‘ಕ್ರೀಡೆಯಲ್ಲಿ ದೇಶದ ಗ್ರಾಮೀಣ ಪ್ರತಿಭೆಗಳು ಪ್ರಕಾಶಿಸುತ್ತಿವೆ’

Update: 2018-09-17 14:20 GMT

ಕಲ್ಯಾಣಪುರ, ಸೆ.17: ಇತ್ತೀಚಿನ ವರ್ಷಗಳಲ್ಲಿ ಭಾರತದ ಕ್ರೀಡಾಪಟುಗಳು ವಿವಿಧ ಕ್ರೀಡೆಗಳಲ್ಲಿ ಮಹತ್ವದ ಸಾಧನೆ ಮಾಡಿ ದೇಶದ ಧ್ವಜವನ್ನು ಉತ್ತುಂಗಕ್ಕೆ ಕೊಂಡೊಯ್ಯುತಿದ್ದಾರೆ. ಈ ಸಾಧನೆಯಲ್ಲಿ ಗ್ರಾಮೀಣ ಮತ್ತು ಹಳ್ಳಿಗಾಡಿನ ಕ್ರೀಡಾಪಟುಗಳ ಸಾಧನೆ ವಿಶೇಷವಾಗಿದೆ ಎಂದು ಉಡುಪಿ ಧರ್ಮ ಪ್ರಾಂತದ ಕೆಥೊಲಿಕ್ ಶಿಕ್ಷಣ ಮಂಡಳಿ ನಿರ್ದೇಶಕ ವಂ. ಡಾ.ಲಾರೆನ್ಸ್ ಡಿಸೋಜ ಹೇಳಿದ್ದಾರೆ.

ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬ್ರಹ್ಮಾವರ ಹಾಗು ಮೌಂಟ್ ರೋಜರಿ ಆಂಗ್ಲ ಮಾಧ್ಯಮ ಶಾಲೆ ಸಂತೆಕಟ್ಟೆ ಇವರ ಸಂಯುಕ್ತ ಆಶ್ರಯದಲ್ಲಿ ಕಲ್ಯಾಣಪುರದ ಮಿಲಾಗ್ರಿಸ್ ಕ್ರೀಡಾಂಗಣದಲ್ಲಿ ಇತ್ತೀಚೆಗೆ ನಡೆದ ಪೆರ್ಡೂರು ಹೋಬಳಿ ಮಟ್ಟದ ಪ್ರಾಥಮಿಕ ಶಾಲಾ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಇತ್ತೀಚೆಗೆ ನಡೆದ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತಕ್ಕೆ ದೊರೆತ 69 ಪದಕಗಳಲ್ಲಿ ಅತಿ ಹೆಚ್ಚಿನ ಪದಕಗಳನ್ನು ದೇಶದ ಮೂಲೆಮೂಲೆಗಳಿಂದ ಬಂದ ಹಳ್ಳಿಗಾಡಿನ ಕ್ರೀಡಾಪಟುಗಳು ಎಂದವರು ಉದಾಹರಣೆಯಾಗಿ ನೀಡಿದರು.

ಮುಖ್ಯ ಅತಿಥಿ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಭುಜಂಗ ಶೆಟ್ಟಿ ಮಾತನಾಡಿ ಬ್ರಹ್ಮಾವರ ವಲಯ ಶಾಲಾ ಫಲಿತಾಂಶ ಹಾಗು ಕ್ರೀಡೆ ಎರಡರಲ್ಲೂ ಉಡುಪಿ ಜಿಲ್ಲೆಯಲ್ಲಿ ಮಂಚೂಣಿಯಲ್ಲಿದೆ ಎಂದು ಹೇಳಿದರು.

ಶಾಲಾ ಸಂಚಾಲಕ ವಂ. ಡಾ.ಲೆಸ್ಲಿ ಡಿಸೋಜ ಶುಭ ಹಾರೈಸಿದರು. ರಾಜ್ಯ ಮಟ್ಟದ ಕ್ರೀಡಾಪಟು ನಮನ್ ಕ್ರೀಡಾ ಜ್ಯೋತಿ ಪ್ರಜ್ವಲಿಸಿದರೆ, ಸ್ವಸ್ತಿಕ್ ಎಲ್ಲಾ ಕ್ರೀಡಾಪಟುಗಳ ಪರವಾಗಿ ಕ್ರೀಡಾ ಪ್ರತಿಜ್ಞೆ ಸ್ವೀಕರಿಸಿದರು.

ಸಹಾಯಕ ಧರ್ಮಗುರು ವಂ.ಕ್ಲಾನಿ ಡಿಸೋಜ, ಮುಖ್ಯಶಿಕ್ಷಕಿ ಸಿ. ವಂದಿತಾ, ಚರ್ಚ್ ಪಾಲನ ಮಂಡಳಿ ಉಪಾಧ್ಯಕ್ಷ ಬ್ಯಾಪ್ಟಿಸ್ಟ್ ಡಾಯಸ್, ಶಿಕ್ಷಕ-ರಕ್ಷಕ ಸಂಘದ ಉಪಾಧಕ್ಷೆ ಪ್ರಮೀಳಾ ಡಿಸೋಜ ಉಪಸ್ಥಿತರಿದ್ದರು. ಶಿಕ್ಷಕಿ ವನಿತಾ ಸ್ವಾಗತಿಸಿ, ಶಿಕ್ಷಕಿ ಪ್ರೆಸಿಲ್ಲಾ, ಆಲ್ವಿನ್ ದಾಂತಿ ನಿರೂಪಿಸಿರು. ಶಿಕ್ಷಕಿ ಶೋಭ ವಂದಿಸಿದರು.

ಪೆರ್ಡೂರು ಹೋಬಳಿಯ 20 ಶಾಲೆಗಳ 210 ಕ್ರೀಡಾಪಟುಗಳು 10 ವಿಭಾಗಗಳಲ್ಲಿ ಸ್ಪರ್ಧಿಸಿದರು. ಬಾಲಕಿಯರ ವಿಭಾಗದಲ್ಲಿ ಸಂತ ಜೋಸೆಫ್ ಹಿ. ಪ್ರಾ. ಶಾಲೆ, ಬಾಲಕರ ವಿಭಾಗದಲ್ಲಿ ಮಿಲಾಗ್ರಿಸ್ ಆಂಗ್ಲ ಶಾಲೆ ತಂಡ ಪ್ರಶಸ್ತಿ ಪಡೆದರೆ ಕ್ರೀಡಾಕೂಟದ ಸಮಗ್ರ ತಂಡ ಪ್ರಶಸ್ತಿಯನ್ನು ಸಂತ ಜೋಸೆಫ್ ಹಿ. ಪ್ರಾ. ಶಾಲೆ ಕಲ್ಯಾಣಪುರ ತನ್ನ ಮುಡಿಗೇರಿಸಿಕೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News