ಕುಂದಾಪುರ: ಮಾದಕ ವ್ಯಸನ ವಿರುದ್ಧ ಜಾಗೃತಿಗಾಗಿ ಸೈಕಲ್ ಜಾಥಾ

Update: 2018-09-16 14:40 GMT

ಕುಂದಾಪುರ, ಸೆ.16: ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ, ಜಿಲ್ಲಾ ಹಾಗೂ ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಮಾದಕ ದ್ರವ್ಯ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ಸೆ ನೋ ಟು ಡ್ರಗ್ಸ್ ಅಭಿಯಾನದ ಪ್ರಯುಕ್ತ ಸೈಕಲ್ ಜಾಥಾವನ್ನು ರವಿವಾರ ಕುಂದಾಪುರ ದಲ್ಲಿ ಆಯೋಜಿಸಲಾಗಿತ್ತು.

ಕುಂದಾಪುರ ಬೋರ್ಡ್ ಹೈಸ್ಕೂಲಿನ ಮೈದಾನದಲ್ಲಿ ಜಾಥಕ್ಕೆ ಚಾಲನೆ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ಬ.ನಿಂಬರಗಿ ಮಾತನಾಡಿ, ಯುವಕರೇ ಹೆಚ್ಚಾಗಿರುವ ನಮ್ಮ ದೇಶದಲ್ಲಿ ಇಂದು ಮಾದಕ ದ್ರವ್ಯ ಮಾರಕವಾಗಿ ಪರಿಣಸಿದೆ. ಇದಕ್ಕೆ ಯುವಕರೆ ಹೆಚ್ಚು ಬಲಿಯಾಗುತ್ತಿರುವುದು ದುರಂತ. ಕೇವಲ ಪೊಲೀಸ್ ಇಲಾಖೆ ಹಾಗೂ ಕಾನೂನಿನಿಂದ ಇದನ್ನು ತಡೆಗಟ್ಟಲು ಸಾಧ್ಯವಿಲ್ಲ ಎಂದು ಹೇಳಿದರು.

ದೇಶದ ಪ್ರಗತಿ ಯುವಶಕ್ತಿಯ ಮೇಲೆ ಅವಲಂಬಿತವಾಗಿದೆ. ಆದರೆ ಮಾದಕ ದ್ರವ್ಯ ಕಣ್ಣಿಗೆ ಕಾಣದೆ ಯುವಜನತೆಯ ಮೇಲೆ ದಾಳಿ ಮಾಡುತ್ತಿದೆ. ಮಾದಕ ವ್ಯಸನಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಬಹಳ ಅಗತ್ಯವಾಗಿದೆ ಎಂದು ಅವರು ತಿಳಿಸಿದರು.

 ಕುಂದಾಪುರ ಉಪವಿಭಾಗದ ಸಹಾಯಕ ಆಯುಕ್ತ ಟಿ.ಭೂಬಾಲನ್, ಜೆಡಿಯು ಜಿಲ್ಲಾಧ್ಯಕ್ಷ ರಾಜೀವ್ ಕೋಟ್ಯಾನ್, ತಹಸೀಲ್ದಾರ್ ತಿಪ್ಪೇಸ್ವಾಮಿ, ಡಿವೈಎಸ್‌ಪಿ ಬಿ.ಪಿ.ದಿನೇಶ್ ಕುಮಾರ್, ವೃತ್ತ ನಿರೀಕ್ಷಕರಾದ ಮಂಜಪ್ಪ, ಪರಮೇಶ್ವರ ಗುನಗಾ, ಉಪನಿರೀಕ್ಷಕರಾದ ಕುಂದಾಪುರದ ಹರೀಶ್ ಆರ್., ಗ್ರಾಮಾಂತರ ಠಾಣೆಯ ಶ್ರೀಧರ ನಾಯ್ಕ್ಕಾ, ಬೈಂದೂರಿನ ತಿಮ್ಮೇಶ್ ಬಿ.ಎನ್., ಗಂಗೊಳ್ಳಿಯ ವಾಸಪ್ಪನಾಯ್ಕಿ ಮೊದಲಾದವರು ಉಪಸ್ಥಿತರಿದ್ದರು.

ಬಳಿಕ ಕುಂದಾಪುರ ತಾಪಂ ಎದುರಿನಿಂದ ಆರಂಭಗೊಂಡ ಸೈಕಲ್ ಜಾಥವು ಕುಂದಾಪುರ ಚರ್ಚ್ ರಸ್ತೆ, ಎಂ.ಕೋಡಿ, ಕೋಡಿ ಹಳೆ ಅಳಿವೆ, ಕೋಟೇಶ್ವರ ದೇವಸ್ಥಾನ ರಸ್ತೆ ಮೂಲಕವಾಗಿ ಹೆದ್ದಾರಿಗೆ ಬಂದು ಕುಂದಾಪುರ ಬೋರ್ಡ್ ಹೈಸ್ಕೂಲ್‌ವರೆಗೆ ಸುಮಾರು 25 ಕಿ.ಮೀ. ದೂರ ಸಾಗಿ ಬಂತು. ಇದರಲ್ಲಿ ನೂರಾರು ಮಂದಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News