍ನ ಸಭಾಂಗಣದಲ್ಲಿ ಶನಿವಾರ ನಡೆಯಿತು.

ಮೂಡುಬಿದಿರೆ ತಹಶೀಲ್ದಾರ್ ರಶ್ಮಿ ಎಸ್.ಆರ್ ಮುಖ್ಯ ಅತಿಥಿಯಾಗಿ ಭಾಗವಹಿಸಿ 56 ವಿದ್ಯಾರ್ಥಿಗಳಿಗೆ ತಲಾ 2 ಸಾವಿರದಂತೆ 1.12 ಲಕ್ಷ ರೂ ಪ್ರೋತ್ಸಾಹಧನವನ್ನು ವಿತರಿಸಿ ಮತ್ತು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 604 ಅಂಕಗಳನ್ನು ಗಳಿಸಿ ಜಿಲ್ಲೆಯಲ್ಲಿ 2ನೇ ಸ್ಥಾನವನ್ನು ಗಳಿಸಿರುವ ರಿಫಾ ಜೈನಾಬ್ ಅವರನ್ನು ಸನ್ಮಾನಿಸಿ ಮಾತನಾಡಿ ಪ್ರತಿಯೊಬ್ಬ ವ್ಯಕ್ತಿಗೂ ಶಿಕ್ಷಣ ಅತೀ ಮುಖ್ಯ, ವಿದ್ಯಾರ್ಥಿಗಳು ಶಿಕ್ಷಣವನ್ನು ಪಡೆದು ಮುಂದೆ ಏನು ಆಗಬೇಕೆಂಬುದರ ಬಗ್ಗೆ ಅರಿವು ನಿಮ್ಮಲ್ಲಿರಬೇಕು ಹೊರತು ಯಾರದೋ ಆಯ್ಕೆಯ ಶಿಕ್ಷಣ ನಿಮ್ಮದಾಗಬಾರದು ಎಂದು ಸಲಹೆ ನೀಡಿದರು.

ಜೈನ್ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಮುನಿರಾಜ ರೆಂಜಾಳ ಅವರು "ಶಿಕ್ಷಣದಲ್ಲಿ ಸಂಘ ಸಂಸ್ಥೆಗಳ ಪಾತ್ರ" ಎಂಬ ವಿಷಯದ ಕುರಿತು ಮಾತನಾಡಿದರು.  

ಮೂಡುಬಿದಿರೆ ಬದ್ರಿಯಾ ಜುಮ್ಮಾ ಮಸೀದಿಯ ಧರ್ಮಗುರು ಮುಸ್ತಫಾ ಯಮಾನಿ ದುವಾ ನೆರವೇರಿಸಿದರು.  ಜಮೀಯ್ಯತ್ತುಲ್ ಫಲಾಹ್ ಅವಿಭಜಿತ ದ.ಕ ಜಿಲ್ಲೆಯ ಅಧ್ಯಕ್ಷ ಶಾಹುಲ್ ಹಮೀದ್ ಕೆ.ಕೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಶಿವಾನಂದ ಕಾಯ್ಕಿಣಿ, ಮೂಡುಬಿದಿರೆ ಪತ್ರಕರ್ತರ ಸಂಘದ ಕಾರ್ಯದರ್ಶಿ ಪ್ರೇಮಶ್ರೀ ಕಲ್ಲಬೆಟ್ಟು, ಜಿಲ್ಲಾ ಘಟಕದ ಮಹಮ್ಮದ್ ರಫೀಕ್, ಕಾರ್ಕಳ ಘಟಕದ ಕಾರ್ಯದರ್ಶಿ ಸುಲೈಮಾನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.    

ಸಿ.ಎಚ್ ಗಫೂರ್ ಸ್ವಾಗತಿಸಿದರು. ಜಮೀಯ್ಯತ್ತುಲ್ ಫಲಾಹ್ ಮೂಡುಬಿದಿರೆ ಘಟಕದ ಅಧ್ಯಕ್ಷ ಸಲೀಂ ಹಂಡೇಲು ಕಾರ್ಯಕ್ರಮ ನಿರೂಪಿಸಿದರು. ಮಹಮ್ಮದ್ ಶರೀಫ್ ವಂದಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News