ಬೆಳಪುವಿನಲ್ಲಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿಗೆ ಶಿಲಾನ್ಯಾಸ

Update: 2018-09-16 14:43 GMT

ಪಡುಬಿದ್ರೆ, ಸೆ. 16:  ರಾಜ್ಯದಲ್ಲಿ ಎಲ್ಲಾ ಕಡೆಯೂ ಕೂಡ ಪ್ರತಿಯೊಬ್ಬರಿಗೂ ಉದ್ಯೋಗ ನಿರ್ಮಾಣವಾಗಬೇಕಿದೆ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಡಾ. ಜಯಮಾಲಾ ಹೇಳಿದರು.

ಸುಮಾರು 8 ಕೋಟಿ ರೂಪಾಯಿ ವೆಚ್ಚದಲ್ಲಿ ಬೆಳಪು ಗ್ರಾಮದಲ್ಲಿ 5.35 ಎಕರೆ ಜಮೀನಿನಲ್ಲಿ ಕಾಲೇಜು ನಿರ್ಮಾಣಗೊಳ್ಳಲಿರುವ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಕಟ್ಟಡಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಉದ್ಯೋಗ ನೀಡುವುದರೊಂದಿಗೆ ಘನತೆಯಿಂದ ಬಾಳಲು ಸೂರು ಕಲ್ಪಿಸಬೇಕಿದೆ. ಶೈಕ್ಷಣಿಕ ಬೆಳವಣಿಗೆಗೆ ಶಾಲಾ ಕಾಲೇಜು ಮತ್ತು ಉನ್ನತ ಶಿಕ್ಷಣದ ವ್ಯವಸ್ಥೆ ಕಲ್ಪಿಸುವುದು ನಮ್ಮ ಆದ್ಯ ಕರ್ತವ್ಯವಾಗಬೇಕಿದೆ ಎಂದರು. 

ಕೋಟ್ಯಾಂತರ ಮಕ್ಕಳು ಶಿಕ್ಷಣ ಪಡೆದು ಉತ್ತೀರ್ಣರಾಗಿ ಹೊರ ಬಂದಾಗ ಅವರ ಮುಂದಿರುವುದು ಉದ್ಯೋಗದ್ದೇ ಸಮಸ್ಯೆ. ಒಂದು ಉದ್ಯೋಗ ನೀಡಿದಲ್ಲಿ, ರಸ್ತೆ ಮಾಡದಿದ್ದರೂ ಬೇಜಾರಿಲ್ಲ. ಒಂದು ಮನೆ ನೆಮ್ಮದಿಯಾಗಿ ಊಟ ಮಾಡಲು ಆರಂಭಿಸುತ್ತದೆ ಎಂದರು. 

ಅದಾನಿ-ಯುಪಿಸಿಎಲ್ ಸಿಎಸ್‍ಆರ್ ನಿಧಿಯ ಮೂಲಕ ಸುತ್ತಲಿನ ಗ್ರಾಮದ ಅಭಿವೃದ್ಧಿಗೆ ಮೆಚ್ಚುಗೆ ವ್ಯಕ್ತಪಡಿಸಿದ ಸಚಿವೆ ಜಯಮಾಲಾ ಅವರು, ಯಾವುದೇ ಅಭಿವೃದ್ಧಿ ಕೆಲಸ ಮಾಡಿ. ಕಂಪೆನಿಯಲ್ಲಿ ಸ್ಥಳೀಯರಿಗೆ ಹೆಚ್ಚಿನ ಉದ್ಯೋಗವನ್ನು ನೀಡಿ. ಸ್ಥಳೀಯರು ಬದುಕಿದರೆ ನಾವೆಲ್ಲರೂ ಬದುಕಿದ ಹಾಗೆ. ಮೊದಲ ಆದ್ಯತೆ ಸ್ಥಳೀಯರಿಗೆ ನೀಡಿ, ನೀವು ಬೆಳೆಯಿರಿ, ಕಂಪೆನಿ ಬೆಳೆಯಲಿ. ನಿಮ್ಮೊಂದಿಗೆ ಸರ್ಕಾರವೂ ಇರುತ್ತದೆ ಎಂದರು. 

