ದಾಭೋಲ್ಕರ್ ಕೊಲೆಗಾರ ಪಿಸ್ತೂಲುಗಳನ್ನು ಕೆರೆಗೆ ಎಸೆದಿದ್ದ: ಸಿಬಿಐ

Update: 2018-09-16 14:47 GMT

ಪುಣೆ, ಸೆ.16: ಪ್ರಗತಿಪರ ಚಿಂತಕ ನರೇಂದ್ರ ದಾಭೋಲ್ಕರ್ ಅವರನ್ನು ಹತ್ಯೆ ಮಾಡಿರುವ ಆರೋಪಿಗಳಲ್ಲಿ ಒಬ್ಬನಾಗಿರುವ ಶರದ್ ಕಲಸ್ಕರ್, ಹತ್ಯೆಯ ನಂತರ ಪಿಸ್ತೂಲುಗಳನ್ನು ಮುಂಬೈ ಸಮೀಪದ ಕೆರೆಗೆ ಎಸೆದಿರುವುದಾಗಿ ಸಿಬಿಐ ನ್ಯಾಯಾಲಯಕ್ಕೆ ತಿಳಿಸಿದೆ.

2013ರ ಆಗಸ್ಟ್ 20ರಂದು ದಾಭೋಲ್ಕರ್ ಅವರತ್ತ ಗುಂಡು ಹಾರಿಸಿದ ಇಬ್ಬರು ಆರೋಪಿಗಳ ಪೈಕಿ ಕಲಸ್ಕರ್ ಒಬ್ಬನಾಗಿದ್ದಾನೆ ಎಂದು ಸಿಬಿಐ ತಿಳಿಸಿದೆ. ಕಲಸ್ಕರ್ ಪಿಸ್ತೂಲುಗಳನ್ನು ಕೆರೆಗೆ ಎಸೆಯುವ ಸಂದರ್ಭದಲ್ಲಿ ಆತನ ಜೊತೆ, ಕಳೆದ ಆಗಸ್ಟ್‌ನಲ್ಲಿ ಶಸ್ತ್ರಾಸ್ತ್ರ ಸಂಗ್ರಹದೊಂದಿಗೆ ಮಹಾರಾಷ್ಟ್ರ ಭಯೋತ್ಪಾದನೆ ನಿಗ್ರಹ ಪಡೆಯಿಂದ ಬಂಧನಕ್ಕೊಳಗಾದ ವೈಭವ್ ರಾವತ್ ಕೂಡಾ ಇದ್ದ ಎಂದು ಸಿಬಿಐ ತಿಳಿಸಿದೆ. ಕಳೆದ ಆಗಸ್ಟ್‌ನಲ್ಲಿ ಮುಂಬೈಯ ನಾಲಾಸೋಪಾರ ಪ್ರದೇಶದಲ್ಲಿರುವ ಮನೆಯ ಮೇಲೆ ದಾಳಿ ನಡೆಸಿದ ಎಟಿಎಸ್ ಪಡೆ ಶಸ್ತ್ರಾಸ್ತ್ರಗಳ ಬೃಹತ್ ದಾಸ್ತಾನನ್ನು ವಶಪಡಿಸಿಕೊಂಡಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಟಿಎಸ್ ಅಧಿಕಾರಿಗಳು ವೈಭವ್ ರಾವತ್ ಮತ್ತು ಕಲಸ್ಕರ್‌ನನ್ನು ಬಂಧಿಸಿದ್ದರು.

