ಮಂಗಳೂರು: ‘ಸೇವಿಯರ್ ಆ್ಯಪ್’ ಬಗ್ಗೆ ಕಾರ್ಯಾಗಾರ

Update: 2018-09-16 15:06 GMT

ಮಂಗಳೂರು, ಸೆ.16: ನಗರದ ಕೆಎಂಸಿ ಆಸ್ಪತ್ರೆಯ ವೈದ್ಯ ಡಾ. ಮನೀಶ್ ರೈ ನೇತೃತ್ವದ ತಂಡವು ಕೋಡ್ ಕ್ರಾಫ್ಟ್ ಟೆಕ್ನಾಲಜೀಸ್ ಸ್ಥಾಪಕ ದೀಕ್ಷಿತ್ ರೈ ಸಹಕಾರದೊಂದಿಗೆ ಸಿದ್ಧಪಡಿಸಿದ ‘ಸೇವಿಯರ್’ ಆ್ಯಪ್ ಕುರಿತಂತೆ ಸಾರ್ವಜನಿಕರಿಗೆ ಮಾಹಿತಿ ಕಾರ್ಯಾಗಾರವು ರವಿವಾರ ನಗರದ ಪುರಭವನದಲ್ಲಿ ನಡೆಯಿತು.

ಕಾರ್ಯಾಗಾರಕ್ಕೆ ಚಾಲನೆ ನೀಡಿದ ಮಾತನಾಡಿದ ದ.ಕ.ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಕೃಷ್ಣ ರಾವ್ ರೋಗಿಗಳಿಗೆ ಸೂಕ್ತ ಸಮಯಕ್ಕೆ ಸೌಲಭ್ಯಗಳು ಸಿಗದೆ ಸಾವನ್ನಪುವ ಪ್ರಕರಣಗಳು ಹೆಚ್ಚುತ್ತಿವೆ. ತುರ್ತು ಸಂದರ್ಭ ಯಾರನ್ನು ಸಂಪರ್ಕಿಸುವುದು? ಯಾವ ಆಸ್ಪತ್ರೆಗೆ ಹೋಗಬೇಕು ಎನ್ನುವ ಗೊಂದಲ ಏರ್ಪಡುತ್ತದೆ. ‘ಸೇವಿಯರ್’ ಆ್ಯಪ್‌ನಲ್ಲಿ ಒಂದು ಬಟನ್ ಅದುಮುವ ಮೂಲಕ ಕ್ಷಣ ಆ್ಯಂಬುಲೆನ್ಸ್ ಪಡೆದು ಆಸ್ಪತ್ರೆಗಳಿಗೆ ತೆರಳಲು ಸಹಕಾರಿಯಾಗಲಿದೆ ಎಂದರು.

ಕೆಎಂಸಿ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ. ಪದ್ಮನಾಭ ಕಾಮತ್ ಮಾತನಾಡಿ, ಹಳ್ಳಿಯ ಆಸ್ಪತ್ರೆಗಳಲ್ಲಿ ಇಸಿಜಿ ಯಂತ್ರ ಲಭ್ಯವಿಲ್ಲದೆ ಲಕ್ಷಾಂತರ ಮಂದಿ ಹೃದ್ರೋಗಿಗಳ ಸಾವು ಸಂಭವಿಸುತ್ತಿದೆ. ಈ ನಿಟ್ಟಿನಲ್ಲಿ ಹೃದ್ರೋಗ ವೈದ್ಯರು ಮತ್ತು ದಾನಿಗಳ ಸಹಕಾರದೊಂದಿಗೆ ದ.ಕ. ಮತ್ತು ಉಡುಪಿ ಜಿಲ್ಲೆಯ ಹಳ್ಳಿಗಳ ಪ್ರಾಥಮಿಕ ಆಸ್ಪತ್ರೆಗಳಲ್ಲಿ ಇಸಿಜಿ ಯಂತ್ರವನ್ನು ನೀಡಲು ವಿಶೇಷ ಆದ್ಯತೆ ನೀಡಲಾಗುತ್ತಿದೆ. ಸೇವಿಯರ್ ಆ್ಯಪ್ ವ್ಯವಸ್ಥೆಯೂ ಇಸಿಜಿ ಸೇವೆಗೆ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.