ಅದಾನಿ-ಯುಪಿಸಿಎಲ್ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ, ಅತ್ಯುತ್ತಮ ಶಿಕ್ಷಕ ರಾಜ್ಯ ಪ್ರಶಸ್ತಿ ಪುರಸ್ಕೃತ ಪ್ರಕಾಶ್ ರಾವ್ ಪಿ., ಥ್ರೋಬಾಲ್ ಆಟಗಾರ್ತಿ ಬೆಳಪುವಿನ ಜ್ಯೋತಿ ನಾಯಕ್ ಅವರನ್ನು ಜಯಮಾಲಾ ಸನ್ಮಾನಿಸಿದರು. ಜ್ಯೋತಿ ಅವರಿಗೆ ಉದ್ಯೋಗಕ್ಕಾಗಿ ಶಿಪಾರಸ್ಸು ಮಾಡುವುದಾಗಿ ಸಚಿವರು ಭರವಸೆ ನೀಡಿದರು.

35 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಸಮೃದ್ಧಿ-ಸಡಗರ-ಚೈತನ್ಯ ವಾಣಿಜ್ಯ ಸಂಕೀರ್ಣಗಳ ಉದ್ಘಾಟನೆ, ಬಸ್ ತಂಗುದಾಣ, ಬೆಳಪು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಹೆಚ್ಚುವರಿ ಕೊಠಡಿ, ಚಿಣ್ಣರ ಅಂಗಳ ಅಂಗನವಾಡಿಯನ್ನು ಉದ್ಘಾಟಿಸಲಾಯಿತು. ನವೋದಯ ಸ್ವಸಹಾಯ ಸಂಘದ ಸದಸ್ಯರಿಗೆ ಚೈತನ್ಯ ವಿಮಾ ಕಾರ್ಡ್, ವಿಮಾ ಚೆಕ್ ಮತ್ತು ಸಮವಸ್ತ್ರ ವಿತರಣೆ, ಸರ್ಕಾರದ ವಿವಿಧ ಸವಲತ್ತುಗಳ ವಿತರಣೆ ಮಾಡಲಾಯಿತು.

ಶಾಸಕ ಲಾಲಾಜಿ ಆರ್ ಮೆಂಡನ್ ಅಧ್ಯಕ್ಷತೆ ವಹಿಸಿದ್ದರು. ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ್ ಪೂಜಾರಿ, ಸದಸ್ಯ ಐವಾನ್ ಡಿಸೋಜ, ಮಾಜಿ ಸಚಿವ ವಿನಯಕುಮಾರ್ ಸೊರಕೆ, ಕರ್ನಾಟಕ ಸಹಕಾರಿ ಮಾರಾಟ ಮಹಾಮಂಡಳದ ಅಧ್ಯಕ್ಷ ಎಂ.ಎನ್.ರಾಜೇಂದ್ರಕುಮಾರ್, ಜಿಪಂ ಸದಸ್ಯೆ ಶಿಲ್ಪಾ ಜಿ ಸುವರ್ಣ, ತಾಪಂ ಸದಸ್ಯ ಯು.ಸಿ. ಶೇಖಬ್ಬ, ಕಾಪು ಪುರಸಭೆ ಅಧ್ಯಕ್ಷೆ ಮಾಲಿನಿ, ಗ್ರಾಪಂ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ಉಪಾಧ್ಯಕ್ಷೆ ಶೋಭಾ ಭಟ್, ತಹಶೀಲ್ದಾರ್ ಗುರುಸಿದ್ದಯ್ಯ ಹೀರೆಮಠ್, ತಾಪಂ ಕಾರ್ಯನಿರ್ವಹಣಾಧಿಕಾರಿ ಮೋಹನ್‍ರಾಜ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News