ಸಂಸದರ ನಿಧಿ ಬಳಕೆಗೆ ಕಾನೂನು ಚೌಕಟ್ಟು ರೂಪಿಸಲು ಸಿಐಸಿ ಶಿಫಾರಸು

Update: 2018-09-16 16:23 GMT

ಹೊಸದಿಲ್ಲಿ,ಸೆ.16: ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ನಿಧಿಯ ಬಳಕೆಯಲ್ಲಿ ಪಾರದರ್ಶಕತೆ,ಉತ್ತರದಾಯಿತ್ವ,ಸಂಸದರು ಮತ್ತು ಇತರ ಸಂಸ್ಥೆಗಳ ಹೊಣೆಗಾರಿಕೆಯನ್ನು ಖಚಿತಪಡಿಸಲು ಕಾನೂನು ಚೌಕಟ್ಟೊಂದನ್ನು ರೂಪಿಸುವಂತೆ ಕೇಂದ್ರೀಯ ಮಾಹಿತಿ ಆಯೋಗ(ಸಿಐಸಿ)ವು ಲೋಕಸಭಾಧ್ಯಕ್ಷರು ಮತ್ತು ರಾಜ್ಯಸಭೆಯ ಸಭಾಪತಿಗಳ ಕಚೇರಿಗಳಿಗೆ ಸೂಚಿಸಿದೆ.

ತಮ್ಮ ಕ್ಷೇತ್ರದಲ್ಲಿ ತಮ್ಮ ಆಯ್ಕೆಯ ಯೋಜನೆಗಳಿಗಾಗಿ ವ್ಯಯಿಸಲು ಪ್ರತಿ ಸಂಸದರಿಗೆ ವಾರ್ಷಿಕ ಐದು ಕೋಟಿ ರೂ.ಗಳನ್ನು ನೀಡಲಾಗುವ ಈ ಯೋಜನೆಯ ವಿವಿಧ ಮಗ್ಗಲುಗಳನ್ನು ಆಯೋಗವು 54 ಪುಟಗಳ ತನ್ನ ಸುದೀರ್ಘ ಆದೇಶದಲ್ಲಿ ಪ್ರಸ್ತಾಪಿಸಿದೆ.

 ಯೋಜನೆಯಡಿ 12,000 ಕೋ.ರೂ.ಬಳಕೆಯಾಗದೆ ಉಳಿದುಕೊಂಡಿದೆ ಎಂಬ ಅಂಕಿಅಂಶಗಳು ಮತ್ತು ಕಾರ್ಯಕ್ರಮ ಜಾರಿ ಸಚಿವಾಲಯದ ವರದಿಯನ್ನು ಗಣನೆಗೆ ತೆಗೆದುಕೊಂಡಿರುವ ಮಾಹಿತಿ ಆಯುಕ್ತ ಶ್ರೀಧರ ಆಚಾರ್ಯಲು ಅವರು,ನಿರ್ದಿಷ್ಟ ಕರ್ತವ್ಯಗಳು ಮತ್ತು ಕಡ್ಡಾಯ ಪಾರದರ್ಶಕತೆ ಬದ್ಧತೆಗಳು,ಕರ್ತವ್ಯ ಚ್ಯುತಿಯ ವ್ಯಾಖ್ಯೆಗಳು,ಶಿಫಾರಿತ ನಿಯಮಗಳು ಮತ್ತು ನಿಬಂಧನೆಗಳು,ಜೊತೆಗೆ ಕರ್ತವ್ಯಚ್ಯುತಿಗೆೆ ಮತ್ತು ನಿಯಮಗಳ ಉಲ್ಲಂಘನೆಗೆ ಹೊಣೆಗಾರಿಕೆಯನ್ನು ನಿಗದಿಗೊಳಿಸುವುದು ಸೇರಿದಂತೆ ನಿಧಿ ಬಳಕೆಗೆ ಸಂಬಂಧಿಸಿದಂತೆ ಕಾನೂನು ಚೌಕಟ್ಟನ್ನು ರೂಪಿಸುವಂತೆ ಉಭಯ ಸದನಗಳ ಮುಖ್ಯಸ್ಥರ ಕಚೇರಿಗಳಿಗೆ ಶಿಫಾರಸು ಮಾಡಿದ್ದಾರೆ.

ತಮ್ಮ ಸಂಸದರಿಂದ ನಿಧಿಯ ಬಳಕೆಯ ಕುರಿತು ಮಾಹಿತಿಗಳನ್ನು ಕೋರಿದ್ದ ಇಬ್ಬರು ಆರ್‌ಟಿಐ ಅರ್ಜಿದಾರರು ಅದು ಲಭಿಸದಿದ್ದ ಹಿನ್ನೆಲೆಯಲ್ಲಿ ಸಿಐಸಿಗೆ ಮೇಲ್ಮನವಿಗಳನ್ನು ಸಲ್ಲಿಸಿದ್ದು, ಪ್ರಕರಣದ ವಿಚಾರಣೆ ಸಂದರ್ಭ ಅದು ಈ ಶಿಫಾರಸುಗಳನ್ನು ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News