ಡಾ. ಮನೀಶ್ ರೈ ಮಾತನಾಡಿ ‘ಆ್ಯಂಬುಲೆನ್ಸ್ ಹಾಗೂ ಆಸ್ಪತ್ರೆಗಳ ಜತೆಗೆ ಲಿಂಕ್ ಆಗಿರುವ ವ್ಯವಸ್ಥೆಯ ಆ್ಯಪ್ ಇದಾಗಿದೆ. ತಮ್ಮ ಮೊಬೈಲ್‌ನಲ್ಲಿ ಈ ಆ್ಯಪ್ ಡೌನ್‌ಲೋಡ್ ಮಾಡಿದ್ದರೆ, ತುರ್ತು ಸಂದರ್ಭ ಇದನ್ನು ಬಳಸಿ ‘ಮನವಿ’ ಬಟನ್ ಅದುಮಿದರೆ ಕೆಲವು ನಿಮಿಷದಲ್ಲಿ ಹತ್ತಿರದ ವ್ಯಾಪ್ತಿಯಲ್ಲಿರುವ ಆ್ಯಂಬುಲೆನ್ಸ್ ಸ್ಥಳಕ್ಕೆ ಧಾವಿಸುತ್ತದೆ. ನೆರವಿಗೆ ಸ್ವಯಂಸೇವಕರು ಬೇಕಿದ್ದರೆ ಅವರನ್ನೂ ಕರೆಯುವ ವ್ಯವಸ್ಥೆ ಇದೆ. ಆ್ಯಂಬುಲೆನ್ಸ್ ರಿಕ್ವೆಸ್ಟ್ ಬಟನ್ ಅದುಮಿದ ತಕ್ಷಣ ಹತ್ತಿರದಲ್ಲಿರುವ ಎಲ್ಲ ಆ್ಯಂಬುಲೆನ್ಸ್‌ಗಳ ಮೊಬೈಲ್‌ಗಳು ಬೀಪ್ ಆಗುತ್ತವೆ. ರಿಕ್ವೆಸ್ಟ್ ಬಂದ ಸ್ಥಳದ ಜಿಪಿಎಸ್ ವಿವರವೂ ಸಿಗುತ್ತದೆ. ರಿಕ್ವೆಸ್ಟ್‌ನ್ನು ಓಕೆ ಮಾಡಿದ ಕೂಡಲೇ ಆ್ಯಂಬುಲೆನ್ಸ್ ಚಾಲಕರ ಮೊಬೈಲ್ ಸಂಖ್ಯೆ ರಿಕ್ವೆಸ್ಟ್ ಕಳುಹಿಸಿದವರಿಗೆ ಸಿಗುತ್ತದೆ. ಎಷ್ಟು ಹೊತ್ತಿನಲ್ಲಿ ಅಂಬುಲೆನ್ಸ್ ಸ್ಥಳಕ್ಕೆ ಬರುತ್ತದೆ ಎಂಬುದು ಕೂಡ ಗೊತ್ತಾಗಲಿದೆ. ಆನ್‌ಲೈನ್ ಟ್ಯಾಕ್ಸಿ ಬುಕಿಂಗ್ ಯಾವ ರೀತಿಯಲ್ಲಿ ಕೆಲಸ ಮಾಡುತ್ತದೋ ಅದೇ ರೀತಿಯಲ್ಲಿ ಈ ಆ್ಯಪ್ ಕಾರ್ಯ ನಡೆಸಲಿದೆ. ಆದರೆ ಪ್ರಸ್ತುತ ಖಾಸಗಿ, ಸರಕಾರಿ ಸಹಿತ 12 ಆಸ್ಪತ್ರೆಗಳು ಮಾತ್ರ ಈ ಆ್ಯಪ್‌ನಲ್ಲಿ ಕೈಜೋಡಿಸಿದೆ. ಈ ಆಸ್ಪತ್ರೆಗಳಿಗೆ ಮಾತ್ರ ಆ್ಯಂಬುಲೆನ್ಸ್ ಸೇವೆ ದೊರೆಯಲಿದೆ. ಮುಂದೆ ಇನ್ನಷ್ಟು ಆಸ್ಪತ್ರೆಗಳನ್ನು ಇದರಲ್ಲಿ ಸೇರ್ಪಡೆಗೊಳಿಸಲಾಗುವುದು’ ಎಂದರು.

ಮುಖ್ಯ ಅತಿಥಿಗಳಾಗಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿ ಹಾಗೂ ನ್ಯಾಯಾಧೀಶದ ಮಲ್ಲನಗೌಡ, ಕೆಎಂಸಿ ಆಸ್ಪತ್ರೆಯ ಡಾ. ಜೀದು ರಾಧಾಕೃಷ್ಣನ್, ಡಾ. ಮೇಘನಾ ಮುಕುಂದ್ ಮತ್ತಿತರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News