ಕಾಪು ಕ್ಷೇತ್ರದಲ್ಲಾದ ಸೋಲಿನ ಬಗ್ಗೆ ಆತ್ಮಾವಲೋಕನ ನಡೆಸೋಣ : ಡಾ. ಜಯಮಾಲಾ

Update: 2018-09-16 14:50 GMT

ಕಾಪು (ಪಡುಬಿದ್ರೆ ), ಸೆ. 16: ರಾಜ್ಯ ಸರ್ಕಾರ ಸುಸ್ಥಿತರವಾಗಿದ್ದು, ಐದು ವರ್ಷ ಪೂರ್ತಿ ಈ ಆಡಳಿತದಲ್ಲಿ ಇರುತ್ತದೆ  ಎಂದು  ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಡಾ.ಜಯಮಾಲಾ ಹೇಳಿದರು.

ಕಾಪು ರಾಜೀವ ಭವನದಲ್ಲಿ ರವಿವಾರ ಜರಗಿದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದ ಅವರು, ಪಾರದರ್ಶಕ ಆಡಳಿತ, ಪಾರದರ್ಶಕ ವ್ಯವಸ್ಥೆಯ ಅನುಕರಣೆ ಮಾಡುವುದು ನಮ್ಮ ಸರ್ಕಾರದ ಮುಖ್ಯ ಉದ್ದೇಶವಾಗಿದೆ ಎಂದರು.

ಸಂಘರ್ಷಕ್ಕೆ ಆಸ್ಪದವಿಲ್ಲದೇ, ಪಕ್ಷ ಸಂಘಟನೆಯ ಮೂಲಕ ಕಾಂಗ್ರೆಸ್‍ನ್ನು ಬೆಳೆಸುವುದರ ಅಗತ್ಯತೆಯಿದೆ. ಮನೆ ಮನೆಗೆ ಕಾಂಗ್ರೆಸ್ ಎಂಬ ವಿನೂತನ ಕಾರ್ಯಕ್ರಮದ ಮೂಲಕ ಸರಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವ ಪ್ರಯತ್ನ ಪಕ್ಷದ ಕಾರ್ಯಕರ್ತರ ಮೂಲಕ ನಡೆಯಬೇಕಿದ್ದು,  ಯುವ ಜನರನ್ನು ಕೇಂದ್ರೀಕರಿಸಿಕೊಂಡು ಪಕ್ಷ ಕಟ್ಟುವ ಕಾರ್ಯ ನಡೆಸಬೇಕಿದೆ. ಮುಂದಿನ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸುವುದಕ್ಕಾಗಿ ಪ್ರಯತ್ನಿಸಬೇಕು ಎಂದರು.

ಆತ್ಮಾವಲಕೋನ ನಡೆಯಬೇಕು: ಕಳೆದ ಐದು ವರ್ಷಗಳ ಕಾಲ ವಿನಯಕುಮಾರ್ ಸೊರಕೆಯವರು ಸರಕಾರದ ವಿವಿಧ ಮೂಲಗಳಿಂದ ಅನುದಾನದ ಮೂಲಕ ಅಭಿವೃದ್ಧಿಪಡಿಸಿದ್ದು ಮಾತ್ರವಲ್ಲದೆ ತಾಲೂಕು ಮತ್ತು ಪುರಸಭೆಯನ್ನಾಗಿ ಮೇಲ್ದರ್ಜೆಗೇರಿಸಿದರು. ಇಂತಹ ನಾಯಕನಿಗೆ ಸೋಲಾಗಿರುವುದು  ಮುಜುಗರದ ಸಂಗತಿ. ಈ ಸೋಲಿನ ಬಗ್ಗೆ ವಿಮರ್ಷೆ ಮತ್ತು ಪುನರ್ ಆತ್ಮಾವಲೋಕನ ನಡೆಯಬೇಕಿದೆ ಎಂದು ಜಯಮಾಲ ಹೇಳಿದರು. 

ಮಾಜಿ ಸಚಿವ ವಿನಯಕುಮಾರ್ ಸೊರಕೆ ಮಾತನಾಡಿ, ಡಾ. ಜಯಮಾಲಾ ಅವರು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ದೊರಕಿರುವುದು ನಮ್ಮೆಲ್ಲರ ಸೌಭಾಗ್ಯವಾಗಿದೆ. ಜಿಲ್ಲೆಯವರೇ ಆಗಿರುವುದರಿಂದ ಅವರ ಮೇಲೆ ನಿರೀಕ್ಷೆಗಳೂ ಹೆಚ್ಚಿವೆ. ಕಾಪು ಕ್ಷೇತ್ರದ ಅಭಿವೃದ್ದಿಗೂ ಜಯಮಾಲಾ ಅವರಿಂದ ಹೆಚ್ಚಿನ ಸಹಕಾರವನ್ನು ನೀರಿಕ್ಷಿಸುತ್ತೇವೆ ಎಂದರು. 