ಜುಲೈ 23ರಂದು ಆರೋಪಿಗಳು ಪುಣೆಯಿಂದ ನಾಲಾಸೋಪಾರಕ್ಕೆ ತೆರಳುತ್ತಿದ್ದ ಸಂದರ್ಭ ತಮ್ಮ ಬಳಿಯಿದ್ದ ಆಯುಧಗಳನ್ನು ಸೇತುವೆಯಿಂದ ಕೆರೆಗೆ ಎಸೆದಿದ್ದರು. ಆದರೆ ಅವರು ಯಾವ ಸೇತುವೆಯಿಂದ ಆಯುಧಗಳನ್ನು ಎಸೆದಿದ್ದಾರೆ ಎಂಬುದನ್ನು ತನಿಖಾ ತಂಡ ಇನ್ನಷ್ಟೇ ದೃಢಪಡಿಸಿಕೊಳ್ಳಬೇಕಿದೆ ಎಂದು ಸಿಬಿಐ ಪರ ವಕೀಲ ವಿಜಯ್‌ಕುಮಾರ್ ದಕಾನೆ ತಿಳಿಸಿದ್ದಾರೆ. ಆರೋಪಿಯು ರಾತ್ರಿ ವೇಳೆ ಪ್ರಯಾಣಿಸುತ್ತಿದ್ದ ಕಾರಣ ಆತ ಯಾವ ಸೇತುವೆಯಿಂದ ಆಯುಧಗಳನ್ನು ಕೆಳಗೆಸೆದಿದ್ದಾರೆ ಎಂಬುದು ಆತನಿಗೆ ಸ್ಪಷ್ಟವಾಗಿ ತಿಳಿದಿಲ್ಲ ಎಂದು ದಕಾನೆ ತಿಳಿಸಿದ್ದಾರೆ.

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಅಮೋಲ್ ಕಾಳೆಯ ಬಂಧನವಾದ ಹಿನ್ನೆಲೆಯಲ್ಲಿ ಭಯಗೊಂಡ ಆರೋಪಿ ತನ್ನ ಬಳಿಯಿದ್ದ ಪಿಸ್ತೂಲುಗಳನ್ನು ಎಸೆಯಲು ಮುಂದಾಗಿರಬಹುದು. ಆತ ಎಸೆದ ನಾಲ್ಕು ಪಿಸ್ತೂಲುಗಳ ಪೈಕಿ ಒಂದರಿಂದ ದಾಭೋಲ್ಕರ್ ಹತ್ಯೆ ನಡೆದಿರುವ ಸಾಧ್ಯತೆಯಿದೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ. ದಾಭೋಲ್ಕರ್, ಓಂಕಾರೇಶ್ವರ ಸೇತುವೆಯ ಮೇಲೆ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಒಬ್ಬ ದಾರಿಹೋಕ ಅವರಿಗೆ ಶುಭಾಶಯ ತಿಳಿಸಿದ್ದ. ಸೇತುವೆ ಮೇಲೆ ಸಾಗುತ್ತಿರುವುದು ದಾಭೋಲ್ಕರ್ ಅವರೇ ಎಂದು ಆ ವ್ಯಕ್ತಿಯ ಮೂಲಕ ಖಚಿತಪಡಿಸಿಕೊಂಡ ಕೊಲೆಗಾರರ ಪೈಕಿ ಮೊದಲು ಕಲಸ್ಕರ್ ದಾಭೋಲ್ಕರ್ ಮೇಲೆ ಗುಂಡು ಹಾರಿಸಿದ. ನಂತರ ಸಚಿನ್ ಅದುರೆ ಎಂಬಾತನೂ ದಾಬೋಲ್ಕರ್ ಮೇಲೆ ಗುಂಡು ಹಾರಿಸಿ ಸ್ಥಳದಿಂದ ಪರಾರಿಯಾಗಿದ್ದರು ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.

ದಾಭೋಲ್ಕರ್ ಅವರನ್ನು ನಿಲ್ಲಿಸಿ ಮಾತನಾಡಿಸಿದ ವ್ಯಕ್ತಿಯೂ ಕೊಲೆಗಾರರ ಜೊತೆ ಸೇರಿದ್ದನೇ ಅಥವಾ ಆತ ಸಾಮಾನ್ಯ ವ್ಯಕ್ತಿಯಾಗಿದ್ದಾನೆ ಎಂಬುದರ ಬಗ್ಗೆ ಇನ್ನಷ್ಟೇ ತನಿಖೆ ನಡೆಯಬೇಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News