ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ರಾಜಾ ವಿರುದ್ಧ ಪ್ರಕರಣ ದಾಖಲು

Update: 2018-09-16 16:15 GMT

ತಿರುಚ್ಚಿ, ಸೆ. 16: ಮದ್ರಾಸ್ ಉಚ್ಚ ನ್ಯಾಯಾಲಯದ ಆದೇಶ ಅನುಸರಿಸದೇ ಇರುವುದು ಹಾಗೂ ನ್ಯಾಯಾಲಯ, ಪೊಲೀಸ್ ಇಲಾಖೆಯ ವಿರುದ್ಧ ಮಾನ ಹಾನಿಕರ ಪದಗಳನ್ನು ಬಳಸಿರುವುದಕ್ಕೆ ಸಂಬಂಧಿಸಿ ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿ ಎಚ್. ರಾಜಾ ಹಾಗೂ ಇತರ ನಾಲ್ವರ ವಿರುದ್ಧ ತಮಿಳುನಾಡಿನ ತಿರುಮಾಯಮ್ ಪೊಲೀಸರು ರವಿವಾರ ಪ್ರಕರಣ ದಾಖಲಿಸಿದ್ದಾರೆ.

ರಾಜಾ ಹಾಗೂ ಇತರರನ್ನು ಬಂಧಿಸುವ ಬಗ್ಗೆ ಇನ್ನಷ್ಟೆ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರ ಎಚ್ಚರಿಕೆಯ ಹೊರತಾಗಿಯೂ ರಾಜಾ ಹಾಗೂ ಅವರ ಬೆಂಬಲಿಗರು ನಿಯಮಗಳನ್ನು ಉಲ್ಲಂಘಿಸಿದ್ದಾರೆ ಹಾಗೂ ಪುದುಕೋಟೈ ಜಿಲ್ಲೆಯ ಮೆಯ್ಯಾಪುರಂನಲ್ಲಿ ವಿನಯಾಗರ್ ಮೆರವಣಿಗೆ ನಡೆಸಿದ್ದಾರೆ. ಗ್ರಾಮದ ದೇವಾಲಯವೊಂದರ ಎದುರು ವೇದಿಕೆ ನಿರ್ಮಿಸಲು ಅನುಮತಿ ನೀಡದಿರುವುದಕ್ಕೆ ರಾಜಾ ಅವರು ಪೊಲೀಸರೊಂದಿಗೆ ವಾಗ್ವಾದಕ್ಕೆ ಇಳಿದಿದ್ದರು. ತಿರುಮಾಯಮ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಮನೋಹರನ್ ನಿರ್ದಿಷ್ಟ ಧರ್ಮದ ನಂಬಿಕೆಯ ಜನರ ಪರವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದರು. ಆ ಧರ್ಮದ ಜನರಿಂದ ತೆಗೆದುಕೊಳ್ಳುವ ಲಂಚಕ್ಕಿಂತ ಹೆಚ್ಚು ಲಂಚವನ್ನು ತಾನು ಪೊಲೀಸರಿಗೆ ನೀಡಲು ಸಿದ್ದವಿರುವುದಾಗಿ ರಾಜಾ ಹೇಳಿದ್ದರು.

ಗುಟ್ಕಾ ಹಗರಣಕ್ಕೆ ಸಂಬಂಧಿಸಿ ಡಿಜಿಪಿ ಅವರ ನಿವಾಸಕ್ಕೆ ಸಿಬಿಐ ದಾಳಿ ನಡೆಸಿದ ಬಳಿಕ ಸಮವಸ್ತ್ರ ಧರಿಸಲು ನಿಮಗೆ ನಾಚಿಕೆಯಾಗುವುದಿಲ್ಲವೇ ಎಂದು ರಾಜಾ ಪೊಲೀಸರನ್ನು ಪ್ರಶ್ನಿಸಿದ್ದರು. ವಿವಾದಾತ್ಮಕ ಸ್ಥಳದಲ್ಲಿ ವೇದಿಕೆ ನಿರ್ಮಿಸಲು ರಾಜಾ ಬಯಸಿದ್ದರಿಂದ ನಾವು ಅನುಮತಿ ನೀಡಿಲ್ಲ ಎಂದು ಇನ್ಸ್‌ಪೆಕ್ಟರ್ ಮನೋಹರನ್ ತಿಳಿಸಿದ್ದಾರೆ. ‘‘ಬಹುಸಂಖ್ಯಾತ ಗ್ರಾಮಸ್ಥರು ನಿರ್ದಿಷ್ಟ ಧರ್ಮವೊಂದಕ್ಕೆ ಸೇರಿದವರು. ದೇವಾಲಯದ ಎದುರು ಖಾಯಂ ವೇದಿಕೆ ನಿರ್ಮಿಸುವುದಕ್ಕೆ ಅವರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಪ್ರಕರಣ ಹೈಕೋರ್ಟ್‌ನಲ್ಲಿ ಇದೆ’’ ಎಂದು ಮನೋಹರನ್ ತಿಳಿಸಿದ್ದಾರೆ.

ಕಳೆದ ವಾರ ಗ್ರಾಮದ ಇನ್ನೊಂದು ಗುಂಪಿನವರು ನ್ಯಾಯಾಲಯದ ಮೆಟ್ಟಿಲೇರಿ ಗ್ರಾಮದಲ್ಲಿ ವಿನಯಾಗರ್ ಮೆರವಣಿಗೆಗೆ ಅನುಮತಿ ನೀಡುವಂತೆ ಕೋರಿದ್ದರು. ನ್ಯಾಯಾಲಯ ಅನುಮತಿ ನೀಡಿತ್ತು. ಮೆರವಣಿಗೆ ನಡೆಸುವ ದಾರಿಯ ಬಗ್ಗೆ ಪೊಲೀಸರು ನಿರ್ಧಾರ ತೆಗೆದುಕೊಳ್ಳಬೇಕು ಎಂದು ನ್ಯಾಯಾಲಯ ಹೇಳಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News