ಕೆಪಿಸಿಸಿ ಕಾರ್ಯದರ್ಶಿ ದೇವಿಪ್ರಸಾದ್ ಶೆಟ್ಟಿ, ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಮುರಳಿ ಶೆಟ್ಟಿ, ಉಸ್ತುವಾರಿ ಅಶೋಕ್ ಕುಮಾರ್ ಕೊಡವೂರು, ಜಿಲ್ಲಾ ಪಂಚಾಯಿತಿ ಸದಸ್ಯ ವಿಲ್ಸನ್ ರೋಡ್ರಿಗಸ್, ಪುರಸಭಾ ಅಧ್ಯಕ್ಷೆ ಮಾಲಿನಿ, ಉಪಾಧ್ಯಕ್ಷ ಕೆ.ಎಚ್. ಉಸ್ಮಾನ್, ಪಕ್ಷದ ಮುಖಂಡರಾದ ಕಾಪು ದಿವಾಕರ ಶೆಟ್ಟಿ, ವಿನಯ ಬಲ್ಲಾಳ್, ವೈ. ಸುಕುಮಾರ್, ಇಗ್ನೇಷಿಯಸ್ ಡಿ. ಸೋಜ, ಗೀತಾ ವಾಗ್ಲೆ, ಮೆಲ್ವಿನ್ ಡಿ. ಸೋಜ, ಗೋಪಾಲ್ ಕೋಟ್ಯಾನ್, ಶಿವಾಜಿ ಎಸ್. ಸುವರ್ಣ, ದಿನೇಶ್ ಕೋಟ್ಯಾನ್, ಯು. ಸಿ. ಶೇಖಬ್ಬ, ಪ್ರಭಾವತಿ ಕೋಟ್ಯಾನ್, ಎಚ್. ಅಬ್ದುಲ್ಲಾ, ಪ್ರಶಾಂತ್ ಜತ್ತನ್ನ, ಕಿಶೋರ್ ಕುಮಾರ್, ಅಬ್ದುಲ್ ರಹಿಮಾನ್ ಮೊದಲಾದವರು ಉಪಸ್ಥಿತರಿದ್ದರು.

ಅಧ್ಯಕ್ಷತೆ ವಹಿಸಿದ್ದ ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್ ಚಂದ್ರ ಜೆ. ಶೆಟ್ಟಿ ಸ್ವಾಗತಿಸಿದರು. ಯುವ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಅಬ್ದುಲ್ ಅಜೀಜ್ ವಂದಿಸಿದರು.

ರಫೆಲ್ ಡೀಲ್ ವಿರುದ್ಧ ಸೆ. 18ರಂದು ಪ್ರತಿಭಟನೆ

ಪ್ರಧಾನ ಮೋದಿ ಅವರ ಸಾಮ್ರಾಜ್ಯಕ್ಕೆ ಲಗ್ಗೆಯಿಟ್ಟು ಭಾರತ್ ಬಂದ್ ಆಚರಣೆ ಮಾಡಿದ್ದು, ಬಂದ್ ಗೆ ಸಹಕರಿಸಿದ ಜನತೆಗೆ ಜನನ ಕೃತಜ್ಞತೆಗಳು. ಆದರೆ ಇಷ್ಟಾದರೂ ಪೆಟ್ರೋಲಿಯಂ ಉತ್ಪನ್ನಗಳೂ ಸೇರಿದಂತೆ, ಅಗತ್ಯ ವಸ್ತುಗಳ ಬೆಲೆಯೇರಿಕೆಯನ್ನು ತಡೆಯುವಲ್ಲಿ ಕೇಂದ್ರ ಸರಕಾರ ಸಂಪೂರ್ಣ ವಿಫಲವಾಗಿದೆ ಎಂದರು. ರಫೇಲ್ ಡೀಲ್ ವಿರುದ್ಧ ಸೆ.18ರಂದು ಪ್ರತಿಭಟನೆ ನಡೆಯಲಿದ್ದು ಅಲ್ಲೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮಾಜಿ ಸಚಿವ ವಿನಯಕುಮಾರ್ ಸೊರಕೆ ವಿನಂತಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News